ಭದ್ರಾ ಡ್ಯಾಂನಿಂದ ಬಲದಂಡೆ, ಎಡದಂಡೆ ನಾಲೆಗಳಿಗೆ ನೀರು, ದಿನಾಂಕ
ದಾವಣಗೆರೆ, ಸೆಪ್ಟೆಂಬರ್ 27; ಭದ್ರಾ ಜಲಾಶಯದಿಂದ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಬಿಡುಗಡೆ ಮಾಡುವ ದಿನಾಂಕವನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕ.ನೀ.ನಿ.ನಿ) ಘೋಷಣೆ ಮಾಡಿದೆ. 71.54 ಟಿಎಂಸಿ ಅಡಿ ಒಟ್ಟು ಸಾಮರ್ಥ್ಯದ ಜಲಾಶಯದಲ್ಲಿ, ಬುಧವಾರದ ನೀರಿನ ಮಟ್ಟ 43.38 ಟಿಎಂಸಿ ಅಡಿ ಆಗಿದೆ.
ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ನಾಲೆಗಳಿಗೆ ನೀರು ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದ್ದಾರೆ. 2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರನ್ನು ಸರದಿಯನ್ವಯ ಹರಿಸಲಾಗುವುದು ಎಂದು ತಿಳಿಸಿದ್ದಾರೆ.

ನೀರು ಹರಿಸುವ ದಿನಾಂಕಗಳು; ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 15 ರವರೆಗೆ ಒಟ್ಟು 20 ದಿನಗಳು ಹಾಗೂ ಅಕ್ಟೋಬರ್ 26 ರಿಂದ ನವೆಂಬರ್ 17 ರವರೆಗೆ ಒಟ್ಟು 23 ದಿನಗಳು ನೀರನ್ನು ಹರಿಸಲಾಗುತ್ತದೆ.
ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಸಲಾಗಿದ್ದು, ಅಕ್ಟೋಬರ್ 1 ರವರೆಗೆ ಒಟ್ಟು 15 ದಿನಗಳು ನೀರನ್ನು ಹರಿಸಲಾಗುತ್ತದೆ. ನಂತರ ಅಕ್ಟೋಬರ್ 12 ರಿಂದ 26 ರವರೆಗೆ ಒಟ್ಟು 15 ದಿನಗಳು ಹಾಗೂ ನವೆಂಬರ್ 6 ರಿಂದ 17 ರವರೆಗೆ ಒಟ್ಟು 12 ದಿನಗಳು ನೀರನ್ನು ಹರಿಸಲಾಗುದು ಎಂದು ಹೇಳಿದ್ದಾರೆ.
ದಾವಣಗೆರೆ ಬಂದ್ ಮಾಡಲಾಗಿತ್ತು; ಈ ಬಾರಿಯ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ನಾಲೆಗೆ ನೀರು ಹರಿಸುವಂತೆ ದಾವಣಗೆರೆ ಜಿಲ್ಲೆಯಲ್ಲಿ ಬೃಹತ್ ಹೋರಾಟ ನಡೆದಿತ್ತು. ದಾವಣಗೆರೆ ಭಾಗದ ರೈತರ ಭತ್ತದ ಬೆಳೆಗಳಿಗೆ ಡ್ಯಾಂನಿಂದ 100 ದಿನ ಪೂರ್ಣ ನೀರು ಕೊಟ್ಟಿಲ್ಲ ಎಂದು ಆರೋಪಿಸಿ ಸೋಮವಾರ ಭಾರತೀಯ ರೈತ ಒಕ್ಕೂಟ ದಾವಣಗೆರೆ ಬಂದ್‌ಗೆ ಸಹ ಕರೆ ನೀಡಿತ್ತು. ಆದರೆ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ರೈತರ ಹೋರಾಟದ ಹಿನ್ನಲೆಯಲ್ಲಿ ಭದ್ರಾ ಜಲಾಶಯದಿಂದ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಬಿಡುಗಡೆ ಮಾಡುವ ಕುರಿತು ಘೋಷಣೆ ಮಾಡಲಾಗಿದೆ. ಭತ್ತದ ಬೆಳೆ ಕಾಳುಕಟ್ಟುವ ಸಂದರ್ಭದಲ್ಲಿಯೇ ನಾಲೆಗಳಿಗೆ ನೀರು ಬಿಡುಗಡೆ ಮಾಡುವುದು ಸ್ಥಗಿತಗೊಳಿಸಿದ್ದ ಕಾರಣ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಡಾ ಸಮಿತಿ ಮೊದಲು ತೀರ್ಮಾನ ಮಾಡಿದಂತೆ 100 ದಿನ ಸತತ ನೀರು ಹರಿಸಿ, ಭತ್ತ ಬೆಳೆಯುವ ರೈತರ ಹಿತ ಕಾಪಾಡಬೇಕು. ಕಾಡಾ ಸಮಿತಿ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭದ್ರಾ ನಾಲೆ ಅಚ್ಚುಕಟ್ಟಿನ ರೈತರನ್ನು ಇಬ್ಭಾಗ ಮಾಡಿದ್ದಾರೆ. ಮೇಲ್ಭಾಗದ ರೈತರ ಹಿತ ಕಾಪಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ದಾವಣಗೆರೆ ಭಾಗದ ರೈತರು ಈಗಾಗಲೇ ಸುಮಾರು 62 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಭತ್ತದ ಬೆಳೆಗೆ ಸಂಪೂರ್ಣ 100 ದಿನ ನೀರು ಹರಿಸುವತ್ತೇವೆ ಎಂದು ಮೊದಲು ಹೇಳಿದ್ದ ಕಾಡಾ ಸೆಪ್ಟೆಂಬರ್ 25ರಂದು ನಾಲೆಗಳಿಗೆ ನೀರು ಹರಿಸುವುದು ನಿಲ್ಲಿಸಿತ್ತು.
ಮಳೆ ಕೊರತೆಯ ಕಾರಣ ನೀರು ಹರಿಸುವುದು ನಿಲ್ಲಿಸಲಾಗಿದೆ ಎಂದು ಹೇಳಿ, ವೇಳಾಪಟ್ಟಿ ಪರಿಷ್ಕರಣೆ ಮಾಡಿ ಕಟ್ಟು ನೀರು ಪದ್ಧತಿ ಅಳವಡಿಕೆ ಮಾಡಿಕೊಳ್ಳಲಾಗಿತ್ತು. ಅದರಂತೆ 10 ದಿನ ನೀರು ನಿಲ್ಲಿಸಲಾಗುತ್ತದೆ ಎಂದು ಹೇಳಿತ್ತು. ಇದು ಆಕ್ರೋಶಕ್ಕೆ ಕಾರಣವಾಗಿತ್ತು.
ಅರೆ ನೀರಾವರಿ ಬೆಳೆಗಳಿಗೆ ಸಲಹೆ; ಈ ವರ್ಷದ ಮುಂಗಾರು ಮಳೆ ಕೈಕೊಟ್ಟ ಬಳಿಕ ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಸಲಹೆ ನೀಡಲಾಗಿತ್ತು. ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳಿಗೆ ಮತ್ತು 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು, ಅರೆ ನೀರಾವರಿ ಬೆಳೆಗಳಿಗೆ ಮಾತ್ರ ನೀರನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿತ್ತು.
ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಿ, ಬೇಸಿಗೆ ಬೆಳೆಗೆ ನೀರು ಉಳಿಸುವ ಸಲುವಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಬಿದ್ದಾಗ ಮಳೆಯ ಪ್ರಮಾಣಕ್ಕನುಗುಣವಾಗಿ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚು ನೀರುಣಿಸುವ ಭತ್ತದ ಬೆಳೆಯನ್ನು ಹೊರತುಪಡಿಸಿ ಅರೆನೀರಾವರಿ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ಕೊಡಲಾಗಿತ್ತು.
ಮಲೆಬೆನ್ನೂರು ಶಾಖಾ ನಾಲೆ ಅಚ್ಚುಕಟ್ಟು ಪ್ರದೇಶದ ಕಬ್ಬು 2800 ಹೆಕ್ಟೇರ್, ತೋಟಗಾರಿಕೆ 182 ಹೆಕ್ಟೇರ್, ಅರೆ ನೀರಾವರಿ 20,792 ಹೆಕ್ಟೇರ್ ಒಳಗೊಂಡಂತೆ ಒಟ್ಟು 23,774 ಹೆಕ್ಟೇರ್, ದೇವರಬೆಳಕೆರೆ ಪಿಕಪ್ ಯೋಜನೆಯ ಅಚ್ಚುಕಟ್ಟು ಪ್ರದೇಶದ ಕಬ್ಬು 500 ಹೆಕ್ಟೇರ್, ತೋಟಗಾರಿಕೆ 458 ಹೆಕ್ಟೇರ್, ಅರೆ ನೀರಾವರಿ 3,332 ಹೆಕ್ಟೇರ್ ಒಳಗೊಂಡಂತೆ ಒಟ್ಟು 4280 ಹೆಕ್ಟೇರ್ ಹಾಗೂ ಆನವೇರಿ ಶಾಖಾ ನಾಲೆ ಅಚ್ಚುಕಟ್ಟು ಪ್ರದೇಶದ ಕಬ್ಬು 200 ಹೆಕ್ಟೇರ್, ತೋಟಗಾರಿಕೆ 121 ಹೆಕ್ಟೇರ್, ಅರೆ ನೀರಾವರಿ 5998 ಹೆಕ್ಟೇರ್ ಒಳಗೊಂಡಂತೆ ಒಟ್ಟು 6319 ಹೆಕ್ಟೇರ್ ಮಾದರಿ ಬೆಳೆ ಬೆಳೆಯಲು ಹಾಗೂ ಈ ಬೆಳೆಗಳನ್ನು ಬೆಳೆಯದೆ ಭತ್ತ ಮತ್ತು ಇನ್ನಿತರೆ ಬೆಳೆ ಬೆಳೆದರೆ ಜಲ ಸಂಪನ್ಮೂಲ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ತಿಳಿಸಲಾಗಿತ್ತು.












Click it and Unblock the Notifications