ISRO: ಇಂದು ಇಸ್ರೋ ಅಧ್ಯಕ್ಷರಿಗೆ ಕೃಷಿ ವಿವಿಯಿಂದ 'ಗೌರವ ಡಾಕ್ಟರೇಟ್' ಪ್ರದಾನ
ಧಾರವಾಡ, ಜೂನ್ 27: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಇಂದು ಜೂನ್ 27ರಂದು ಗುರುವಾರ 37ನೇ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಬಾಹ್ಯಾಕಾಶ ವಲಯದಲ್ಲಿ ಮಹತ್ವದ ಸಾಧನೆ ಮಾಡಿರುವ ಇಸ್ರೋ ಅಧ್ಯಕ್ಷರಿಗೆ ಈ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ.
ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಘಟಿಕೋತ್ಸವ ನಡೆಯಲಿದೆ. ಈ ಸಮಾರಂಭಧ ಅಧ್ಯಕ್ಷತೆ ವಿಶ್ವವಿದ್ಯಾಲಯದ ಕುಲಾಧಿಪತಿಯಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ವಹಿಸಲಿದ್ದಾರೆ. ಅವರೇ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ಕೃಷಿ ವಿವಿ ತಿಳಿಸಿದೆ.

ಸಚಿವರು ಸೇರಿ ಹಲವರು ಭಾಗಿ
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಅಧ್ಯಕ್ಷ ಡಾ.ಸಂಜಯ್ ಕುಮಾರ ಘಟಿಕೋತ್ಸವ ಭಾಷಣ ಮಾಡಲಿದ್ದು, ರಾಜ್ಯದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಕುಲಪತಿ ಡಾ.ಪಿ.ಎಲ್. ಪಾಟೀಲ ಇವರು ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗಳ ಕುರಿತು ವರದಿಯನ್ನು ಮಂಡಿಸುವರು. ವಿಶ್ವವಿದ್ಯಾಲಯದ ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು ಭಾಗವಹಿಸಲಿದ್ದಾರೆ.
933 ಅಭ್ಯರ್ಥಿಗಳಿಗೆ ಪದವಿ ಪ್ರಧಾನ
ಸದರಿ ಈ 37ನೇ ಘಟಿಕೋತ್ಸವದಲ್ಲಿ 69 ಪಿಎಚ್.ಡಿ. 237 ಸ್ನಾತಕೋತ್ತರ ಹಾಗೂ 627 ಸ್ನಾತಕ ಪದವಿಗಳನ್ನೊಳಗೊಂಡಂತೆ ಒಟ್ಟು 933 ಅಭ್ಯರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು. ಇದರಲ್ಲಿ 745 ಅಭ್ಯರ್ಥಿಗಳು ಹಾಜರಾತಿಯಲ್ಲಿಯೂ ಹಾಗೂ 188 ಅಭ್ಯರ್ಥಿಗಳು ಗೈರು ಹಾಜರಾತಿಯಲ್ಲಿ ತಮ್ಮ ಪದವಿಗಳನ್ನು ಸ್ವೀಕರಿಸಲಿದ್ದಾರೆ.
ಇದರೊಂದಿಗೆ 46 ಕೃಷಿ ವಿಶ್ವವಿದ್ಯಾಲಯ ಚಿನ್ನದ ಪದಕಗಳು, 10 ಇತರೆ ಚಿನ್ನದ ಪದಕಗಳು ಹಾಗೂ 09 ನಗದು ಬಹುಮಾನಗಳನ್ನು ಪ್ರತಿಭಾನ್ವಿತ ಅರ್ಹ ಅಭ್ಯರ್ಥಿಗಳಿಗೆ ಪಡೆಯಲಿದ್ದಾರೆ.
ಒಬ್ಬ ವಿದ್ಯಾರ್ಥಿನಿಗೆ 03 ಚಿನ್ನದ ಪದಕ
ಧಾರವಾಡದ ಕೃಷಿ ಮಹಾವಿದ್ಯಾಲಯದ ಸ್ನಾತಕ ಪದವಿಯಲ್ಲಿ ಬಿಎಸ್‌ಸಿ ಕೃಷಿಯಲ್ಲಿ ಶ್ರೀಯಾ ಎಸ್. ಕರಿ ಅವರು ಒಟ್ಟು ಮೂರು ಚಿನ್ನದ ಪದಕ ಬಾಚಿಕೊಂಡಿದ್ದಾರೆ. ವಿಶ್ವವಿದ್ಯಾಲಯಕ್ಕೆ ಹೆಮ್ಮೆ ತಂದಿದ್ದಾರೆ.
ಕೃಷಿ ವಿಶ್ವವಿದ್ಯಾಲಯ ಚಿನ್ನದ ಪದಕ, ಕೃಷಿ ಸ್ನಾತಕ ಪದವಿ ಕಾರ್ಯಕ್ರಮದಲ್ಲಿ ಹೆಚ್ಚಿನ ಒಜಿಪಿಎ (9.209/10) ತೆಗೆದುಕೊಂಡಿದ್ದಕ್ಕಾಗಿ ಸೀತಾರಾಂ ಜಿಂದಾಲ್ ಪ್ರತಿಷ್ಠಾನದ ಚಿನ್ನದ ಪದಕ ಮತ್ತು ಡಾ.ಜೆ. ವಿ. ಗೌಡ, ಮೊದಲನೇ ಕುಲಪತಿಗಳು, ಕೃಷಿ ವಿಶ್ವಿ ವಿದ್ಯಾಲಯ ಧಾರವಾಡ ಅಭಿನಂದನಾ ಸಮಿತಿ ಚಿನ್ನದ ಪದಕವನ್ನು ಸ್ವೀಕರಿಸಲಿದ್ದಾರೆ. ಉಳಿದಂತೆ ನೀಲವ್ವಾ ಬೆಟಗೇರಿ, ಅಭಿಜಿತ್, ಐರಮ್ ಕೌಸರ್ ಸನದಿ, ಭಾಗ್ಯಲಕ್ಷ್ಮಿ ಎಸ್.ಎನ್. ಸೇರಿದಂತೆ ಹಲವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ.
ಅದೇ ರೀತಿ ಸ್ನಾತಕೋತ್ತರ ಪದವಿಯಲ್ಲಿ ಅತೀ ಹೆಚ್ಚು ಓಜಿಪಿಎ ಪಡೆದ ದರ್ಶನ ಸಿ, ಮಧುಮತಿ, ಸಿದ್ದಮ್ಮಾ, ಭಾಗ್ಯಲಕ್ಷೀ ಹಾಗೂ ಪಿಎಚ್‌ಡಿ ಪದವಿಯಲ್ಲಿ ಉದಯನ್ ಎನ್, ಸೌಂದರ್ಯಾ ಎಸ್. ಆರ್, ಸಹನಾ ಎಮ್., ಸಲೀಂಅಲಿ ಕನ್ನಿಹಳ್ಳಿ, ವೈಷ್ಣವಿ ಪಿ, ಪೂಜಾರಾಣಿ ಮಾಲಗಿತ್ತಿ, ಗಂಗಾದಾಸರಿ ಶ್ರಾವಣಲಕ್ಷ್ಮಿ, ನವ್ಯಶ್ರೀ ಆರ್., ಅಭಿಷೇಕ ಕೆ. ಗೌಡಾ, ಜ್ಯೋತಿ ವೀರಯ್ಯಾ ಹೊಸಮಠ, ಅಜಿತ ಸಿ. ಆರ್. ಸೇರಿದಂತೆ ಅನೇಕರಿಗೆ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.












Click it and Unblock the Notifications