BJP ಕಳೆದ ಹತ್ತು ವರ್ಷಗಳಲ್ಲಿ 2,500 ಶಾಸಕರನ್ನು ಖರೀದಿ ಮಾಡಿದೆ: ಸಚಿವ ಸಂತೋಷ್ ಲಾಡ್ ಹೀಗೆ ಹೇಳಿದ್ದೇಕೆ?
ಧಾರವಾಡ, ಅಕ್ಟೋಬರ್, 28: ಬಿಜೆಪಿ ಪಕ್ಷ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡುತ್ತಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಸಹಜವಾಗಿಯೇ ದುಡ್ಡು ಇರುವ ಪಕ್ಷ. ಕಳೆದ 10 ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ 2,500 ಶಾಸಕರನ್ನು ಖರೀದಿ ಮಾಡಿದೆ. ಬಿಜೆಪಿ ಅಧಿಕೃತವಾಗಿಯೇ ತನ್ನ ಬಳಿ 7,500 ಕೋಟಿ ಹಣ ಇದೆ ಎಂದು ಹೇಳಿಕೊಂಡಿದೆ. ಪ್ರಧಾನಮಂತ್ರಿ ಪರಿಹಾರ ನಿಧಿಗೆ 30 ಸಾವಿರ ಕೋಟಿ ಜಮಾ ಆಗಿದೆ. ಆ ದುಡ್ಡಲ್ಲಿ ಇದುವರೆಗೂ ಒಂದೂ ಆಸ್ಪತ್ರೆ ಕಟ್ಟಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಸಚಿವ ಸತೀಶ ಜಾರಕಿಹೊಳಿ ಅವರು ಅಸಮಾಧಾನಿತರಾಗಿಲ್ಲ. ಅವರು ಬೇರೆ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿರಬಹುದು. ಅದು ರಾಜಕೀಯ ಉದ್ದೇಶಕ್ಕಲ್ಲ. ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವದ ಮೇಲೆ ಕೆಲಸ ಮಾಡುತ್ತಿದ್ದಾರೆ. ಬೇರೆ ಯಾವುದಾದರೂ ಕಾರಣಕ್ಕೆ ಅವರು ಅಸಮಾಧಾನಗೊಂಡಿದ್ದರೆ ಅವರನ್ನೇ ಕೇಳಿ ತಿಳಿದುಕೊಳ್ಳಬೇಕು ಎಂದರು.
ಹರೀಶ್ ಪೂಂಜಾ ರಾಜಕೀಯದಲ್ಲಿ ಇನ್ನೂ ಬಚ್ಚಾ
ಮಂಗಳೂರು, ಅಕ್ಟೋಬರ್, 28: ಹರೀಶ್ ಪೂಂಜಾ ಎಂಎಲ್ಎ ಆಗಿರೋದು ಮೊನ್ನೆ, ನಾನು 1983ರಲ್ಲಿ ಎಂಎಲ್ಎ ಆಗಿದ್ದೇನೆ. 85ರಲ್ಲೇ ಮಿನಿಸ್ಟರ್ ಆಗಿದ್ದೇನೆ. ಅಂದು ಯಾರೂ ನನ್ನನ್ನು ಹಾಗೆ ಕರೆದಿಲ್ಲ. ರಾಜಕೀಯದಲ್ಲಿ ಇನ್ನೂ ಅವರು ಬಚ್ಚಾ. ಬಿಜೆಪಿ ಸರ್ಕಾರ, ಮುಖ್ಯಮಂತ್ರಿಗಳಿಗೆ ಹಾಗೆ ಹೇಳಲಿ ಹರೀಶ್ ಪೂಂಜಾ. ನಮಗೆ ಹೇಳೋದು ಬೇಡ ಎಂದು 'ಕಲೆಕ್ಷನ್ ಮಾಸ್ಟರ್ ಸಿಎಂ ಆಫ್ ಕರ್ನಾಟಕ' ಪೋಸ್ಟ್ ಮಾಡಿದ ಹರೀಶ್ ಪೂಂಜಾಗೆ ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ 60ಕೋಟಿ ರೂ. ಆಫರ್ ಬಂದಿದೆ. ಎಷ್ಟು ಮಂದಿ ಕಾಂಗ್ರೆಸ್‌ನವರಿಗೆ ಈ ರೀತಿಯ ಆಫರ್ ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇದನ್ನು ಸಿ.ಟಿ.ರವಿಯವರಿಗೆ ಕೇಳಿ. ನನಗೆ ಇದರ ಬಗ್ಗೆ ಗೊತ್ತಿಲ್ಲ. ಬಿಜೆಪಿಯವರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಈ ರೀತಿಯ ಆಫರ್‌ಗಳ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.
ರಾಮಲಿಂಗಾ ರೆಡ್ಡಿಯವರು ಸಿ ಗ್ರೇಡ್ ದೇವಾಲಯಕ್ಕೆ ಫ್ರೀ ಕರೆಂಟ್ ಕೊಡಬೇಕೆಂಬ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅವರೊಂದಿಗೆ ಚರ್ಚೆ ಮಾಡುತ್ತೇನೆ. ನಿಗಮ ಮಂಡಳಿ ನೇಮಕ ಬಗ್ಗೆ ಮಾತನಾಡಿ, ಮೊದಲ ಹಂತದಲ್ಲಿ ಎಂಎಲ್ಎಗಳಿಗೆ ನಿರ್ದೇಶಕರನ್ನಾಗಿ ಮಾಡುತ್ತೇವೆ. ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ, ಮಾಜಿ ಎಂಎಲ್ಎಗಳಿಗೆ ಕೊಡಲಾಗುತ್ತದೆ. ಆದಷ್ಟು ಶೀಘ್ರದಲ್ಲಿ ಮಾಡಲಾಗುತ್ತದೆ.
ಬರಕ್ಕೆ ಕೇಂದ್ರದಿಂದ ಇಂದಿನವರೆಗೆ ಒಂದು ರೂಪಾಯಿ ಬಂದಿಲ್ಲ. ನಾವು ಎರಡು ವರದಿ ಸಲ್ಲಿಸಿದ್ದೇವೆ. ಕೇಂದ್ರದ ತಂಡ ಬಂದಿದೆ. ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. 236 ತಾಲೂಕುಗಳಲ್ಲಿ 116 ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದೇವೆ. 17,910 ಕೋಟಿ ರೂಪಾಯಿ ಕೇಳಿದ್ದೇವೆ. 33 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಾನಿ ಆಗಿದೆ. ಬೆಳೆ ನಷ್ಟ ಆಗಿದೆ. ಇಂದಿನವರೆಗೆ ನಮ್ಮ ಮಂತ್ರಿಗಳು ಹೋದಲ್ಲಿ ಭೇಟಿಯನ್ನು ಮಾಡಿಲ್ಲ. ಭೇಟಿಗೂ ಸಮಯವನ್ನು ಕೊಟ್ಟಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಮಲಧೋರಣೆ ತೋರಿಸುತ್ತಿದೆ.
ಕಾರ್ಕಳ ಪರಶುರಾಮ ಮೂರ್ತಿಯ ಬಗ್ಗೆ ಪ್ರಶ್ನೆಗೆ ಅದನ್ನು ನಕಲಿಯೋ ಅಸಲಿಯೋ ಎಂದು ತನಿಖೆ ಮಾಡಿಸುತ್ತೇವೆ. ಸೌಜನ್ಯಾ ಪ್ರಕರಣದ ಮರುತನಿಖೆ ಬಗ್ಗೆಗಿನ ಪ್ರಶ್ನೆಗೆ ಅದು ಸಿಬಿಐ ಮಾಡಿರೋದು, ಕೇಂದ್ರ ಸರಕಾರ ಮರುತನಿಖೆ ಮಾಡಿಸಬೇಕು. ನಾವೇನು ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications