ಶಾಸಕ ವಿನಯ್ ಕುಲಕರ್ಣಿ ಕ್ಷೇತ್ರದಲ್ಲಿ ಏಜೆಂಟ್‌ಗಳ ಹಾವಳಿ: ರೈತರ ಆಕ್ರೋಶ
ಧಾರವಾಡ, ಮೇ 31: ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಚುನಾಯಿತರಾಗಿರುವ ವಿನಯ್ ಕುಲಕರ್ಣಿ ಅವರು ಕ್ಷೇತ್ರದಲ್ಲಿ ಇಲ್ಲದೇ ಇರುವುದರಿಂದ ಅಧಿಕಾರಿಗಳು ಹಾಗೂ ಏಜೆಂಟ್‌ಗಳು ಆಡಿದ್ದೇ ಆಟ ಎಂಬಂತಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಧಾರವಾಡ ತಹಶೀಲ್ದಾರ್ ಕಚೇರಿಯಲ್ಲಿ ಏನೇ ಕೆಲಸ ಆಗಬೇಕು ಎಂದರೆ ಅಧಿಕಾರಿಗಳ ಕೈ ಬಿಸಿ ಮಾಡಿದಾಗ(ಲಂಚ ನೀಡಿದಾಗ) ಮಾತ್ರವೇ ಕೆಲಸಗಳು ಆಗುತ್ತಿವೆ ಎಂಬ ಆರೋಪವನ್ನು ರೈತರು ಮಾಡುತ್ತಿದ್ದಾರೆ.

ರೈತರ ಕೆಲಸ ಮಾಡಿಕೊಡುತ್ತೇವೆ ಎಂದು ದುಡ್ಡು ಪಡೆದುಕೊಂಡಿದ್ದ ಏಜೆಂಟ್‌ರೊಬ್ಬರನ್ನು ರೈತರು ತಹಶೀಲ್ದಾರ್ ಕಚೇರಿ ಆವರಣದಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಪಹಣಿ ಪತ್ರದಲ್ಲಿ ಸರಕಾರ ಎಂದು ನಮೂದು ಇರುವ ಹಿನ್ನೆಲೆಯಲ್ಲಿ ಮುರಗೆಪ್ಪ ಎಂಬ ರೈತ ಸೇರಿದಂತೆ ಧಾರವಾಡ ತಾಲೂಕಿನ ಶಿಬಾರಗಟ್ಟಿ, ಅಮ್ಮಿನಭಾವಿ ರೈತರು ಸರ್ಕಾರ ಎಂದು ನಮೂದಾಗಿರುವ ಹೆಸರನ್ನು ಕಡಿಮೆ ಮಾಡಿಸಿಕೊಳ್ಳಲು ಬಂದಿದ್ದರು. ಈ ವಿಷಯದಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಮಾಡುತ್ತಿದ್ದಾರೆ. ಅಧಿಕಾರಿಗಳ ಕೈ ಬಿಸಿ ಮಾಡಿದಾಗ ಮಾತ್ರ ಅವರು ಕೆಲಸ ಮಾಡುತ್ತಿದ್ದಾರೆ ಎಂದು ತಹಶೀಲ್ದಾರ್ ಕಚೇರಿ ಎದುರೇ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಅದರಲ್ಲೂ ಶಿರಸ್ತೆದಾರ ರಮೇಶ ಬಂಡಿ ಎನ್ನುವವರು ಉದ್ದೇಶ ಪೂರ್ವಕವಾಗಿ ಈ ರೀತಿಯಾಗಿ ಮಾಡುತ್ತಿದ್ದಾರೆ. ರೈತರು ತಹಶೀಲ್ದಾರ್ ಕಚೇರಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ ಎಂದು ಕೆಲ ಅನ್ನದಾತರು ತಹಶೀಲ್ದಾರ್ ಕೊಠಡಿಯ ಎದುರೇ ಶಿರಸ್ತೆದಾರ ರಮೇಶ ಬಂಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಕಟ್ಟುನಿಟ್ಟಾಗಿ ಸೂಚನೆ ನೀಡದೇ ಇರುವುದು ಎನ್ನುವುದು ಅವರ ಆರೋಪವಾಗಿದೆ.
ಶಿರಸ್ತೆದಾರ ರಮೇಶ ಬಂಡಿ ಅವರು ಏಜೆಂಟ್‌ರನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಯಾರೂ ಹೇಳೋರಿಲ್ಲ ಕೇಳೋರಿಲ್ಲ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.

ಅನಧಿಕೃತ ಡಬ್ಬಾ ಅಂಗಡಿ ತೆರವು ಕಾರ್ಯಾಚರಣೆ: ನಗರದ ಸೌಂದರ್ಯಕ್ಕೆ ಪಾಲಿಕೆ ಆದ್ಯತೆ!
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಗದಗ ರಸ್ತೆಯ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ 23 ಡಬ್ಬಾ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ತೆರವುಗೊಳಿಸಿದ್ದಾರೆ.
25 ಕಾರ್ಮಿಕರು ಎರಡು ಜೆಸಿಬಿ, ನಾಲ್ಕು ಟ್ರ್ಯಾಕ್ಟರ್‌ಗಳ ಮೂಲಕ ಅಂಗಡಿಗಳನ್ನು ತೆರವು ಮಾಡಿದರು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
'ರಸ್ತೆ ಪಕ್ಕದ ಪಾದಚಾರಿ ಮಾರ್ಗದಲ್ಲಿ ಮೂರು-ನಾಲ್ಕು ವರ್ಷಗಳಿಂದ ಕೆಲವರು ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ತೆರವು ಮಾಡಲು ಅನೇಕ ಬಾರಿ ಸೂಚನೆ ನೀಡಿದರೂ ಕೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ವಲಯ ಕಚೇರಿ 6ರ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು' ಎಂದು ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಸಿ. ಬೇವೂರ ಮಾಹಿತಿ ನೀಡಿದ್ದಾರೆ. ಈ ವೇಳೆಯಲ್ಲಿ ಪಾಲಿಕೆ ಅಭಿವೃದ್ಧಿ ಅಧಿಕಾರಿಗಳು, ಎಂಜಿನಿಯರ್, ಆರೋಗ್ಯ ನಿರೀಕ್ಷಕರು ಭಾಗಿಯಾಗಿದ್ದರು.












Click it and Unblock the Notifications