ಬೆಣ್ಣೆನಗರಿಯಲ್ಲಿ ವೈಕುಂಠ ಏಕಾದಶಿ ಸಡಗರ: ವೆಂಕಟೇಶ್ವರ ಸನ್ನಿಧಾನದಲ್ಲಿ ನೆರೆದ ಭಕ್ತಗಣ
ದಾವಣಗೆರೆ, ಜನವರಿ, 02: ದೇಶದೆಲ್ಲೆಡೆ ಇಂದು ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದೆ. ಹಾಗೆಯೇ ಈ ವರ್ಷದ ಆರಂಭದಲ್ಲಿ ಬಂದಿರುವ ವೈಕುಂಠ ಏಕಾದಶಿ ಸಡಗರ ಬೆಣ್ಣೆನಗರಿಯಲ್ಲಿ ಹೆಚ್ಚಿತ್ತು. ಬೆಳಗ್ಗೆಯಿಂದಲೇ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಸರದಿ ಸಾಲಿನಲ್ಲಿ ನಿಂತು ವೆಂಕಟರಮಣನ ದರ್ಶನ ಪಡೆದು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ವೈಕುಂಠ ಏಕಾದಶಿ ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಗಳಿಗಿಂತಲೂ ವಿಶೇಷ ದಿನವಾಗಿದೆ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ಶ್ರೀವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವರ ಅವಾಸ ಸ್ಥಾನವಾದ ವೈಕುಂಠದ ಬಾಗಿಲು ತೆರೆದಿರುತ್ತದೆ ಎನ್ನುವ ನಂಬಿಕೆ ಮೊದಲಿನಿಂದಲೂ ಇದೆ. ದಾವಣಗೆರೆಯ ಎಂಸಿಸಿಬಿ ಬ್ಲಾಕ್‌ನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸನ ದರ್ಶನ ಮಾಡಲು ಜನಸಂದಣಿ ಹೆಚ್ಚಾಗಿತ್ತು. ಭಕ್ತರು ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ಕಾದು ನಿಂತಿದ್ದರು. ಏಕಾದಶಿ ನಿಮಿತ್ತ ದೇವಸ್ಥಾನದ ಆಡಳಿತ ಮಂಡಳಿ ಎಲ್ಲಾ ಏರ್ಪಾಡು ಮಾಡಿಕೊಂಡಿತ್ತು. ಅದರೂ ಭಕ್ತರು ದೇವರ ದರ್ಶನಕ್ಕೆ ಮುಗಿಬಿದ್ದ ಪ್ರಸಂಗವೂ ನಡೆಯಿತು.

ಭಕ್ತಾಧಿಗಳಿಗೆ ಲಡ್ಡು ಪ್ರಸಾದ ವಿತರಣೆ
ಈ ವೇಳೆ ಕೆಲವರಿಗೆ ದೇವರ ದರ್ಶನವಾದರೆ, ಇನ್ನೂ ಕೆಲವರು ಅವಸರದಲ್ಲಿ ದೇವರ ದರ್ಶನ ಆಗಲಿಲ್ಲ ಎಂದು ಅಸಮಾಧಾನದಿಂದಲೇ ಹೊರಗೆ ಬಂದರು. ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಲಡ್ಡು ಪ್ರಸಾದ, ತುಳಸಿ, ಹೂವು ವಿತರಿಸುವ ವ್ಯವಸ್ಥೆ ಮಾಡಿತ್ತು. ಪ್ರಸಾದ ಸ್ವೀಕರಿಸಿದ ಭಕ್ತರು ಧನ್ಯತಾ ಭಾವ ಮೆರೆದರು. ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠ ದ್ವಾರವನ್ನು ಪ್ರವೇಶಿಸಿದರೆ, ಅಂದರೆ ದೇವಾಲಯದ ಹೊರ ಭಾಗದಿಂದ ಒಳ ಭಾಗಕ್ಕೆ ದ್ವಾರದ ಮೂಲಕ ಪ್ರವೇಶಿಸಿದರೆ ಸಾಕ್ಷಾತ್ ವೈಕುಂಠಕ್ಕೆ ಪ್ರವೇಶ ಮಾಡಿದಂತೆ ಎನ್ನುವ ನಂಬಿಕೆ ಇದೆ. ಈ ರೀತಿ ಪ್ರವೇಶ ಮಾಡಿದರೆ ಮೋಕ್ಷ ಸಿಗುವುದೆಂಬ ಪ್ರತೀತಿ ಇದೆ. ವೈಕುಂಠ ಏಕಾದಶಿಯ ದಿನ ವೈಕುಂಠದ ಸ್ವರ್ಗದ ಅಥವಾ ವಿಷ್ಣುಲೋಕದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ಏಕಾದಶಿಯ ದಿನದಂದು ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯೂ ಕೂಡ ಹಿಂದೂ ಧರ್ಮೀಯರಲ್ಲಿದೆ.

ಉಪವಾಸ ಮಾಡುವ ಸಂಪ್ರದಾಯವೂ ಇದೆ
ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ ಹನ್ನೊಂದನೇಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ. ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನದಂದು ಕೆಲವರು ಅನ್ನ ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತ ಮಾಡುವುದು ವಿಶೇಷವಾಗಿದೆ.












Click it and Unblock the Notifications