E-Khata Update: ಈ ಜಿಲ್ಲೆಯ ಜನರು ಗಮನಿಸಬೇಕಾದ ಮಾಹಿತಿ, ಅ.7 ರಿಂದ ಇ-ಖಾತಾ ಲಭ್ಯ
ಧಾರವಾಡ, ಅಕ್ಟೋಬರ್ 02: ಕರ್ನಾಟಕದ ನಗರಾಭಿವೃದ್ಧಿ ಇಲಾಖೆಯು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶ ಸಂಯೋಜನೆ ಮಾಡಲು ಒಪ್ಪಿದೆ. ಆದ್ದರಿಂದ ತಂತ್ರಾಂಶಗಳ ಸಂಯೋಜನೆ, ಇ-ಖಾತಾ ಪಡೆಯುವ ಕುರಿತು ಅಪ್ಡೇಟ್ ಮಾಹಿತಿ ಸಿಕ್ಕಿದೆ.
ಹೌದು ಈ ಕುರಿತು ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿ ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಿಕೊಳ್ಳುವಂತೆ ಇಲಾಖೆ ನಿರ್ದೇಶಿಸಿದೆ. ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2.0 ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದೆ. ಇದರ ಸೇವೆ ನಿಮಗೆ ಅಕ್ಟೊಬರ್ 07ರಿಂದ ಲಭ್ಯವಾಗುವಂತೆ ಸರ್ಕಾರ ಆದೇಶಿಸಿದೆ ಎಂದು ಹೇಳಿದರು.

ಜಿಲ್ಲೆಯ ನಗರದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಅಕ್ಟೋಬರ್ 07ರಿಂದ ಧಾರವಾಡ ಜಿಲ್ಲಾ ವ್ಯಾಪ್ತಿಯ ಎಲ್ಲಾ ಉಪ-ನೋಂದಣಿ ಕಛೇರಿಗಳಲ್ಲಿ ಸಂಸ್ಥೆಗಳ ತಂತ್ರಾಂಶದಿಂದಲೇ (ಇ-ಖಾತಾ) ಪಡೆಯಬೇಕು ಎಂದು ಅವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಧಾರವಾಡ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ, ಖಾತಾ ತಂತ್ರಾಂಶ ವ್ಯವಸ್ಥೆ, ಸೇವೆಯನ್ನು ಜಾರಿಗೆ ತರಲಾಗಿದೆ ಎಂದರು.

ಕಾವೇರಿ ತಂತ್ರಾಂಶ ಸಂಯೋಜನೆ
2006ರಲ್ಲಿ ಕೃಷಿ ಜಮೀನಿನ ನೋಂದಣಿಗಾಗಿ 'ನೋಂದಣಿ ಮತ್ತು ಮುದ್ರಾಂಕ ಇಲಾಖೆ'ಯ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಿದೆ. ಭೂಮಿಯ (ಹೊಲದ) ಜಮೀನಿನ ಸರ್ವೇ ನಕ್ಷೆ (ಸ್ಕೆಚ್) ನಮೂನೆ 11ಇ ಇರುವ ಮೋಜಣಿ ತಂತ್ರಾಂಶದೊಂದಿಗೆ ಕಾವೇರಿ ತಂತ್ರಾಂಶವನ್ನು 2016ರ ಅಕ್ಟೋಬರ್ 05ರಂದು ಸಂಯೋಜಿಸಲಾಯಿತು.
ಇನ್ನೂ ಗ್ರಾಮ ಪಂಚಾಯತ ವ್ಯಾಪ್ತಿಯ ಕೃಷಿಯೇತರ ಸ್ವತ್ತುಗಳ ದಸ್ತಾವೇಜುಗಳ ನೋಂದಣಿ ಮಾಡಿಕೊಳ್ಳಲು ಇಲಾಖೆಯು 2014 ರಿಂದ ತಂತ್ರಾಂಶ ಸಂಜೋಜನೆ ಮಾಡಿತು. ನಗರ ಭಾಗದಲ್ಲಿ ಕೃಷಿಯೇತರ ಆಸ್ತಿಗಳಿಗೆ ಕಾರ್ಯಚಟುವಟಿಕೆಗಾಗಿ ಇ- ಆಸ್ತಿ ತಂತ್ರಾಂಶ ರೂಪಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ 2.0 ತಂತ್ರಾಂಶದೊಂದಿಗೆ ಪ್ರಾಯೋಗಿಕವಾಗಿ ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ 2020ರ ಜನವರಿಯಲ್ಲಿ ಒಟ್ಟಗೂಡಿಸಿ ಸಂಯೋಜನೆ ಮಾಡಿದೆ. ಅಲ್ಲಿಂದ ಜನರಿಂದ ಯಶಸ್ವಿ ನೋಂದಣಿ ಯಶಸ್ವಿಯಾಗಿದೆ. ಇಲ್ಲಿ ಇಖಾತಾ ಪಡೆಯಲಾಗುತ್ತಿದೆ.
ವ್ಯಾಜ್ಯ ಸೃಷ್ಟಿ, ಮೋಸ ಹೋಗುವುದು ತಪ್ಪಲಿದೆ?
ಆಸ್ತಿಗೆ ಸಂಬಂಧಿಸಿದಂತೆ ಎರಡು ತಂತ್ರಾಂಶಗಳನ್ನು ಹೀಗೆ ಸಂಯೋಜನೆ ಮಾಡುವುದರಿಂದ ಇ-ಆಸ್ತಿ ತಂತ್ರಾಂಶದಿಂದಾಗಿ ಸ್ವತ್ತುಗಳ ನೋಂದಣಿ ವೇಳೆ ಸಾರ್ವಜನಿಕರು ಮೊಸ ಹೋಗುವುದು ತಪ್ಪಲಿದೆ. ಇ-ಖಾತಾದಿಂದ ಮಾತ್ರ ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರನ್ನು ಗುರುತಿಸಲು ಕಷ್ಟವಾಗುವುದಿಲ್ಲ. ಇದೆಲ್ಲವು ಖರೀದಿ ವೇಳೆ ಮಹತ್ವದ ಪಾತ್ರ ನಿರ್ವಹಿಸುತ್ತವೆ.
ಮುಖ್ಯವಾಗಿ ಸ್ವಂತ ಆಸ್ತಿಯ ಮಾಲೀಕರಿಗೆ ವಂಚನೆ ಮಾಡಿ ಬೇರೆಯವರಿಗೆ ಸ್ವತ್ತು ನೋಂದಣಿ ಆಗುವುದಕ್ಕೆ ಇದು ಕಡಿವಾಣ ಹಾಕುತ್ತದೆ. ಈ ತಂತ್ರಾಂಶಗಳ ಸಹಾಯದಿಂದ ಆಸ್ತಿ ಖರೀದಿಸುವವರು ನೀವೆ ನೈಜ ಮಾಲೀಕರನ್ನು ಗುರುತಿಸಬಹುದಾಗಿದೆ. ಇದರಿಂದ ಮುಂದಿನ ದಿನಮಾನಗಳಲ್ಲಿ ಎದುರಾಗುವ ಕಾನೂನು ವ್ಯಾಜ್ಯಗಳನ್ನು ನಿಯಂತ್ರಿಸಿದಂತಾಗುತ್ತದೆ. ಪ್ರಾಥಮಿಕ ಹಂತದಲ್ಲಿ ವ್ಯಾಜ್ಯ ಹುಟ್ಟದಂತೆ ತಪ್ಪಿಸುವ ಉದ್ದೇಶಕ್ಕೆ ಈ ತಂತ್ರಾಂಶಗಳ ಸಂಯೋಜನೆ ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.












Click it and Unblock the Notifications