ಬೋರ್‌ವೆಲ್ ನೀರು ಹಳ್ಳಕ್ಕೆ ಹರಿಸಿ ಮೂಕ ಪ್ರಾಣಿಗಳ ದಾಹ ತೀರಿಸುತ್ತಿರುವ ರೈತ
ಹುಬ್ಬಳ್ಳಿ, ಏಪ್ರಿಲ್ 07: ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿಗೆ ತಾತ್ವಾರ ಎದುರಾಗಿದೆ. ಬಿಡು ಬೇಸಿಗೆಗೆ ಮನುಷ್ಯರೇ ಒಡ್ಡಾಡುವ ಸಮಯದಲ್ಲಿ ಪ್ರಾಣಿ, ಪಕ್ಷಿಗಳ ಪರಿಸ್ಥಿತಿ ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ ರೈತರೊಬ್ಬರು ಪ್ರಾಣಿಗಳಿಗಾಗಿ ಬೋರ್ ವೆಲ್ ನೀರು ಹರಿಸುವ ಮೂಲಕ ಮೂಕ ಜೀವಿಗಳಿಗೆ ಆಸರೆಯಾಗಿದ್ದಾರೆ.
ಅವಳಿ ನಗರ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲೂ ನೀರು ಪೂರೈಕೆಯಲ್ಲಿ ಕೆಲವೆಡೆ ಸಮಸ್ಯೆ ಆಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸಮರ್ಪಕ ನೀರಿಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ಮನುಷ್ಯನಂತೆ ಪ್ರಾಣಿಗಳು ಬೇಸಿಗೆಯ ಸಂದರ್ಭದಲ್ಲಿ ನೀರಿಲ್ಲದೇ ಮೂಕವೇದನೆ ಅನುಭವಿಸುತ್ತಿವೆ. ಇದನ್ನು ಕಂಡ ರೈತರೊಬ್ಬರು ನೀರು ಹರಿಸಿ ಪ್ರಾಣಿಗಳಿಗೆ ಆಸರೆಯಾಗಿದ್ದಾರೆ.

ಪ್ರಾಣಿಗಳು ನೀರಿಗಾಗಿ ಹಪಾಹಪಿಸುತ್ತಿರುವುದನ್ನು ನೋಡಲಾರದೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಸಳಿಕಟ್ಟಿ ಗ್ರಾಮದ ರೈತ ಗೋವಿಂದ ಗುಂಡಕಲ್ ಅವರು ಬೋರ್ ಬೆಲ್ ಮೂಲಕ ಬತ್ತಿ ಹೋಗಿದ್ದ ಹಳ್ಳಕ್ಕೆ ನೀರು ತುಂಬಿಸಿದ್ದಾರೆ. ಹಳ್ಳಕ್ಕೆ ನೀರು ಹರಿಸಿ ಪ್ರಾಣಿಗಳ ದಾಹ ತೀರಿಸಲು ಮುಂದಾಗಿದ್ದಾರೆ.
ವನ್ಯಜೀವಿಗಳಿಗೆ ನೀರು ಹರಿಸಿ ಮಾನವೀಯತೆ
ರೈತ ಗೋವಿಂದ ಗುಂಡಕಲ್ ಅವರು ಸರಿಸುಮಾರು ಮೂರು ವರ್ಷದಿಂದ ಬರಗಾಲದ ಸಂದರ್ಭದಲ್ಲಿ ಕಾಡಿನ ವನ್ಯಜೀವಿಗಳಿಗೆ ಜಾನುವಾರುಗಳಿಗೆ ಪ್ರಾಣಿ ಪಕ್ಷಿ ಸಂಕುಲಕ್ಕೆ ಬತ್ತಿ ಹೋದ ಹಳ್ಳಕ್ಕೆ ನೀರು ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯ ಇತರರಿಗೂ ಮಾದರಿಯಾಗಿದೆ.
ರಣಬಿಸಿಲಿನ ತಾಪಕ್ಕೆ ತನ್ನ ಜಮೀನಿನಲ್ಲಿರುವ ಕೊಳವೆ ಬಾವಿಯ ಮುಖಾಂತರ ಪ್ರತಿನಿತ್ಯ ನೀರು ಹಾಯಿಸುತ್ತಿರುವ ರೈತ ಗೋವಿಂದ ಗುಂಡುಕಲ್ ಅವರು ಕೃಷಿ ಜಮೀನಿನಲ್ಲಿ ಜೀವನ ನಡೆಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಬರಗಾಲದಲ್ಲಿ ಹೆಚ್ಚಾಗಿರುವ ಈ ರಣಬಿಸಿಲಿಗೆ ಪ್ರಾಣಿಗಳ ವೇದನೆ ಅರ್ಥೈಸಿಕೊಂಡಿದ್ದಾರೆ.
ಜಮೀನಿಗೆ ನಿರಿಲ್ಲದಿದ್ದರೂ ಪ್ರಾಣಿಗಳಿಗೆ ಆಸರೆ
ಇವರು ತಮ್ಮ ಜಮೀನಿಗೆ ನೀರು ಇಲ್ಲದಿದ್ದರೂ ಪರವಾಗಿಲ್ಲ ಆದರೆ ಮೂಕ ಪ್ರಾಣಿಗಳಿಗೆ ಕುಡಿಯಲು ನೀರು ಕೊಟ್ಟು ದಾಹ ನೀಗಿಸಿದ್ದಾರೆ. ರೈತ ಗೋವಿಂದ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಮಾನವೀಯ ಕಾರ್ಯಕ್ಕೆ ತಾಲೂಕಿನ ವಿವಿಧ ಅಧಿಕಾರಿಗಳು ಮುಂದಾಗಬೇಕಾಗಿದೆ.

ಬೋರ್‌ವೆಲ್ ಪೈಪ್ ಮೂಲಕ ಹಳ್ಳಕ್ಕೆ ನೀರು
ಪ್ರತಿಯೊಬ್ಬ ಜೀವಿಯಲ್ಲೂ ಒಳ್ಳೆಯ ಭಾವನೆ ಇರುವುದಕ್ಕೆ ಗೋವಿಂದ ಗುಂಡಕಲ್ಲು ಅವರು ಸಾಕ್ಷಿಯಾಗಿದ್ದಾರೆ. ಕಾಡಿನ ವನ್ಯಜೀವಿ ಪಶು-ಪಕ್ಷಿ ದಾಹವನ್ನು ನೀಗಿಸುತ್ತಿರುವ ರೈತ ಈ ಬರಗಾಲದ ಪರಿಸ್ಥಿತಿ ಇರುವುದರಿಂದ ಕಾಡಿನಂಚಿನಲ್ಲಿರುವ ಈ ರೈತನ ಜಮೀನಿನ ಪಕ್ಕದ ಹಳ್ಳಕ್ಕೆ ಪ್ರತಿನಿತ್ಯ ಕೊಳವೆಬಾವಿ ಪೈಪ್ ಮುಖಾಂತರ ನೀರು ಬಿಡುತ್ತಿರುವುದು ಈ ಕಾರ್ಯ ಮೆಚ್ಚಿಕೊಳ್ಳುವಂತದ್ದು ಎಂದು ಸ್ಥಳೀಯರು ಹೇಳಿದ್ದಾರೆ.
ಸಮರ್ಪಕ ವಿದ್ಯುತ್ ಪೂರೈಸಲು ಒತ್ತಾಯ
ಪ್ರಾಣಿ ಪಕ್ಷಿಗಳಿಗೆ ನೀರಿನ ಆಸರೆಯಾಗುವುದು ನಮಗೆ ತೃಪ್ತಿ ತಂದಿದೆ. ಒಂದು ಹೊತ್ತು ಊಟ ಇಲ್ಲದಿದ್ದರೂ ಪರವಾಗಿಲ್ಲ ಜೀವನ ನಡೆಯುತ್ತೆ. ಪ್ರತಿ ಕ್ಷಣದಲ್ಲೂ ನೀರು ಸಕಲ ಜೀವಿಗಳಿಗೆ ಅವಶ್ಯವಾಗಿದೆ. ಪ್ರಾಣಿ ಸಂಕುಲಗಳು ಸಂತೋಷಪಟ್ಟರೆ ಅದೇ ನಮಗೆ ಸಂತೋಷ ಎನ್ನುತ್ತಾರೆ ರೈತ ಗೊವಿಂದ್ ಗುಂಡುಕಲ್ ಪುತ್ರ ಮಾರುತಿ ಗುಂಡುಕಲ್.
ವಿದ್ಯುತ್ ಇಲ್ಲದಿರುವುದರಿಂದ ಕೊಳವೆ ಬಾವಿ ಸ್ಥಗಿತಗೊಂಡಿತ್ತು. ಕಾಡಿನಂಚಿನಲ್ಲಿರುವ ಜಮೀನುಗಳಿಗೆ ನಿರಂತರವಾಗಿ ವಿದ್ಯುತ್ ನೀಡಬೇಕು. ಈ ಬರಗಾಲದ ಸಂದರ್ಭದಲ್ಲಿ ನೀರಿನ ಭವಣೆ ನೀಗಿಸಲು ತಾಲೂಕಿನ ಎಲ್ಲಾ ಅಧಿಕಾರಿ ವರ್ಗದವರು ಮುಂದಾಗಬೇಕಾಗಿದೆ. ವನ್ಯಜೀವಿ ಪ್ರಾಣಿ ಸಂಕುಲಕ್ಕೆ ಅರಣ್ಯದಲ್ಲಿ ಹಳ್ಳ ಕೊಳ್ಳ ಬತ್ತಿರುವುದರಿಂದ ವಿಶೇಷ ಕಾರ್ಯಾಚರಣೆ ಮಾಡಲು ಅಧಿಕಾರಿ ವರ್ಗ ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications