Jowar-Paddy: ರೈತರಿಗೆ ಸಿಹಿ ಸುದ್ದಿ: ಬೆಂಬಲ ಬೆಲೆ ಸಹಿತ ಭತ್ತ-ಬಿಳಿಜೋಳ ಖರೀದಿ ಕೇಂದ್ರ ಆರಂಭ, ರೈತರಿಗೆ ನೋಂದಣಿಗೆ ಸೂಚನೆ
ಧಾರವಾಡ, ನವೆಂಬರ್ 28: ಧಾರವಾಡ ಜಿಲ್ಲಾ ವ್ಯಾಪ್ತಿಯ ರೈತರಿಗೆ ಜಿಲ್ಲಾಧಿಕಾರಿಗಳು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್‍ಎಕ್ಯೂ ಗುಣಮಟ್ಟದ ಭತ್ತ, ಬಿಳಿಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಖರೀದಿ ಪ್ರಮಾಣ, ಕೇಂದ್ರಗಳು ಎಲ್ಲಿ, ಮಾರ್ಗಸೂಚಿಗಳೇನು ಎಂಬ ಮಾಹಿತಿ ಮುಂದೆ ತಿಳಿಯಿರಿ.
ಭತ್ತ ಖರೀದಿಗಾಗಿ ಅಳ್ನಾವರ, ಕಲಘಟಗಿ ತಾಲೂಕುಗಳಲ್ಲಿ ಹಾಗೂ ಬಿಳಿಜೋಳ ಖರೀದಿಗೆ ಧಾರವಾಡ, ಹುಬ್ಬಳ್ಳಿ ತಾಲೂಕಿನ ಕೇಂದ್ರಗಳನ್ನು ಆರಂಭಿಸಿದ್ದು, ಸದರಿ ತಾಲ್ಲೂಕುಗಳ ಸುತ್ತಮುತ್ತಲೂ ಭತ್ತ, ಬಿಳಿಜೋಳ ಮತ್ತು ರಾಗಿ ಬೆಳೆದ ರೈತರು ತಮ್ಮ ವ್ಯಾಪ್ತಿಗೆ ಬರುವ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಬೇಕು. ಪ್ರಸಕ್ತ 2023-24ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ಬಿಳಿಜೋಳ ಮತ್ತು ರಾಗಿ ಖರೀದಿ ಕೇಂದ್ರ ಆರಂಭಿಸಲಾಗಿದೆ.

ಭತ್ತ-ಬಿಳಿಜೋಳ ಖರೀದಿಗೆ ಮಾರ್ಗಸೂಚಿಗಳು
ಸರ್ಕಾರದಿಂದ ನೇಮಿಸಲ್ಪಟ್ಟ ಸಂಗ್ರಹಣಾ ಏಜೆನ್ಸಿಗಳು ಭತ್ತ ಖರೀದಿ ಹಂತದಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ವಯ ಎಫ್‍ಎಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಈ ಕೆಳಗಿನಂತೆ ಕ್ರಮ ವಹಿಸಬೇಕು.
ರೈತರಿಂದ ಭತ್ತವನ್ನು ಖರೀದಿಸಲು ತೆರೆಯಲಾಗಿರುವ ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆ ವತಿಯಿಂದ ಗ್ರೇಡರ್‍ಗಳನ್ನು ನೇಮಿಸಬೇಕು. ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ತಮ್ಮ ಸಂಸ್ಥೆಗೆ ವಹಿಸಿರುವ ಜಿಲ್ಲೆಗಳಲ್ಲಿನ ಕಾರ್ಯಪ್ರಗತಿ ಬಗ್ಗೆ ಆಗ್ಗಿಂದಾಗ್ಗೆ ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಭತ್ತವನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಏಕರೆಗೆ 25 ಕ್ವಿಂಟಲ್‍ನಂತೆ ಗರಿಷ್ಟ 40 ಕ್ವಿಂಟಲ್ ಮೀರದಂತೆ ಖರೀದಿಸತಕ್ಕದ್ದು ಎಂಬ ಸೂಚನೆ ಪಾಲಿಸಬೇಕು.
ಹಲ್ಲಿಂಗ್ ಆಗದಿದ್ದರೆ ಪಕ್ಕದ ಜಿಲ್ಲೆಗೆ ಹೋಗಿ
ಸರ್ಕಾರವು ನಿಗದಿಪಡಿಸಿರುವ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ಭತ್ತವನ್ನು ಖರೀದಿಸುವಂತಿಲ್ಲ. ಯಾವುದೇ ಜಿಲ್ಲೆ, ತಾಲ್ಲೂಕಿನಲ್ಲಿ ಭತ್ತದ ಹಲ್ಲಿಂಗ್ ಕಾರ್ಯವನ್ನು ಕೈಗೊಳ್ಳಲು ಅಕ್ಕಿ ಗಿರಣಿಗಳು ನೊಂದಾಯಿಸಿಕೊಳ್ಳದಿದ್ದಲ್ಲಿ, ಸದರಿ ಜಿಲ್ಲೆಯಲ್ಲಿ ಸಂಗ್ರಹಿಸಿದ ಭತ್ತವನ್ನು ಪಕ್ಕದ ಜಿಲ್ಲೆಯ ನೊಂದಾಯಿತ ಅಕ್ಕಿ ಗಿರಣಿಗಳಿಗೆ ಸಾಗಿಸಬೇಕು. ಅಲ್ಲಿ ಭತ್ತದ ಹಲ್ಲಿಂಗ್ ಹಾಗೂ ಸಾರವರ್ಧಿತ ಕಾರ್ಯವನ್ನು ಕೈಗೊಳ್ಳಲು ಕ್ರಮ ವಹಿಸಬೇಕು.
ಭತ್ತವನ್ನು ಸರಬರಾಜು ಮಾಡಿದ ರೈತರಿಗೆ 15 ದಿನದೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮುಖಾಂತರ ಮಾಡತಕ್ಕದ್ದು. ಸರ್ಕಾರದಿಂದ ನೇಮಿಸಲ್ಪಟ್ಟ ಸಂಗ್ರಹಣಾ ಏಜೆನ್ಸಿಗಳು ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡಗಳನ್ವಯ ಬಿಳಿಜೋಳದ ಖರೀದಿ ಹಚಿತದಲ್ಲಿ ಎಫ್‍ಎಕ್ಯೂ ಗುಣಮಟ್ಟವನ್ನು ದೃಢೀಕರಿಸಲು ಕ್ರಮ ವಹಿಸಬೇಕು ಎಂದು ಸರ್ಕಾರ ಹೇಳಿದೆ.
ಅಲ್ಪಾವಧಿ ಟೆಂಡರ್ ಕರೆಯಿರಿ
ರೈತರಿಂದ ಬಿಳಿಜೋಳ ಖರೀದಿಸಲು ತೆರೆಯಲಾಗಿರುವ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆ ವತಿಯಿಂದ ಗ್ರೇಡರ್‍ಗಳನ್ನು ನೇಮಿಸಬೇಕು. ಪ್ರತಿ ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯ ಗ್ರೇಡರ್‍ಳೊಂದಿಗೆ ಆಹಾರಧಾನ್ಯಗಳ ಗುಣಮಟ್ಟವನ್ನು ಜಂಟಿಯಾಗಿ ದೃಢೀಕರಿಸಲು ಮೂರನೇ ವ್ಯಕ್ತಿ ಗುಣಮಟ್ಟ ಪರೀಕ್ಷರನ್ನು ನೇಮಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವು ಖರೀದಿ ಏಜೆನ್ಸಿಗಳ ಪರವಾಗಿ ಅಲ್ಪಾವಧಿ ಟೆಂಡರ್ ಕರೆಯಬೇಕು.

ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ತಮ್ಮ ಸಂಸ್ಥೆಗೆ ವಹಿಸಿರುವ ಜಿಲ್ಲೆಗಳಲ್ಲಿ ಕಾರ್ಯ ಪ್ರಗತಿ ಬಗ್ಗೆ ಆಗಾಗ ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಜೋಳ ಸಂಗ್ರಹಣೆಗೆ ಅಗತ್ಯವಿರುವ ಗೋಣಿ ಚೀಲಗಳನ್ನು 2022-23ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಆಹಾರಧಾನ್ಯ ಸಂಗ್ರಹಣೆಗೆ ಬಳಸಿಕೊಂಡು ಬಾಕಿ ಉಳಿದ ಗೋಣಿ ಚೀಲಗಳನ್ನು ಜೋಳ ಸಂಗ್ರಹಣೆಗೆ ಉಪಯೋಗಿಸಿಕೊಳ್ಳಬೇಕು.
ಹೆಚ್ಚುವರಿ ಧಾನ್ಯ ಖರೀದಿಸದಂತೆ ಸೂಚನೆ
ಪ್ರತಿ ರೈತರಿಂದ ಬಿಳಿಜೋಳವನ್ನು ಉತ್ಪಾದನೆ ಅನುಗುಣವಾಗಿ ಪ್ರತಿ ಏಕರೆಗೆ 10 ಕ್ವಿಂಟಲ್‍ನಂತೆ ಎಲ್ಲಾ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ಖರೀದಿಸುವುದು. ಸರ್ಕಾರ ನಿಗದಿಪಡಿಸಿರುವ ಪ್ರಮಾಣವನ್ನು ಮೀರಿ ಹೆಚ್ಚುವರಿಯಾಗಿ ಬಿಳಿಜೋಳವನ್ನು ಖರೀದಿಸುವಂತಿಲ್ಲ.
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅನುಷ್ಠಾನದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ರಾಜ್ಯಮಟ್ಟದ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ನೇಮಿಸಲಾಗಿರುತ್ತದೆ.
ಆಹಾರ ಧಾನ್ಯದ ವಿಧಗಳ ಮಾಹಿತಿ
ಭತ್ತ (ಸಾಮಾನ್ಯ) -2,500ರೂ. ಭತ್ತ (ಗ್ರೇಡ್ ಎ)-2,800 ರೂ, ಬಿಳಿಜೋಳ ಹೈಬ್ರಿಡ್-3,180 ರೂ, ಬಿಳಿಜೋಳ ಮಾಲ್ಡಂಡಿ -3,225 ರೂ.ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಲು ಸರ್ಕಾರ ನಿರ್ಧರಿಸಿದೆ.
ರಾಗಿಯ ಬೆಳೆ ಹೊರತಾಗಿ ಜಿಲ್ಲೆಯ ರೈತರು ತಾವು ಬೆಳೆದ ಭತ್ತ ಮತ್ತು ಬಿಳಿಜೋಳವನ್ನು ಇದೇ ಡಿಸೆಂಬರ್ 01 ರಿಂದ ಮುಂದಿನ ವರ್ಷ 2024ರ ಮಾರ್ಚ್ 31ರೊಳಗಾಗಿ ಈಗಾಗಲೇ ಸ್ಥಾಪಿಸಲಾದ ಖರೀದಿ ಕೇಂದ್ರಗಳಿಗೆ ಒದಗಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಖರೀದಿ ಕೇಂದ್ರಗಳಿಗೆ ಬೇಟಿ ನೀಡುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications