Jagadish Shettar Defeat Plan: ಜಗದೀಶ್ ಶೆಟ್ಟರ್ ಸೋಲಿಸಲು ಬಿಜೆಪಿ ತಂತ್ರ, 50 ಜನರ ತಂಡ ರಚನೆ!
ಧಾರವಾಡ, ಏಪ್ರಿಲ್ 21; ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ. ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ದೇಶದ ಕುತೂಹಲ ಕೆರಳಿಸಿದೆ. ಅದಕ್ಕೆ ಕಾರಣ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್.
ಈ ವಿಧಾನಸಭಾ ಕ್ಷೇತ್ರದಲ್ಲಿ 6 ಬಾರಿ ಗೆದ್ದಿರುವ ಜಗದೀಶ್ ಶೆಟ್ಟರ್, 7ನೇ ಚುನಾವಣೆ ಎದುರಿಸುತ್ತಿದ್ದಾರೆ. ಆದರೆ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ ಅಲ್ಲ. ಇದೇ ಕಾರಣಕ್ಕೆ ರಾಜ್ಯ ರಾಜಕೀಯದ ಕಣ್ಣು ಇತ್ತ ಹೊರಳಿದೆ. ಬಿಜೆಪಿ ಟಿಕೆಟ್ ಶೆಟ್ಟರ್ ಕೈ ತಪ್ಪದಿದ್ದರೆ ಅಂತಹ ಕೂತೂಹಲ ಉಳಿದಿರುತ್ತಿರಲಿಲ್ಲ. ಆದರೆ ಈಗ ಶೆಟ್ಟರ್ ಎಷ್ಟು ಮತದ ಅಂತರದಲ್ಲಿ ಗೆಲ್ಲುತ್ತಾರೆ?. ಸೋಲುತ್ತಾರೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸೋಲಿಸಬೇಕು ಎಂದು ಬಿಜೆಪಿ ಶಪಥ ಮಾಡಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಮೊದಲಿನಿಂದಲೂ ನೇರ ಹಣಾಹಣಿ. ಆದರೆ ಈ ಬಾರಿ ಚುನಾವಣೆ ಇನ್ನೂ ವಿಶೇಷ.
50 ಜನರ ತಂಡ ರಚನೆ; ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈಗಾಗಲೇ ಜಗದೀಶ್ ಶೆಟ್ಟರ್ ಸೋಲಿಸಲು ಸ್ಥಳೀಯ ನಾಯಕರ ಜೊತೆ ಸಭೆ ನಡೆಸಿ ತಂತ್ರ ರೂಪಿಸಿದ್ದಾರೆ. ವಿಶೇಷ ಕಾರ್ಯತಂತ್ರದ ಭಾಗವಾಗಿ ಆರ್‌ಎಸ್‌ಎಸ್ ಸಹ ಕೈ ಜೋಡಿಸಿದೆ. ಮಹಾರಾಷ್ಟ್ರದಿಂದ ಇದಕ್ಕಾಗಿಯೇ 50 ಜನರು ಆಗಮಿಸಿದ್ದಾರೆ. ಈ ತಂಡ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸುವುದಲ್ಲದೇ ಶೆಟ್ಟರ್ ಪರವಾಗಿ ಬಿಜೆಪಿ ಮುಖಂಡರು ಕೆಲಸ ಮಾಡಲಿದ್ದಾರೆಯೇ? ಎಂದು ಕಣ್ಣಿಡಲಿದೆ.

ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಶೆಟ್ಟರ್ ಬಿಜೆಪಿ, ಆರ್‌ಎಸ್‌ಎಸ್ ಮೇಲೆ ಸಹ ಆರೋಪಗಳನ್ನು ಮಾಡಿದ್ದರು. ಆದ್ದರಿಂದ ಆರ್‌ಎಸ್‌ಎಸ್ ಕ್ಷೇತ್ರದ ಗೆಲುವುನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. "ಬಿಜೆಪಿ ಓರ್ವ ಕಾರ್ಯಕರ್ತನಿಗೆ ಟಿಕೆಟ್ ನೀಡಿದೆ. ಇದನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಚುನಾವಣೆಯಲ್ಲಿ ಗೆದ್ದು ಬರುತ್ತೇವೆ. ಕ್ಷೇತ್ರದಲ್ಲಿ ನಾವು ಬಲಿಷ್ಠ ಸಂಘಟನೆ ಹೊಂದಿದ್ದೇವೆ" ಎಂದು ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪ್ರವಾಸ ಕೈಗೊಂಡಿದ್ದರು. ಅವರು ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಕ್ಷೇತ್ರದ ಪದಾಧಿಕಾರಿಗಳ ಸಭೆ ನಡೆಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸೂಚನೆಗಳನ್ನು ಸಹ ನೀಡಿದ್ದಾರೆ. ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಸಹ ಜಗದೀಶ್ ಶೆಟ್ಟರ್ ಸೋಲಿಸಲು ಪಕ್ಷದ ನಿರ್ದೇಶನದಂತೆ ಕೆಲಸ ಮಾಡಬೇಕಿದೆ.
ಕಾಂಗ್ರೆಸ್ ಪ್ರತಿತಂತ್ರ; ಕಾಂಗ್ರೆಸ್ ಪಕ್ಷ ಸಹ ಬಿಜೆಪಿಗೆ ತಿರುಗೇಟು ನೀಡಲು ಸಜ್ಜಾಗಿದೆ. ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಶೆಟ್ಟರ್ ಸೇರಿಸಿದ್ದು, ಅವರನ್ನು ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನ ಕಾಂಗ್ರೆಸ್‌ನಲ್ಲಿದ್ದ ಅಸಮಾಧಾನ ಬಗೆಹರಿಸಲು ಖುದ್ದಾಗಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅಖಾಡಕ್ಕೆ ಇಳಿದಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಮತ್ತು ಅನಿಲ್ ಕುಮಾರ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇಬ್ಬರನ್ನೂ ಕರೆಸಿ ಜಗದೀಶ್ ಶೆಟ್ಟರ್ ಗೆಲುವಿಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ 2004ರಲ್ಲಿ 31,965. 2008ರಲ್ಲಿ 32,738. 2013ರಲ್ಲಿ 40,447 ಮತ್ತು 2018ರಲ್ಲಿ 54,488 ಮತಗಳನ್ನು ಪಡೆದಿತ್ತು. ಈ ಎಲ್ಲಾ ಚುನಾವಣೆಯಲ್ಲಿ ಎದುರಾಳಿಯಾಗಿದ್ದು ಬಿಜೆಪಿಯಲ್ಲಿದ್ದ ಜಗದೀಶ್ ಶೆಟ್ಟರ್. ಆದರೆ ಈ ಬಾರಿಯ ಚುನಾವಣೆಯ ಚಿತ್ರಣವೇ ಬೇರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್‌ನ ಅಭ್ಯರ್ಥಿ ಅಲ್ಲದೇ ಇದು ಅವರು ಕ್ಷೇತ್ರದಲ್ಲಿ ಎದುರಿಸುತ್ತಿರುವ 7ನೇ ಚುನಾವಣೆಯಾಗಿದೆ.












Click it and Unblock the Notifications