ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಓಪನ್ ಚಾಲೆಂಜ್
ಧಾರವಾಡ, ಅಕ್ಟೋಬರ್ 13: "ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಚಾಲೆಂಜ್ ಮಾಡುವುದಾದರೆ ಮಾಡಲಿ, ನನ್ನದು ಇದು ಓಪನ್ ಚಾಲೆಂಜ್" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾನುವಾರ ಸವಾಲು ಹಾಕಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಕಳೆದ ಯುಪಿಎ ಸರ್ಕಾರದ ಹತ್ತು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ನಲವತ್ನಾಲ್ಕು ಸಾವಿರ ಕೋಟಿ ಕೇಳಿದರು. ನಾಲ್ಕು ಸಾವಿರದ ನಾನೂರು ಕೋಟಿ ಮಾತ್ರ ಕೊಟ್ಟಿದ್ದಾರೆ. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಇಪ್ಪತ್ತೇಳು ಸಾವಿರ ಕೋಟಿ ಕೇಳಿದ್ದಾರೆ, ಅದರಲ್ಲಿ ಕೇಂದ್ರ ಸರ್ಕಾರ ಕೊಟ್ಟಿದ್ದು ಒಂಬತ್ತು ಸಾವಿರದ ಒಂದು ನೂರು ಕೋಟಿ. ಇನ್ನು ಈಗ ಬಂದಿರುವುದು ತಾತ್ಕಾಲಿಕ ಪರಿಹಾರ ಎಂದಿದ್ದಾರೆ.
ಈ ಹಿಂದೆ ಅವರು ಇಂಥ ಎಷ್ಟು ತಾತ್ಕಾಲಿಕ ಪರಿಹಾರ ಬಿಡುಗಡೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ ಜೋಶಿ. ಸಿದ್ದರಾಮಯ್ಯ ಅವರು ಹತ್ತು ಸಾರಿ ಬಜೆಟ್ ಮಂಡನೆ ಮಾಡಿದವರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಅವರಿಗೆ ಜ್ಞಾಪಕ ಶಕ್ತಿ ಇದೆ ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಜ್ಞಾಪಕ ಶಕ್ತಿ ಇದ್ದರೆ ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಕೇಳಿ ಮಾಹಿತಿ ಪಡೆಯಲಿ. ಆ ನಂತರ ಮಾತನಾಡಿದರೆ ಅವರ ಹಿರಿತನಕ್ಕೆ ಶೋಭೆ ಬರಲಿದೆ ಎಂದು ಕೇಂದ್ರ ಸಚಿವ ಜೋಶಿ ಹೇಳಿದ್ದಾರೆ.












Click it and Unblock the Notifications