ಧಾರವಾಡ; ಜೈಲಿನಲ್ಲಿ ಬಂದಿಗಳ ಭೇಟಿಗೆ ಮಾ. 21ರಿಂದ ಅವಕಾಶ
ಧಾರವಾಡ, ಮಾರ್ಚ್ 15; ಕರ್ನಾಟಕದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಇಳಿಕೆಯಾಗಿವೆ. ಕೇಂದ್ರ ಕಾರಾಗೃಹ ಧಾರವಾಡದಲ್ಲಿನ ಬಂದಿಗಳನ್ನು ಮಾರ್ಚ್ 21 ರಿಂದ ಸಂಬಂಧಿಕರು ಹಾಗೂ ಇತರರ ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಬಂದಿಗಳ ಭೇಟಿಗೆ ನಿರ್ಬಂಧ ಹೇರಲಾಗಿತ್ತು.
ಕೋವಿಡ್ ಮಾರ್ಗಸೂಚಿಗಳ ಅನ್ವಯ ಸಂದರ್ಶನವನ್ನು ಪುನರಾರಂಭಿಸಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗದಿತ ಸಂದರ್ಶನವನ್ನು ಮಾತ್ರ ನೀಡಲಾಗುವುದು ಎಂದು ತಿಳಿಸಲಾಗಿದೆ.
ಬಂದಿಗಳ ಸಂದರ್ಶನಕ್ಕೆ ಬರುವ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ವಕೀಲರು ಮುಂಚಿತವಾಗಿಯೇ ಕಾರಾಗೃಹದ ಸ್ಥಿರ ದೂರವಾಣಿ ಸಂಖ್ಯೆ 0836-2447428, ಸಿ. ಯು. ಜಿ. ಮೊಬೈಲ್ ಸಂಖ್ಯೆ 9480806480, ಕಾರಾಗೃಹದ ಇ-ಮೇಲ್ ವಿಳಾಸ [email protected]ಕ್ಕೆ ಸಂಪರ್ಕಿಸಿ ವಿವರಗಳೊಂದಿಗೆ ಸಂದರ್ಶನಕ್ಕೆ ಹೆಸರು ನೋಂದಾಯಿಸಿ, ನಿಗದಿಪಡಿಸುವ ದಿನ ಮತ್ತು ಸಮಯಕ್ಕೆ ಆಗಮಿಸಬಹುದು.

ಸಂದರ್ಶನಕ್ಕೆ ಬರುವ ಸಂದರ್ಶಕರು ಯಾವುದೇ ರೀತಿಯ ಕೋವಿಡ್ ರೋಗ ಲಕ್ಷಣಗಳನ್ನು ಹೊಂದಿರಬಾರದು ಹಾಗೂ ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಂಡಿರುವ ಕುರಿತು ಲಸಿಕಾ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು.
ಶಿವಮೊಗ್ಗ ಜೈಲು; ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗೆ ಮಾ.21 ರಿಂದ ನೇರ ಸಂದರ್ಶನವನ್ನು ಪುನರಾರಂಭಿಸಲಾಗಿದೆ. ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಿಗದಿತ ಸಂದರ್ಶನವನ್ನು ಮಾತ್ರ ನೀಡಲಾಗುವುದು.
ಆದ್ದರಿಂದ ಬಂದಿಗಳ ಸಂದರ್ಶನಕ್ಕೆ ಬರುವ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ವಕೀಲರು ಮುಂಚಿತವಾಗಿಯೇ ಕಾರಾಗೃಹದ ಮುಖ್ಯಸ್ಥ ಶಿವಾನಂದ ಆರ್. ಶಿವಪುರ ದೂರವಾಣಿ ಸಂಖ್ಯೆ 08182-295144, 295155, ಮೊ.ಸಂ 9480806420, 9480806421 ಹಾಗೂ ಕಾರಾಗೃಹದ ಇಮೇಲ್ ವಿಳಾಸ [email protected] ಇಲ್ಲಿ ಇಮೇಲ್, ವಾಟ್ಸಾಪ್ ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಿ ವಿವರಗಳೊಂದಿಗೆ ಸಂದರ್ಶನಕ್ಕೆ ಹೆಸರು ನೋಂದಾಯಿಸಬೇಕು. ನಿಗದಿಪಡಿಸಿದ ದಿನ ಮತ್ತು ಸಮಯಕ್ಕೆ ಸಂದರ್ಶನಕ್ಕೆ ಆಗಮಿಸಬೇಕು ಎಂದು ಸೂಚನೆ ನೀಡಲಾಗಿದೆ.
ಕೋವಿಡ್ ಪ್ರಕರಣ ಇಳಿಕೆ; ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಸೋಮವಾರದ ಹೆಲ್ತ್ ಬುಲೆಟಿನ್ ನಂತೆ ರಾಜ್ಯದಲ್ಲಿ ದಾಖಲಾದ ಹೊಸ ಪ್ರಕರಣಗಳು 106.
ಬಂದಿಗಳ ಸಾಕ್ಷರತಾ ಪಗ್ರತಿ ಪರಿಶೀಲನೆ; ಕರ್ನಾಟಕ ಸರ್ಕಾರ ಕೈದಿಗಳನ್ನು ಸಾಕ್ಷರರನ್ನಾಗಿ ಮಾಡುವ ಸದುದ್ದೇಶದಿಂದ 'ಶಿಕ್ಷೆಯಿಂದ ಬದಲಾವಣೆ' ಎಂಬ ಶೀರ್ಷಿಕೆ ಅಡಿಯಲ್ಲಿ ಜೈಲಿನಲ್ಲಿರುವ ಬಂದಿಗಳಿಗೆ ಅಕ್ಷರ ಕಲಿಸುತ್ತಿದೆ. ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಅನಕ್ಷರಸ್ಥ ಹಾಗೂ ಅರೆಸಾಕ್ಷರ ಬಂದಿಗಳಿಗಾಗಿ ನಡೆದ ಸಾಕ್ಷರತಾ ಕಾರ್ಯಕ್ರಮದ ಕಲಿಕಾ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯದ ಉಪನಿರ್ದೇಶಕ ಎನ್. ಹೆಚ್. ನಾಗೂರ ಮಾತನಾಡಿ, ಬಂದಿಯ ಕಲಿಕೆಯ ಕುರಿತು ಪ್ರತಿ ಬಂದಿಯ ಓದಿಸುವುದು, ಹಾಗೂ ಬರೆಸುವುದರ ಮುಖಾಂತರ ಪರಿಶೀಲನೆ ನಡೆಸಿದರು. ಹಾಗೂ ತಮ್ಮ ಮಾತುಗಳಲ್ಲಿ ಬಂದಿಗಳು ಕಾರಾಗೃಹದ ಅವಧಿಯಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದೆ ಕಲಿಕೆಯಲ್ಲಿ ತೊಡಗಿಸಿಕೊಂಡು ಸಂಪೂರ್ಣ ಸಾಕ್ಷರತೆಯನ್ನು ಹೊಂದಿ ಬಿಡುಗಡೆಯ ನಂತರ ಸಮಾಜದ ಮುಖ್ಯವಾಹಿನಿಯನ್ನು ಸೇರಿಕೊಂಡು ಒಳ್ಳೆ ಜೀವನ ರೂಢಿಸಿಕೊಳ್ಳಲು ತಿಳಿಸಿದರು.
ಕಾರಾಗೃಹ ಅಧೀಕ್ಷಕ ಎಂ. ಎ. ಮರಿಗೌಡ ಮಾತನಾಡಿ, "ಅನಕ್ಷರಸ್ಥ ಹಾಗೂ ಅರೆಸಾಕ್ಷರ ಬಂದಿಗಳು ಕನಿಷ್ಠ ಕಲಿಕೆ ಸಾಧಿಸಿ ಬಿಡುಗಡೆಯ ನಂತರವೂ ಸ್ವಾವಲಂಬಿಯಾಗಿ ಹಾಗೂ ಗೌರವಯುತ ಜೀವನ ರೂಪಿಸಿಕೊಳ್ಳುವ ಸದುದ್ದೇಶದಿಂದ ಕಾರ್ಯಕ್ರಮವನ್ನು ನವೆಂಬರ್ 2021ರಿಂದ ಪ್ರಾರಂಭಿಸಲಾಗಿದೆ. 97 ಬಂದಿಗಳು ಸಾಕ್ಷರತೆ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಈಗಾಗಲೇ ಶೇಕಡಾ 80 ರಷ್ಟು ಸಾಕ್ಷರತಾ ಗುರಿ ಸಾಧಿಸಿದ್ದು, ಮಾರ್ಚ ಅಂತ್ಯದೊಳಗಾಗಿ ಕಾರಾಗೃಹದಲ್ಲಿ ಸಂಪೂರ್ಣ ಸಾಕ್ಷರತೆ ಹೊಂದಲಾಗುವುದು" ಎಂದರು.












Click it and Unblock the Notifications