ಧಾರವಾಡ ಬೈಪಾಸ್ ರಸ್ತೆಯಲ್ಲಿ ಲಾರಿ-ಕಾರು ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು
ಧಾರವಾಡ, ಜೂನ್, 11: ಇಂದು (ಜೂನ್ 11) ಬೆಳ್ಳಂಬೆಳಗ್ಗೆ ನುಸುಕಿನ ಜಾವ ಲಾರಿ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಸಾವಿಗೀಡಾಗಿರುವ ಘಟನೆ ಧಾರವಾಡ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಗೋವಾದಿಂದ ಹೊಳೆನರಸಿಪುರದ ಕಡೆಗೆ ಹೊರಟಿದ್ದ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ಬಿಂದುಗೌಡ (35), ಬಾಪುಗೌಡ (36) ಸೇರಿದಂತೆ ಇನ್ನೋರ್ವ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮೃತಪಟ್ಟ ಇನ್ನೋರ್ವನ ಹೆಸರನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಗೆಯೇ ಮೃತಪಟ್ಟವರು ಹೊಳೆನರಸಿಪುರದವರೇ ಇರಬಹುದು ಎಂದು ಶಂಕಿಸಲಾಗಿದೆ. ಇನ್ನು ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಕಾರು-ಆಟೋ ನಡುವೆ ಭೀಕರ ಅಪಘಾತ
ಕುಸುಗಲ್ ರಸ್ತೆಯ ಹುಂಡೈ ಶೋರುಮ್ ಬಳಿ ಕಾರು ಹಾಗೂ ಅಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಅಟೋ ಸಂಪೂರ್ಣವಾಗಿ ಜಖಂಗೊಂಡಿದೆ. ಇನ್ನು ಘಟನೆಯಲ್ಲಿ ಅಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಕುಸುಗಲ್ ಗ್ರಾಮದ ಅಟೋ ಚಾಲಕ ಸಮೀರ್ ಬೆಟಗೇರಿ ಎಂಬಾತ ಕುಸುಗಲ್ ಗ್ರಾಮದಿಂದ ತನ್ನ ತಾಯಿಯನ್ನು ಆಟೋದಲ್ಲಿ ಹುಬ್ಬಳ್ಳಿಗೆ ಬಿಟ್ಟು ಮರಳಿ ಕುಸುಗಲ್ ಗ್ರಾಮದತ್ತ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಎದುರಿಗೆ ಅತಿ ಜೋರಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅಟೋ ಸಂಪೂರ್ಣವಾಗಿ ಜಖಂಗೊಂಡು ಸಮೀರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೂಡಲೇ ಸ್ಥಳೀಯರ ಸಹಾಯದಿಂದ ಗಂಭೀರವಾಗಿ ಗಾಯಗೊಂಡ ಅಟೋ ಚಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಹುಬ್ಬಳ್ಳಿಯ ಪೂರ್ವ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications