Pralhad Joshi: ಧಾರವಾಡ ಅಭ್ಯರ್ಥಿ ಮುಂದಿರುವ ಸವಾಲುಗಳೇನು?
ಬೆಂಗಳೂರು, ಮಾರ್ಚ್ 14: ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಪ್ರಹ್ಲಾದ್ ಜೋಶಿಯವರ ಧಾರವಾಡ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಬಗ್ಗೆ ಗೊಂದಲ ಉಂಟಾಗಿದ್ದವು. ಲಿಂಗಾಯತ ವಿರೋಧಿ ಎಂಬಂತೆ ಅವರನ್ನು ಗುರುತಿಸುವ ಕೆಲಸವಾಗಿತ್ತು. ಇದೀಗ ಜೋಶಿಯವರೇ ಟಿಕೆಟ್ ಸಿಕ್ಕಿದೆ. ಆದರೆ ಅವರ ಮುಂದೆ ದೊಡ್ಡ ಸವಾಲಿದೆ.
ಈ ಬಾರಿ ಪ್ರಹ್ಲಾದ್ ಜೋಶಿಯವರಿಗೆ ಟಿಕೆಟ್ ತಪ್ಪಿಸಲು ಸಾಕಷ್ಟು ಲಾಭಿ, ಕಸರತ್ತುಗಳು ತೆರೆಮರೆಯಲ್ಲಿ ನಡೆದಿದ್ದವು. ಸತತವಾಗಿ ಕ್ಷೇತ್ರ ಗೆದ್ದ ಹಾಲಿ ಸಂಸದರಿದ್ದರು ಪಕ್ಷದ ಒಳೊಳಗೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳದಿತ್ತು. ಬ್ರಾಹ್ಮಣ ಸಮುದಾಯದ ನಾಯಕರಾದ ಪ್ರಹ್ಲಾದ್ ಜೋಶಿಯವರನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಸರ್ವ ಪ್ರಯತ್ನಗಳು ನಡೆದಿದ್ದವು. ಹೀಗಾಗಿ ಜೋಶಿಯವರಿಗೆ ಈ ಬಾರಿ ಉತ್ತರ ಕನ್ನಡ ಟಿಕೆಟ್ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಕೊನೆಗೆ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಧಾರವಾಡ ಕ್ಷೇತ್ರ ಗಿಟ್ಟಿಸಿಕೊಳ್ಳುಲ್ಲಿ ಪ್ರಹ್ಲಾದ್ ಜೋಶಿಯವರು ಸಫಲರಾಗಿದರು. ಕ್ಷೇತ್ರದಲ್ಲಿ ಎಲ್ಲರನ್ನು ಸಮಾನರಾಗಿ ಕಂಡು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾದ ಸವಾಲು ಅವರ ಮುಂದಿದೆ.
ಸವಾಲುಗಳ ಮಧ್ಯೆ ಚುನಾವಣೆಗೆ ತಯಾರಿ
ಏಕೆಂದರೆ ಕಳೆದ ಬಾರಿಗಿಂತಲೂ ಈ ಬಾರಿ ಅವರ ವಿರುದ್ಧದ ಗುಂಪು ತುಸು ದೊಡ್ಡದಾಗಿದೆ. ಹೀಗಾಗಿ ಅವರು ಎಲ್ಲವನ್ನು ನಿರ್ವಹಿಸಿ, ಕ್ಷೇತ್ರ ಗೆಲ್ಲವು ಮೂಲಕ ಕೇಂದ್ರ ಟಿಕೆಟ್ ಆಯ್ಕೆ ನಿರ್ಣಯ ಸರಿಯಾಗಿದೆ ಎಂದು ಸಾಬೀತು ಮಾಡಬೇಕಿದೆ. ಇದೆಲ್ಲ ಸವಾಲುಗಳ ಮಧ್ಯೆ ಅವರು ಲೋಕಸಭಾ ಚುನಾವಣೆಗೆ ತಯಾರಿ ನಡೆಸಬೇಕಿದೆ.

2024ರಲ್ಲಿ ಧಾರವಾಡದಿಂದ ಪ್ರಹ್ಲಾದ್ ಜೋಶಿಯವರು ಐದನೇ ಬಾರಿಗೆ ಲೋಕಸಭೆ ಸ್ಪರ್ಧಿಸುತ್ತಿದ್ದಾರೆ. ಕಳೆದ ಸಲ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದ ಕಾರಣ ಜಗದೀಶ ಶೆಟ್ಟರ್ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿದ್ದರು. ಇತ್ತೀಚೆಗೆ ಅವರು ಬಿಜೆಪಿಗೆ ಮರಳಿ, ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಸರತ್ತು ನಡೆಸಿದ್ದರು.
ಮುಳುವಾಗಲಿಲ್ಲ ಲಿಂಗಾಯತ ಟಿಕೆಟ್ ತಂತ್ರ
ಸಾಲದೆಂಬಂತೆ ಧಾರವಾಡವನ್ನು ಈ ಬಾರಿ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಧಾರವಾಡ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟವಾಗಿರಲಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬ ಕುತೂಹಲ ಸಹಜವಾಗೇ ಮನೆ ಮಾಡಿತ್ತು.
ಪುನರ್ ವಿಂಗಡಣೆಗೆ ಮೊದಲು 2004ರಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಮೊದಲ ಸಲ ಪ್ರಹ್ಲಾದ್ ಜೋಶಿ ಸ್ಪರ್ಧಿಸಿದ್ದರು. ಇದಕ್ಕೂ ಮುಂಚೆ ವಿಜಯ ಸಂಕೇಶ್ವರ 1996, 1998 ,1990 ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ನಂತರ 2004ರಲ್ಲಿ ಬಿಜೆಪಿಯು ಜೋಶಿ ಅವರಿಗೆ ಅವಕಾಶ ದೊರೆಯಿತು.
2004 ರಿಂದ ಧಾರವಾಡದಲ್ಲಿ ಜೋಶಿ ಕಿಂಗ್
ಅಲ್ಲಿಂದ ಸತತ ನಾಲ್ಕು (2004-2019) ಚುನಾವಣೆಗಳಲ್ಲಿ ಪ್ರಹ್ಲಾದ್ ಜೋಶಿ ಅವರು ಪ್ರಚಂಡ ಜಯಗಳಿಸುತ್ತಲೆ ಬಂದಿದ್ದು, ಇದೀಗ ಐದನೇ ಬಾರಿಗೆ ಅಣಿಯಾಗಿದ್ದಾರೆ. ಪ್ರತಿ ಚುನಾವಣೆಯಲ್ಲೂ ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದ್ದಾರೆ. ಕಳೆದ 2019ರ ಚುನಾವಣೆಯಲ್ಲಿ 6.84 ಲಕ್ಷ ಮತ ಪಡೆದಿದ್ದ ಅವರು, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಅವರಿಗಿಂತ 2.05 ಲಕ್ಷಕ್ಕಿಂತ ಹೆಚ್ಚು ಮತ ಪಡೆದು ಸಂಸತ್ತಿಗೆ ಆಯ್ಕೆಯಾದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳಾದ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಐದು ವರ್ಷ ಪೂರ್ಣಾವಧಿಯವರೆಗೆ ಸಮರ್ಥವಾಗಿ ನಿರ್ವಹಿಸಿದ್ದಾರೆ.
ಈದ್ಗಾ ಮೈದಾನ ಹೋರಾಟ: ಮುಂಚೂಣಿ ನಾಯಕ
ಆರ್‌ಎಸ್‌ಎಸ್ ಹಿನ್ನೆಲೆವುಳ್ಳ ಪ್ರಹ್ಲಾದ್ ಜೋಶಿಯವರು ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟದಲ್ಲಿ ಮುಂಚೂಣಿಯ ನಾಯಕರು ಎನಿಸಿಕೊಂಡಿದ್ದಾರೆ. ಅವರು ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2012ರಿಂದ ನಾಲ್ಕು ವರ್ಷ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಅವರು ಮುಂದಿನ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸಲಿದ್ದಾರೆ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications