ಧಾರವಾಡದಲ್ಲಿ ಬಿಜೆಪಿಗೆ ಮತ್ತೆ ಹೊಡೆತ: ಬಂಡಾಯ ನಾಯಕ ಕಾಂಗ್ರೆಸ್ ಸೇರ್ಪಡೆ, ವಿನಯ್ ಕುಲಕರ್ಣಿಗೆ ರಿಲೀಫ್
ಧಾರವಾಡ, ಏಪ್ರಿಲ್ 23: ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೆ ಇಂದು ಅದೇ ಭಾಗದ ಮತ್ತೊಬ್ಬ ಬಿಜೆಪಿ ಪ್ರಬಲ ನಾಯಕರೊಬ್ಬರು 'ಕೈ' ಪಡೆ ಸೇರಿದ್ದಾರೆ. ಇದರಿಂದಾಗಿ ಕೇಸರಿ ಪಡೆಗೆ ಮತ್ತೊಂದು ಹೊಡೆದ ಬಿದ್ದಂತಾಗಿದೆ.
ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಸೂಕ್ಷ್ಮ ತಂತ್ರಗಾರಿಕೆ ಮೂಲಕ ಸೆಣೆಸುತ್ತಿದೆ ಎನ್ನಲಾಗುತ್ತಿದೆ. ಅದರ ಭಾಗವಾಗೇ ಧಾರವಾಡದ ಬಿಜೆಪಿ ಬಂಡಾಯ ಅಭ್ಯರ್ಥಿಯಾದ ಬಿಜೆಪಿಯ ಮತ್ತೋರ್ವ ನಾಯಕ 'ತವಣಪ್ಪ ಅಷ್ಟಗಿ' ಅವರನ್ನು ಕಾಂಗ್ರೆಸ್ ತನ್ನತ್ತ ಸೆಳೆದುಕೊಳ್ಳವಲ್ಲಿ ಜಯ ಸಾಧಿಸಿದೆ.

ಬಿಜೆಪಿಯ 'ತವಣಪ್ಪ ಅಷ್ಟಗಿ' ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಭಾನುವಾರ ಕಾಂಗ್ರೆಸ್ ಸೇರ್ಪಡೆಯಾದರು. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿನಯ್ ಕುಲಕರ್ಣಿಗೆ ಉಂಟಾಗಿದ್ದ ಸಂಕಷ್ಟವೊಂದು ಬಗೆಹರಿದಿದ್ದು, ಅವರಿಗೆ ಕೊಂಚ ನೆಮ್ಮದಿ ಧಕ್ಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಕ್ಷೇತರವಾಗಿ ಸಲ್ಲಿಸಿದ್ದ ನಾಮಪತ್ರ ವಾಪಸ್
ಧಾರವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದದ್ದ ತವಣಪ್ಪ ಅಷ್ಟಗಿ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿತು. ಹೀಗಾಗಿ ಬಂಡಾಯವೆದ್ದಿದ್ದ ತವಣಪ್ಪ ಅಷ್ಟಗಿ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು. ಇದಾದ ಬಳಿಕ ಬೆಳಗಾವಿಯಲ್ಲಿ ವಿನಯ್ ಕುಲಕರ್ಣಿ ಹಾಗೂ ಅಷ್ಟಗಿ ಅವರು ಮಾತುಕತೆ ನಡೆಸಿದ ನಂತರ ನಾಮಪತ್ರ ಹಿಂಪಡೆದು ಕಾಂಗ್ರೆಸ್ ಸೇರಲು ಒಪ್ಪಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ಎಚ್ಚರಿಕೆ ಹೆಜ್ಜೆಯಿಂದಾಗಿ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ಕೋರ್ಟ್ ಅನುಮತಿಸಿಲ್ಲ. ಇದೆಲ್ಲರ ಮಧ್ಯೆ ತವಣಪ್ಪನ ಕಾಂಗ್ರೆಸ್ ಸೇರ್ಪಡೆ ಮಾಜಿ ಸಚಿವರಿಗೆ ತುಸು ರಿಲೀಫ್ ನೀಡಿದೆ ಎನ್ನಲಾಗಿದೆ.

ಕಾರ್ಯಕರ್ತರ ಕಡೆಗಣೆಗೆ ತವಣಪ್ಪ ಬೇಸರ
ಕಾಂಗ್ರೆಸ್ ಸೇರ್ಪಡೆಗೊಂಡು ಸುದ್ದಿಗಾರರ ಜೊತೆಗೆ ಮಾತನಾಡಿದ ತವಣಪ್ಪ ಅವರು, ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ದೊರಕಲಿಲ್ಲ. ಬಿಜೆಪಿ ಶಾಸಕ ಅಮೃತ ದೇಸಾಯಿ ಅವರಿಗೆ ಮಣೆ ಹಾಕಿದೆ. ಆರು ಸಲ ಸೋತವರನ್ನು ನಾವು ಶಾಸಕರನ್ನಾಗಿ ಮಾಡಿದ್ದೆವು, ಅದಕ್ಕಾಗಿ ಕಾರ್ಯಕರ್ತರು ನಾವೆಲ್ಲ ಸೇರಿ ಶ್ರಮಿಸಿದ್ದೇವೆ. ಆದರೆ ಬಿಜೆಪಿ ಕಾರ್ಯಕರ್ತರನ್ನೂ ಕಡೆಗಣಿಸಿದೆ. ಸದ್ಯ ನಮಗೆಲ್ಲ ಕಾಂಗ್ರೆಸ್ ನಾಯಕ ಜಾರಕಿಹೊಳಿ ಧೈರ್ಯ ತುಂಬಿದ್ದಾರೆ. ಅವರ ಮಾತಿನ ಮೇರೆಗೆ ಕಾಂಗ್ರೆಸ್ ಸೇರಿದ್ದು, ನಾಮಪತ್ರ ಹಿಂಪಡೆಯುವುದಾಗಿ ಅವರು ತಿಳಿಸಿದರು.
ಕಾಂಗ್ರೆಸ್ ವರಿಷ್ಠರ ಸೂಚನೆ ಮೇರೆಗೆ ತವನಪ್ಪ ಅವರು ಮಾತುಕತೆ ನಡೆಸಿಯೇ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರು ನಮ್ಮ ಪಕ್ಷದ ಪರ ಕೆಲಸ ಮಾಡಲಿದ್ದಾರೆ. ಬಿಜೆಪಿಯಿಂದ ಬಂಡಯವೆದ್ದು, ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಅವರು ನಾಮಪತ್ರ ಹಿಂಪಡೆದು, ಪಕ್ಷ ಅಭ್ಯರ್ಥಿ ವಿನಯ್ ಕುಲಕರ್ಣಿಯವರನ್ನು ಬೆಂಬಲಿಸದ್ದಾರೆ. ನಾವೇ ಮೊದಲು ಅಷ್ಟಗಿಯವರನ್ನೇ ಸಂಪರ್ಕ ಮಾಡಿದ್ದೆವು ಎಂದು ಸತೀಶ ಜಾರಕಿಹೊಳಿ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದರು.












Click it and Unblock the Notifications