ಕೈ ತಪ್ಪಿದ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್: ತವನಪ್ಪ ಅಷ್ಟಗಿಯ ಮುಂದಿನ ನಡೆ ಏನು?, ಇಲ್ಲಿದೆ ವಿವರ
ಧಾರವಾಡ, ಏಪ್ರಿಲ್, 23: ಇನ್ನು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಎದ್ದಿರುವ ತವನಪ್ಪ ಅಷ್ಟಗಿ ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಧಾರವಾಡದಲ್ಲಿರುವ ತವನಪ್ಪ ಅಷ್ಟಗಿ ಅವರ ನಿವಾಸಕ್ಕೆ ಶಾಸಕ ಸತೀಶ್ ಜಾರಕಿಹೊಳಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭೇಟಿ ನೀಡಿ ತವನಪ್ಪ ಅಷ್ಟಗಿ ಅವರನ್ನು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತವನಪ್ಪ ಬಂಡಾಯ ಎದ್ದಿದ್ದು, ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರ ವಿರುದ್ಧವೇ ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ತವನಪ್ಪ ಅಷ್ಟಗಿ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಕೊಡುವಾಗಲೂ ಅವರ ಜೊತೆಗಿದ್ದರು. ಆಗ ಅವರು ಕಾಂಗ್ರೆಸ್ ಸೇರ್ಪಡೆ ಆಗಿರಲಿಲ್ಲ. ಇದೀಗ ನಾಮಪತ್ರ ಸಲ್ಲಿಸಿದ ನಂತರ ವಿನಯ್ ಕುಲಕರ್ಣಿ ಅವರ ಗೆಲುವಿಗೆ ಶ್ರಮಿಸುವಂತೆ ಕಾಂಗ್ರೆಸ್ ಮುಖಂಡರು ಮಾತುಕತೆ ನಡೆಸುವ ಸಾಧ್ಯತೆ ಇದೆ. ಆಶ್ಚರ್ಯವೆಂದರೆ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಕೂಡ ತವನಪ್ಪ ಅಷ್ಟಗಿ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು.
ಶೆಟ್ಟರ್‌ಗೆ ಖೆಡ್ಡಾ ತೋಡಲು ಪ್ಲಾನ್
ಇನ್ನು ಬಿಜೆಪಿ ತೊರೆದು ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೇಲೆ ಪಕ್ಷದ ವರಿಷ್ಠರು ಕೆಂಡಾಮಂಡಲ ಆಗಿದ್ದಾರೆ. ಪಕ್ಷವನ್ನು ತೊರೆದ ಮುಖಂಡನಿಗೆ ಪಾಠ ಕಲಿಸಲು ಪಣ ತೊಟ್ಟಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಶೆಟ್ಟರ್‌ಗೆ ಖೆಡ್ಡಾ ತೋಡಲು ಮುಂದಾಗಿದ್ದಾರೆ. ಹುಬ್ಬಳ್ಳಿಯಲ್ಲಿ ವರಿಷ್ಠರ ರಹಸ್ಯ ಸಭೆ ನಡೆಸಿ ಯಾವುದೇ ಕಾರಣಕ್ಕೂ ಶೆಟ್ಟರ್ ಅವರು ಗೆಲ್ಲದಂತೆ ನೋಡಿಕೊಳ್ಳಿ ಎಂದು ಇತ್ತೀಚೆಗಷ್ಟೇ ವರಿಷ್ಠರಿಗೆ ಖಡಕ್ಕಾಗಿ ಸೂಚನೆ ನೀಡಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ಬಿಜೆಪಿಯಲ್ಲಿ ಭಾರಿ ಅಲ್ಲೋಲ ಕಲ್ಲೋಲವಾಗುತ್ತಿದೆ. ಪಕ್ಷದ ಹಲವು ಹಿರಿಯ ನಾಯಕರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿರುವುದು ಸಮಸ್ಯೆಗೆ ಮೂಲ ಕಾರಣ. ಹೊಸಬರಿಗೆ ಮಣೆಹಾಕಲು ಬಿಜೆಪಿ ಬಯಸಿದ್ದರು ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಯಾವುದೇ ಮಾತುಕತೆಗೂ ಬಗ್ಗದ ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹುಬ್ಬಳ್ಳಿಯ ಅರವಿಂದ್ ಬೆಲ್ಲದ್ ನಿವಾಸದಲ್ಲಿ ವರಿಷ್ಠರ ಜೊತೆ ಇತ್ತೀಚೆಗಷ್ಟೇ ಸಭೆ ನಡೆಸಿದ್ದರು. ಈ ವೇಳೆ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ, ಪಕ್ಷದ ಮುಂದಿನ ಚಟುವಟಿಕೆಗಳ ಬಗ್ಗೆ ನಾಯಕರೊಂದಿಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದರು. ಶೆಟ್ಟರ್ ವಿಚಾರದಲ್ಲಿ ಬಿಜೆಪಿಗೆ ಭಾರಿ ಹಿನ್ನೆಡೆಯಾಗಿದ್ದು, ಅವರನ್ನು ಗೆಲ್ಲಲು ಬಿಡಬಾರದು ಎಂದು ನಡ್ಡಾ ಸೂಚನೆ ನೀಡಿದ್ದರು ಎನ್ನಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಸಚಿವ ಗೋವಿಂದ್ ಕಾರಜೋಳ, ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಜಿಲ್ಲಾಧ್ಯಕ್ಷ ಸಂಜಯ್ ಕಪಟ್ಕರ್ ಈ ಸಭೆಯಲ್ಲಿ ಹಾಜರಿದ್ದರು. ಹುಬ್ಬಳ್ಳಿ ಸೆಂಟ್ರಲ್ ಮತಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪರವಾಗಿ ನಿಂತಿದ್ದರೆ, ಬಿಜೆಪಿ ಮಹೇಶ್ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿದೆ.
ಗುರು-ಶಿಷ್ಯರ ಮುಖಾಮುಖಿ
ಜಗದೀಶ್ ಶೆಟ್ಟರ್ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರ ರಾಜಕೀಯ ಗುರು ಎಂದೇ ಹೇಳಲಾಗುತ್ತದೆ. ಬಿಎಲ್ ಸಂತೋಷ್ ಜೊತೆ ಉತ್ತಮ ಒಡನಾಟ ಹೊಂದಿದ್ದರಿಂದ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ ಎಂದು ಶೆಟ್ಟರ್ ಆರೋಪ ಮಾಡಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಇಬ್ಬರೂ ಮುಖಾಮುಖಿಯಾದ ಘಟನೆ ನಡೆದಿದೆ.
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ವೇಳೆ ಗುರು-ಶಿಷ್ಯರ ಮುಖಾಮುಖಿಯಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಜಗದೀಶ್ ಶೆಟ್ಟರ್ ಅವರ ಕಾಲಿಗ ಬಿದ್ದು ನಮಸ್ಕರಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಗೆ ಮುನ್ನ ನನ್ನ ಗುರು ಜಗದೀಶ್ ಶೆಟ್ಟರ್ ಆಶೀರ್ವಾದ ಪಡೆದುಕೊಂಡಿದ್ದೇನೆ. ಅವರ ಆಶಿರ್ವಾದ ಸಿಕ್ಕಿರೋದ್ರಿಂದ ಗೆಲುವು ಸಿಗುವ ವಿಶ್ವಾಸವಿದೆ ಎಂದರು. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋಗಿದ್ದಾರೆ, ಅವರಿಗೆ ಬಿಜೆಪಿಯ ಮತಗಳು ಬೀಳಲ್ಲ, ನಾನು ಗೆಲ್ಲುತ್ತೇನೆ ಎಂದಿದರು.












Click it and Unblock the Notifications