ಧಾರವಾಡ : ನುಚ್ಚಂಬಲಿ ಬಾವಿ ಈಗ ಸ್ವಚ್ಛ, ಸುಂದರ
ಧಾರವಾಡ, ಜುಲೈ 24 : ಧಾರವಾಡ ನಗರದ ಹೊಸ ಯಲ್ಲಾಪುರದ ಐತಿಹಾಸಿಕ ನುಚ್ಚಂಬಲಿ ಬಾವಿಯನ್ನು ಶುಚಿಗೊಳಿಸಲು ಮಹಾನಗರಪಾಲಿಕೆಯೊಂದಿಗೆ ಕೈಜೋಡಿಸಿರುವ ಸ್ಥಳೀಯ ವಿನಾಯಕ ವೃಂದದ ಯುವಕರ ಕಾರ್ಯವನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಶ್ಲಾಘಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಯುವಕರನ್ನು ಭೇಟಿ ಮಾಡಿದ ದೀಪಾ ಚೋಳನ್, "ಸುಮಾರು 70 ಅಡಿಗಳಿಗೂ ಹೆಚ್ಚು ಆಳವಿರುವ ನುಚ್ಚಂಬಲಿ ಬಾವಿಯು ಹಲವು ದಶಕಗಳ ಹಿಂದೆ ಧಾರವಾಡ ನಗರಕ್ಕೆ ನೀರು ಒದಗಿಸುವ ಪ್ರಮುಖ ಜಲಮೂಲವಾಗಿತ್ತು" ಎಂದು ಹೇಳಿದರು.
"ಗಣೇಶೋತ್ಸವ, ಮೋಹರಂ, ನವರಾತ್ರಿ ದುರ್ಗಾದೇವಿ ವಿಗ್ರಹಗಳು, ಪೂಜಾ ಸಾಮಗ್ರಿಗಳ ವಿಸರ್ಜನೆ ಕಾರ್ಯದಿಂದ ಬಾವಿ ಮಲಿನವಾಗುವುದನ್ನು ತಡೆಯಲು ಸ್ಥಳೀಯ ವಿನಾಯಕ ಯುವಕ ವೃಂದದ ಗೆಳೆಯರು ನಾಲ್ಕು ತಿಂಗಳ ಹಿಂದೆ ಬಾವಿಯನ್ನು ಶುಚಿಗೊಳಿಸಲು ಪಾಲಿಕೆಗೆ ಸಹಕಾರ ನೀಡಿದ್ದಾರೆ" ಎಂದರು.
ವಾರಕ್ಕೊಮ್ಮೆ ಬಾವಿಯ ಗೋಡೆಗಳಿಗೆ ಸುಣ್ಣ ಬಳಿಯಲಾಗುತ್ತಿದೆ. ಮಹಾನಗರ ಪಾಲಿಕೆ ಪೂರೈಸುವ ಬ್ಲೀಚಿಂಗ್ ಪೌಡರ್ ಹಾಕಿ ನೀರಿನ ಗುಣಮಟ್ಟ ಕಾಪಾಡಲು ಒತ್ತು ನೀಡುತ್ತಿರುವ ಕುರಿತು ಯುವಕರೊಂದಿಗೆ ಚರ್ಚೆ ಮಾಡಲಾಯಿತು.

ಬಾವಿಯಲ್ಲಿ ಯಾರೂ ಕೂಡ ಶಾಂಪೂ, ಸಾಬೂನು ಬಳಸಿ ಸ್ನಾನ ಮಾಡದಂತೆ ನಾವೆಲ್ಲ ಯುವಕರು ಕಟ್ಟೆಚ್ಚರ ವಹಿಸಿದ್ದೇವೆ, ವಿಗ್ರಹ ವಿಸರ್ಜಿಸುವ ಕಟ್ಟೆ ದುರಸ್ತಿ ಮಾಡಲು ಕ್ರಮ ಜರುಗಿಸಬೇಕು ಎಂದು ನಾಗರಾಜ ಹಳಕಟ್ಟಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಸಮಸ್ತ ಧಾರವಾಡ ಜನತೆಯ ಹೆಮ್ಮೆಯ ನುಚ್ಚಂಬಲಿ ಬಾವಿಯ ಸ್ವಚ್ಛತೆ ನಮ್ಮ ಸಂಕಲ್ಪವಾಗಿದೆ. ಬಾವಿಯಲ್ಲಿ ವಿಗ್ರಹ ವಿಸರ್ಜಿಸುವ ಸಾರ್ವಜನಿಕರಿಗೆ ಪಾಲಿಕೆ ಅಥವಾ ಜಿಲ್ಲಾಡಳಿತ ಶುಲ್ಕ ನಿಗದಿಗೊಳಿಸಬೇಕು ಎಂದು ಮನವಿ ಮಾಡಲಾಯಿತು.












Click it and Unblock the Notifications