ಮುರಿದು ಬಿದ್ದ ಮದುವೆ: ಕೋಪದಿಂದ ಯುವತಿಯನ್ನು ಕೊಂದ ಪಾಗಲ್‌ಪ್ರೇಮಿ
ದಾವಣಗೆರೆ, ಡಿಸೆಂಬರ್ 22: ದಾವಣಗೆರೆ ನಗರದಲ್ಲಿ ಯುವತಿಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಪಿ. ಜೆ. ಬಡಾವಣೆಯ ಚರ್ಚ್ ರಸ್ತೆಯಲ್ಲಿನ ಲುಡ್ಸ್ ಶಾಲೆ ಎದುರು ನಡೆದಿದ್ದು, ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ.
ವಿನೋಬನಗರ ನಿವಾಸಿ ಚಾಂದ್ ಸುಲ್ತಾನ್ (25) ಹತ್ಯೆಯಾದ ಯುವತಿ ಎಂದು ಗುರುತಿಸಲಾಗಿದೆ. ಕಾಳಿದಾಸ ನಗರದ ಸೈಯ್ಯದ್ ಸಾದತ್ ಅಲಿಯಾಸ್ ಚಾಂದ್ ಬೀರ್ ಚೂರಿ ಇರಿದು ಕೊಂದ ಆರೋಪಿ ಎಂದು ಗುರುತಿಸಲಾಗಿದೆ.
ಹರಿಹರದ ಸೈಯ್ಯದ್ ಸಾದತ್ ಅಲಿಯಾಸ್ ಚಾಂದ್ ಬೀರ್ ಹರಿಹರ ಪಟ್ಟಣದ ಕಾಳಿದಾಸನಗರದವನು. ಹತ್ಯೆಯಾದ ಯುವತಿ ಹಾಗೂ ಸೈಯ್ಯದ್ ಸಂಬಂಧಿಕರಾಗಬೇಕು ಎಂದು ಹೇಳಲಾಗುತ್ತಿದೆ. ಇಬ್ಬರ ಮದುವೆಗೆ ಮಾತುಕತೆ ನಡೆದಿತ್ತು. ಆದರೆ ಸೈಯ್ಯದ್ ನಡವಳಿಕೆ ಮತ್ತು ಕೆಲ ಭಿನ್ನಾಭಿಪ್ರಾಯದಿಂದಾಗಿ ಮದುವೆ ಪ್ರಸ್ತಾಪ ಮುರಿದು ಬಿದ್ದಿತ್ತು. ಆ ಬಳಿಕ ಚಾಂದ್ ಸುಲ್ತಾನ್ ಆತನ ಸಂಪರ್ಕ ಬಿಟ್ಟಿದ್ದಳು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಹರಿಹರದ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಇದರಿಂದ ಮತ್ತಷ್ಟು ಕೋಪಗೊಂಡಿದ್ದ ಆರೋಪಿ ಆಕೆಯನ್ನು ಪಡೆದೇ ಪಡೆಯುತ್ತೇನೆ, ಇಲ್ಲದಿದ್ದರೆ ಕಥೆ ಮುಗಿಸುತ್ತೇನೆ ಎಂದೇಳಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ.

ಚಾಂದ್ ಸುಲ್ತಾನ್, ತನ್ನ ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಬಂದಿರುವ ಹಂತಕ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಕೆ ತಂದೆ ಮಹಮದ್ ಮುಸ್ತಫ್ ಲಾರಿ ಚಾಲಕರಾಗಿದ್ದಾರೆ. ಮನೆಯಲ್ಲಿ ತಂದೆಯೊಬ್ಬರ ಶ್ರಮದಿಂದ ಎಲ್ಲವೂ ಸಾಗುವುದು ಕಷ್ಟವಾಗಿತ್ತು. ಚೆನ್ನಾಗಿ ಓದಿದ್ದ ಚಾಂದ್ ಸುಲ್ತಾನ್ ತೆರಿಗೆ ಸಲಹೆಗಾರರಾಗಿ ಕೆಲಸ ಮಾಡುವ ಮೂಲಕ ಕುಟುಂಬಕ್ಕೆ ನೆರವಾಗಿದ್ದರು. ಆದರೆ ಈಗ ಮಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕುಟುಂಬ ಕೈತೊಳೆಯುತ್ತಿದೆ. ಸ್ವಲ್ಪ ದಿನಗಳಲ್ಲಿ ಮದುವೆಯಾಗಬೇಕಿದ್ದ ಮಗಳ ಸಾವು ಕಂಡು ಪೋಷಕರ ಆಕ್ರೋಶ ಮುಗಿಲು ಮುಟ್ಟಿದೆ.
ಕೊಲೆ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಹತ್ಯೆಯಾದ ಬಳಿಕ ಪೊಲೀಸರು ಜಾಗೃತರಾದರು. ಯಾವುದೇ ಕಾರಣಕ್ಕೂ ಆತ ದಾವಣಗೆರೆ ಸಿಟಿ ದಾಟಿ ಹೋಗಬಾರದು ನಾಕಾಬಂಧಿ ಹಾಕಿದ್ದರು. ಕಾರ್ಯಾಚರಣೆ ಶುರು ಮಾಡುತ್ತಿದ್ದಂತೆ ಆರೋಪಿ ಸೈಯ್ಯದ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದಾನೆ. ಆ ಬಳಿಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸದ್ಯ ಆತನಿಗೆ ನೀಡಲಾಗುತ್ತಿದೆ.
ಯುವತಿಯ ಉಸಿರು ನಿಲ್ಲಿಸಿದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.












Click it and Unblock the Notifications