ಬಿಜೆಪಿ vs ಕಾಂಗ್ರೆಸ್: ರಂಗೇರಿದ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆ
ಧಾರವಾಡ, ಜುಲೈ 12: ಮೂರು ಜಿಲ್ಲೆಗಳನ್ನು ಒಳಗೊಂಡ 'ಧಾರವಾಡ ಹಾಲು ಒಕ್ಕೂಟ'ದ ನಿರ್ದೇಶಕ ಸ್ಥಾನದ ಚುನಾವಣೆ ಪೂರ್ಣಗೊಂಡು ನೂತನ ನಿರ್ದೇಶಕರು ಆಯ್ಕೆ ಆಗಿದ್ದಾರೆ. ಇದೀಗ ಅದರ ಬೆನ್ನಲ್ಲೆ ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆಯ ರಂಗೇರಿದೆ.
ಧಾರವಾಡ ಹಾಲು ಒಕ್ಕೂಟವು ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಹೊಂದಿದೆ. ಈ ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಕಳೆದ ಜೂನ್ 30 ರಂದು ಚುನಾವಣೆ ನಡೆದ ಬಿಜೆಪಿ ಬೆಂಬಲಿಗರು ಮೇಲುಗೈ ಸಾಧಿಸಿದ್ದರು. 5ನೇ ಬಾರಿಗೆ ಆಯ್ಕೆಯಾದ ಹಾಲಿ ಅಧ್ಯಕ್ಷರು, ಮಾಜಿ ಶಾಸಕ ಅಮೃತ ದೇಸಾಯಿ ಆಪ್ತರಾದ ಶಂಕರ ಮುಗದ ಅವರು ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

ಆದರೂ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಈ ದಿಸೆಯಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ ನೀಲಕಂಠ ಅಸೂಟಿ ಪ್ರಯತ್ನ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟು 09 ನಿರ್ದೇಶಕರ ಸ್ಥಾನಗಳ ಪೈಕಿ 07 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿದ್ದರೆ, ನೀಲಕಂಠ ಅಸೂಟಿ, ಹನಮಂತಗೌಡ ಹಿರೇಗೌಡರ ಮಾತ್ರ ಕಾಂಗ್ರೆಸ್ ಬೆಂಬಲಿತರು ಎಂದು ಗುರುತಿಸಿಕೊಂಡಿದ್ದಾರೆ. ಆದರೆ, ಕಳೆದ ಎರಡು ದಿನಗಳ ಹಿಂದೆ ಮಾಜಿ ಸಚಿವ, ಪ್ರಭಾವಿ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಸರ್ಕಾರದಿಂದ ನಾಮನಿರ್ದೇಶನಗೊಳಿಸಿದ್ದು ಇದೀಗ ಒಕ್ಕೂಟದ ಚುನಾವಣೆ ವಿಷಯದಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ಅಧ್ಯಕ್ಷ ಸ್ಥಾನದ ಎಷ್ಟು ಬಲಾಬಲ, ವಿವರ
ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಬರೀ 09 ಜನ ಮತದಾರರು ಅಲ್ಲದೇ, ನಾಮನಿರ್ದೇಶಿತ ಸದಸ್ಯರೊಬ್ಬರು ಹಾಗೂ 04 ಅಧಿಕಾರಿಗಳು (ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು, ಕೆಎಂಎಫ್ ಅಧಿಕಾರಿ, ಎನ್‌ಡಿಡಿಬಿ ಅಧಿಕಾರಿ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ) ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಮತ ಚಲಾವಣೆಯ ಅಧಿಕಾರ ಹೊಂದಿದ್ದಾರೆ.

ಬಿಜೆಪಿಗೆ ಚುನಾಯಿತ 07 ಸದಸ್ಯರು ಮತ್ತು ಎನ್‌ಡಿಡಿಬಿ ಅಧಿಕಾರಿ ಸೇರಿ ಒಟ್ಟು 08 ಸದಸ್ಯರ ಸಂಖ್ಯಾಬಲ ಪಡೆಯಲಿದೆ. ಆದರೆ, ಶಿವಲೀಲಾ ಕುಲಕರ್ಣಿ ಸೇರಿ ಕಾಂಗ್ರೆಸ್ ಬೆಂಬಲಿತ ಮೂವರು ಸದಸ್ಯರಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಮೂವರು ಅಧಿಕಾರಿಗಳು (ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು, ಕೆಎಂಎಫ್ ಅಧಿಕಾರಿ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ) ಸೇರಿದರೆ ಆರು ಸದಸ್ಯರ ಬಲ ಸಿಗಲಿದೆ.
ಅಧ್ಯಕ್ಷ ಸ್ಥಾನ ಗೆಲ್ಲಲು ಸಚಿವ ಲಾಡ್ ಕಾರ್ಯತಂತ್ರ
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಇನ್ನೂ ಎರಡು ಸದಸ್ಯರನ್ನು ಒಲೈಸಬೇಕು. ಇದು ಕಷ್ಟಸಾಧ್ಯವಾದರೂ ಅಸೂಟಿ ಪ್ರಯತ್ನದಲ್ಲಿದ್ದಾರೆ. ಜೊತೆಗೆ ಸಚಿವ ಸಂತೋಷ ಲಾಡ್ ಸಹ ಶುಕ್ರವಾರ ಧಾರವಾಡಕ್ಕೆ ಬರಲಿದ್ದು, ಯಾವ ಯೋಜನೆ ರೂಪಿಸಲಿದ್ದಾರೆ ಕಾದು ನೋಡಬೇಕಿದೆ.
ಬಿಜೆಪಿ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಶಂಕರ ಮುಗದ ಅವರನ್ನೇ ಈ ಬಾರಿಯೂ ಅಧ್ಯಕ್ಷ ಗಾದಿಗೆ ಕೂರಿಸುವ ತೀರ್ಮಾನ ಮಾಡಿದ್ದು ಅವರೊಬ್ಬರೇ ನಾಮಪತ್ರ ಸಲ್ಲಿಸಲಿದ್ದಾರೆ. ಒಂದೇ ನಾಮಪತ್ರ ಸಲ್ಲಿಕೆಯಾದರೆ ಅವಿರೋಧ ಆಯ್ಕೆಯಾಗಲಿದೆ. ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರ ವರೆಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಮಯವಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ.ವೀರೇಶ ತರ್ಲಿ ಸಿಟಿ ಹೈಲೇಟ್ ಪತ್ರಿಕೆಗೆ ಮಾಹಿತಿ ನೀಡಿದರು.












Click it and Unblock the Notifications