ಬಿಜೆಪಿ ಭ್ರಷ್ಟ ಸಚಿವರನ್ನು ತನಿಖೆ ಮಾಡಿಲ್ಲ ಯಾಕೆ?; ದಾವಣಗೆರೆಯಲ್ಲಿ ಸುರ್ಜೆವಾಲಾ ಪ್ರಶ್ನೆ
ದಾವಣಗೆರೆ, ಅಕ್ಟೋಬರ್, 10: ''ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಸ್ ಕ್ಲೀನ್. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಕಾಲಿಟ್ಟು ಎಂಟು ದಿನಗಳಾಗಿವೆ. ಜಾರಿ ನಿರ್ದೇಶನಾಲಯ ಮೂರು ಬಾರಿ ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್‌ಗೆ ನೋಟಿಸ್ ನೀಡಿದೆ. ಬಿಜೆಪಿಯ ಭ್ರಷ್ಟ ಸಚಿವರನ್ನು ಯಾಕೆ ಪ್ರಶ್ನಿಸಿಲ್ಲ? ಯಾಕೆ ತನಿಖೆಗೆ ಒಳಪಡಿಸಿಲ್ಲ?'' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ದಾವಣಗೆರೆಯಲ್ಲಿ ಪ್ರಶ್ನಿಸಿದರು.
ಬಾಪೂಜಿ ಗೆಸ್ಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಪಿಎಸ್‌ಐ ಹಗರಣ ನಡೆದಿದ್ದರೂ, ಗೃಹ ಸಚಿವರಿಗೆ ಯಾಕೆ ನೊಟೀಸ್ ನೀಡಿಲ್ಲ? ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರೂ ಆರೋಪ ಹೊತ್ತ ಸಚಿವರನ್ನು ಯಾಕೆ ಪ್ರಶ್ನಿಸಿಲ್ಲ? ಶೇಕಡಾ 40ರಷ್ಟು ಕಮಿಷನ್ ಕೇಳುತ್ತಾರೆ ಎಂದು ಸ್ವತಃ ಗುತ್ತಿಗೆದಾರರ ಸಂಘವೇ ಆರೋಪಿಸಿದ್ದರೂ ಆ ಸಚಿವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಕಿರುಕುಳ ನೀಡಲಾಗುತ್ತಿದೆ. ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ಈ ಯಾತ್ರೆ ಕೇವಲ ರಾಹುಲ್ ಗಾಂಧಿ, ಸುರ್ಜೆವಾಲಾ, ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರದ್ದಲ್ಲ. ಇದು ಜನರ ಯಾತ್ರೆ. ಭಾರತ್ ಜೋಡೊ ಯಾತ್ರೆಗೆ ಬಿಜೆಪಿ ಹೆದರಿದೆ ಎಂಬುದು ಈ ಮೂಲಕ ಸಾಬೀತಾಗಿದೆ. ಸಿಬಿಐ ಈಗ ಕ್ಯಾಪಿಟಲ್ ಬ್ಯರೋ ಇನ್‌ವೆಸ್ಟಿಗೇಶನ್ ಆಗಿದೆ. ಇ.ಡಿ. ಬಿಜೆಪಿಯ ಚುನಾವಣಾ ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಶಿವಕುಮಾರ್ ಈಸ್ ಕ್ಲೀನ್ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡರು.

ಭಾರತ ಐಕ್ಯತಾ ಯಾತ್ರೆಗೆ ಭಾರಿ ಬೆಂಬಲ
ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಪ್ರಾರಂಭಿಸಿರುವ ಭಾರತ ಐಕ್ಯತಾ ಯಾತ್ರೆಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಇದು ಬಿಜೆಪಿಯ ನಿದ್ದೆಗೆಡೆಸಿದೆ. ಬಡವರು, ಮಧ್ಯಮ ವರ್ಗದವರು, ನಿರುದ್ಯೋಗಿಗಳು, ಬಿಜೆಪಿ ಸರ್ಕಾರದ ಬೆಲೆ ಏರಿಕೆ ಸೇರಿದಂತೆ ಸಂಕಷ್ಟದಲ್ಲಿರುವ ಜನರು ಬೆಂಬಲ ಸೂಚಿಸುತ್ತಿದ್ದಾರೆ. ಕೇಂದ್ರದ ವಿರುದ್ಧ ಜನರು ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ತಿಂಗಳಿನಿಂದ ಎಲ್ಲಾ ಪ್ರಾಂತ್ಯಗಳಿಗೆ ಹೋಗುತ್ತೇವೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಯಾತ್ರೆ ಸಾಗಲಿದೆ. ಕರ್ನಾಟಕ ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತಿವೆ. ಇದರಿಂದಾಗಿ ಐಟಿಬಿಟಿ ಸಂಸ್ಥೆಗಳು ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಇಲ್ಲಿನ ವಿದ್ಯಾವಂತ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಬೆಂಗಳೂರು ಐಟಿಬಿಟಿಗೆ ಹೆಸರುವಾಸಿ. ಇಲ್ಲಿಗೆ ಬಂದ ಕಂಪೆನಿಗಳು ಹೈದರಾಬಾದ್, ಚೆನ್ನೈಗೆ ಹೋಗುತ್ತಿವೆ. ಇದರಿಂದಾಗಿ ಆರ್ಥಿಕವಾಗಿ ಹೊಡೆತ ಬೀಳುತ್ತಿದೆ ಎಂದು ಆರೋಪಿಸಿದರು.

ಬಜೆಪಿ ಸರ್ಕಾದ ವಿರುದ್ಧ ಸುರ್ಜೆವಾಲಾ ಕಿಡಿ
ಉತ್ತರ ಕನ್ನಡದ ಪರೇಶ್ ಮೆಸ್ತಾ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿದ್ದರು. ಈ ಪ್ರಕರಣದಲ್ಲಿ ಅತ್ಮಹತ್ಯೆ ಎಂಬ ಸಿಬಿಐ ವರದಿ ನೀಡಿತು. ವಿನಾಕಾರಣ ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿ ಆರೋಪ ಮಾಡಿತ್ತು. ಕೊನೆಗೆ ಸತ್ಯ ಹೊರಗೆ ಬಂದಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು. ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ದೇಶ ಕಂಡ ಅತ್ಯಂತ ಭ್ರಷ್ಟ ಸರ್ಕಾರ. 13,000 ಖಾಸಗಿ ಶಾಲೆಗಳು ಶೇಕಡಾ 40 ಕಮಿಷನ್ ಕೇಳುತ್ತಿದೆ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದ್ದವು. ಗುತ್ತಿಗೆದಾರ ಸಂತೋಷ್ ಪಾಟೀಲ್ ಶೇಕಡಾ 40ರಷ್ಟು ಕಮಿಷನ್ ನೀಡಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಮಠದಲ್ಲಿಯೂ ಕಮಿಷನ್ ಕೇಳಿದೆ. ಮಠಗಳನ್ನೂ ಬಿಡದ ಭ್ರಷ್ಟ ಸರ್ಕಾರ ಇದು. ಎಲ್ಲದರಲ್ಲಿಯೂ ಭ್ರಷ್ಟಚಾರ ನಡೆಯುತ್ತಿದೆ. ಈ ಮೂರೇ ಕಾರಣ ಸಾಕು ರಾಜ್ಯದಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಎಂದು ವಾಗ್ದಾಳಿ ನಡೆಸಿದರು.

ಗೃಹ ಸಚಿವರು ಏನು ಮಾಡುತ್ತಿದ್ದಾರೆ?
ಪೊಲೀಸ್ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ. ಡಿಜಿಪಿ, ಎಸ್ಪಿ, ಡಿವೈಎಸ್ಪಿ ಸೇರಿದಂತೆ ಪೊಲೀಸರು ಬಂಧನಕ್ಕೊಳಗಾಗಿರುವುದು ಇದೇ ಮೊದಲು. ಗೃಹ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಏನು ಮಾಡಿದರು? ಸಿಎಂ ಆದ ಬಳಿಕ ಏನು ಮಾಡಿದ್ದಾರೆ? ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ಯಾವ ನೈತಿಕ ಹಕ್ಕಿದೆ. ಗೃಹ ಸಚಿವರು ಇಷ್ಟೆಲ್ಲಾ ಅಕ್ರಮ ಆಗುವಾಗ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ದಾವಣಗೆರೆ ಅತಿ ಮುಖ್ಯವಾದದ್ದು. ಚಿತ್ರದುರ್ಗದ ಹಿರಿಯೂರಿಗೆ ಭಾರತ್ ಜೋಡೊ ಯಾತ್ರೆ ಬರಲಿದ್ದು, ಅಲ್ಲಿಂದ ಬಳ್ಳಾರಿಗೆ ಹೋಗಲಿದೆ. ಅಲ್ಲಿ ದೊಡ್ಡ ರ್ಯಾಲಿ ಮಾಡಲಿದ್ದೇವೆ. ನಾಲ್ಕೂವರೆ ದಿನಗಳ ಕಾಲ ಈ ಭಾಗದಲ್ಲಿ ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಸಂಚರಿಸಲಿದೆ. ಈ ವೇಳೆ ಸಂಕಷ್ಟಗಳನ್ನು ಹೇಳಿಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯಿಂದ ಕೋಮುಗಲಭೆ ಹೆಚ್ಚಳ
ನಾವು ಜೋಡಿಸುವ ಕೆಲಸ ಮಾಡಿದರೆ ಬಿಜೆಪಿಯವರು ಮುರಿಯುತ್ತಾರೆ. ನಾವು ಪ್ರೀತಿ ಕೊಡುತ್ತಿದರೆ, ಅವರು ದ್ವೇಷಿಸುತ್ತಾರೆ. ಹಿಂದೂ ಹಾಗೂ ಮುಸ್ಲಿಂರ ಜೋಡಣೆ ನಮ್ಮ ಕಾರ್ಯವಾಗಿದೆ. ಕೆರಳಿಸುವುದು ಬಿಜೆಪಿಯ ಕೆಲಸವಾಗಿದೆ. ಉತ್ತರ ಪ್ರದೇಶದಲ್ಲಿ ದಲಿತ- ಬ್ರಾಹ್ಮಣ, ಹಿಂದೂ ಮುಸ್ಲಿಂ, ಸಿಖ್ - ಹಿಂದೂ, ಮರಾಠ- ಘೇರ್ ಮರಾಠ ಹೀಗೆ ಜಾತಿ ಜಾತಿಗಳ ಮಧ್ಯೆ ಎಲ್ಲಾ ರಾಜ್ಯಗಳಲ್ಲಿಯೂ ಸಂಘರ್ಷ ಹುಟ್ಟು ಹಾಕುವ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯಂತೆ ಬಿಜೆಪಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಹಿಂಸಾಚಾರದಿಂದ ನೇರವಾಗಿ ಹೊಡೆತ ಬೀಳುವುದು ಯುವಕರು ಹಾಗೂ ಬಡವರಿಗೆ. ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬೀಳಲಿದೆ. ಮುಸ್ಲಿಂ ಹಾಗೂ ಹಿಂದೂಗಳ ನಡುವೆ ಗಲಾಟೆ ಎಬ್ಬಿಸಿದ ಪರಿಣಾಮ ದೊಡ್ಡ ದೊಡ್ಡ ಕಂಪೆನಿಗಳು ಹೈದ್ರಾಬಾದ್‌ಗೆ ಹೋಗಿವೆ. ಇಲ್ಲಿನ ಯುವಕರು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಇದರಿಂದಾಗಿ ಆರ್ಥಿಕತೆ ಮೇಲೆ ಹೊಡೆತ ಬೀಳುತ್ತದೆ. ಯುವಕರಿಗೆ ಕೆಲಸ ಸಿಗಬೇಕು. ಬಡವರು, ಮಧ್ಯಮ ವರ್ಗದವರು, ಹಿಂದುಳಿದವರು ನೆಮ್ಮದಿಯ ಜೀವನ ನಡೆಸುವಂತೆ ಆಗಬೇಕು ಎಂಬುದೇ ಈ ಯಾತ್ರೆಯ ಆಶಯ ಎಂದು ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಂತೆ 75 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾವ ನೇತಾರನೂ ಐಕ್ಯತಾ ಯಾತ್ರೆ ಮಾಡಿಲ್ಲ. ಈ ಯಾತ್ರೆ ಮೂಲಕ ರಾಹುಲ್ ಗಾಂಧಿ ಯಾಕೆ ಬೇಕು ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿದೆ ಎಂದು ಹೇಳಿದರು. ಪೆಟ್ರೋಲ್, ಡೀಸೆಲ್, ಸಿಲಿಂಡರ್, ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ದರಗಳು ಗಗನಕ್ಕೇರಿವೆ. ಪ್ರಧಾನಿ ಮೋದಿ ಸ್ನೇಹಿತರು ಮಾತ್ರ ಶ್ರೀಮಂತರಾಗಿದ್ದಾರೆ. 30 ಲಕ್ಷ ಕೋಟಿ ಲಾಭ ಅವರಿಗೆ ಬರುತ್ತದೆ. ಬಿಜೆಪಿ ಹೊಸ ಈಸ್ಟ್ ಇಂಡಿಯಾ ಕಂಪನಿ ಶುರು ಮಾಡಿದೆ. ಶೇಕಡಾ 10ರಿಂದ 15ರಷ್ಟು ಶ್ರೀಮಂತರು ಉದ್ದಾರ ಆಗುತ್ತಿದ್ದಾರೆ. ಇವರಿಗೆ ಬಿಜೆಪಿ ಸರ್ಕಾರ ಎಲ್ಲವನ್ನೂ ಮಾರಾಟ ಮಾಡುತ್ತಿದೆ. ಅಲ್ಲದೇ ಬಡವರು, ಮಧ್ಯಮ ವರ್ಗದವರು, ಹಿಂದುಳಿದವರು, ದಲಿತರ ಬದುಕು ದುಸ್ತರವಾಗುವಂತೆ ಮಾಡಿರುವ ಕೇಂದ್ರದ ವಿರುದ್ಧ ನಡೆಯುತ್ತಿರುವುದೇ ಈ ಯಾತ್ರೆ ಎಂದರು.
ಡಿಸ್ಕವರಿ ಇಂಡಿಯಾ, ಬಸವಣ್ಣ ಸೇರಿದಂತೆ ಹಲವು ಮಹನೀಯರ ಪುಸ್ತಕಗಳನ್ನು ಓದಿದ್ದೇನೆ. ಮೊದಲು ರಾಜಕಾರಣಿಗಳು ಏನು ಮಾಡುತ್ತಿದ್ದರು. ಈಗ ಏನು ಮಾಡುತ್ತಿದ್ದಾರೆ ಎಂಬ ಕುರಿತು ಮನನ ಮಾಡುತ್ತಿದ್ದೇವೆ. ರಾಹುಲ್ ಗಾಂಧಿ ಜನರು, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಅದೇ ನೀವು ಮೋದಿಗೆ ವಿರುದ್ಧ ಪ್ರಶ್ನೆ ಕೇಳಿದರೆ ಪತ್ರಕರ್ತರನ್ನೇ ಜೈಲಿಗೆ ಕಳುಹಿಸುತ್ತಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಹೆಚ್.ಎಂ. ರೇವಣ್ಣ, ಸಲೀಂ ಅಹ್ಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ. ಶೆಟ್ಟಿ, ಎಸ್. ಮಲ್ಲಿಕಾರ್ಜುನ್, ಶಾಸಕ ಎಸ್. ರಾಮಪ್ಪ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಸದಸ್ಯ ಮುದ್ದೇಗೌಡ್ರು ಗಿರೀಶ್, ಬಸವಂತಪ್ಪ, ಸವಿತಾ ಬಾಯಿ ಮಲ್ಲೇಶ್ ನಾಯ್ಕ್, ಹೆಚ್. ಬಿ. ರಾಜೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications