ಉಕ್ಕಡಗಾತ್ರಿ; ತುಂಗಾಭದ್ರಾ ನದಿಯಲ್ಲಿ ಮುಳುಗಿದ ಇಬ್ಬರು ಸಹೋದರಿಯರು
ದಾವಣಗೆರೆ, ಸೆಪ್ಟೆಂಬರ್, 05: ಹರಿಹರ ತಾಲೂಕಿನ ಮಲೆಬೆನ್ನೂರು ಬಳಿ ಇರುವ ಉಕ್ಕಡಗಾತ್ರಿಯ ತುಂಗಾಭದ್ರಾ ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದ ಸಹೋದರಿಯರು ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ವೀರಾಚಾರಿ ಎಂಬುವವರ ಮಕ್ಕಳಾದ ಚೈತ್ರಾ ಹಾಗೂ ಪುಷ್ಪಾ ನಾಪತ್ತೆ ಆಗಿದ್ದಾರೆ. ಹೊಳಲ್ಕೆರೆ ತಾಲೂಕಿನ ಗುಂಡೇರಿ ಗ್ರಾಮದ ಕಾರ್ತಿಕ್ ಅವರ ಜೊತೆ ಚೈತ್ರಾ ಅವರು ವಿವಾಹ ಆಗಿದ್ದರು. ಇನ್ನು ಪುಷ್ಪಾ ಎನ್ನುವ ಯುವತಿ ದಾವಣಗೆರೆಯ ಕಾಲೇಜುವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆ ಆಗಿರುವ ಚೈತ್ರಾ ಹಾಗೂ ಪುಷ್ಪಾ ಬದುಕಿರುವ ಸಾಧ್ಯತೆ ತೀರಾ ಕಡಿಮೆ ಎಂದು ಅಲ್ಲಿನ ಸ್ಥಳಿಯರು ಹೇಳುತ್ತಿದ್ದಾರೆ.
ನದಿಯಲ್ಲಿ ಕಣ್ಮರೆಯಾದ ಸಹೋದರಿಯರು: ಚೈತ್ರಾ ಹಾಗೂ ಪುಷ್ಪಾ ಎನ್ನುವ ಇಬ್ಬರು ಸಹೋದರಿಯರು ಕುಟುಂಬ ಸಮೇತ ಉಕ್ಕಡಗಾತ್ರಿಯ ಸುಕ್ಷೇತ್ರಕ್ಕೆ ಕರಿಬಸವೇಶ್ವರ ಸ್ವಾಮಿ ದರ್ಶನಕ್ಕೆ ಬಂದಿದ್ದರು. ಯಾತ್ರಾರ್ಥಿಗಳು ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಹಾಕಿಕೊಂಡು ಇವರಿಬ್ಬರು ಮುಳುಗಿದ್ದಾರೆ. ಅಕ್ಕಪಕ್ಕದಲ್ಲಿದ್ದವರು ಎಷ್ಟೇ ಪ್ರಯತ್ನಿಸಿದರೂ ಇಬ್ಬರು ಸಹೋದರಿಯರನ್ನು ಮೇಲಕ್ಕೆ ತರಲು ಆಗಲಿಲ್ಲ. ಇನ್ನು ಕಣ್ಮರೆ ಆದವರ ಹುಡುಕಾಟ ಮುಂದುವರಿದಿದೆ. ಅಗ್ನಿಶಾಮದ ದಳ ಸಿಬ್ಬಂದಿ ಕಾಣೆ ಆದ ಸಹೋದರಿಯರ ಹುಡುಕಾಟದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಜಿಲ್ಲೆಯಲ್ಲಿ ಮುಂದುವರೆದ ಮಳೆ ಆರ್ಭಟ
ಮತ್ತೊಂದೆಡೆ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಅಪಾರ ಪ್ರಮಾಣ ಹಾನಿ ಸಂಭವಿಸಿದೆ. ಬೆಳೆಗಳು ಜಲಾವೃತವಾಗಿ ರೈತರು ಕಂಗಾಲಾಗಿದ್ದಾರೆ. ಚನ್ನಗಿರಿ ತಾಲೂಕು ಒಂದರಲ್ಲಿಯೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ಜಲಾವೃತವಾಗಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಿಕೆ ಕೊಯ್ಲಿನ ವೇಳೆಯಲ್ಲಿ ಭಾರಿ ಮಳೆ ಸುರಿದಿದ್ದು, ರೈತರಿಗೆ ಆಘಾತವನ್ನು ಉಂಟು ಮಾಡಿದೆ.
ಚನ್ನಗಿರಿ ತಾಲೂಕಿನಲ್ಲಿ 599 ಮನೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಅದರಲ್ಲಿ 540 ಮನೆಗಳಿಗೆ ಪರಿಹಾರ ಮಂಜೂರಾತಿ ಬಾಕಿ ಇದೆ. ರುದ್ರಾಪುರ ಗ್ರಾಮದಲ್ಲಿ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಳೆದ ಹದಿನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ವರುಣ ಆರ್ಭಟ ಶುರು ಮಾಡಿದ್ದಾನೆ. ಜಿಲ್ಲೆಯಲ್ಲಿ 144 ಮಿಲಿ ಮೀಟರ್‌ಗೂ ಹೆಚ್ಚು ಮಳೆ ದಾಖಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 13,608 ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಆಗಿದೆ. ಈಗಾಗಲೇ ಪರಿಹಾರ ಮಂಜೂರಾತಿಗಾಗಿ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವನೆವನ್ನು ಸಲ್ಲಿಸಿದೆ.
ಮತ್ತೊಂದೆಡೆ ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆ ನೀರು ರಸ್ತೆ ಮೇಲೆ ಚರಂಡಿಯಂತೆ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಚರಂಡಿ, ರಾಜಕಾಲುವೆಗಳನ್ನು ತೆರವುಗೊಳಿಸಬೇಕು. ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಂಡ ಬಸ್ ಸ್ಟ್ಯಾಂಡ್, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮುಂದಿನ ಏಪ್ರಿಲ್ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.

ಪರಿಹಾರ ಕಲ್ಪಿಸುವಂತೆ ಪಟ್ಟು
ಹರಿಹರದ ಗಂಗಾ ನಗರ ಹಾಗೂ ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ಬಳಿ ಪ್ರತಿ ಬಾರಿಯಂತೆ ಈ ಬಾರಿಯೂ ಹೊಳೆ ನೀರು ಹರಿಯುತ್ತಿದ್ದು, ಇಲ್ಲಿನ ಪ್ರದೇಶದ ಮನೆಗಳು ಜಲಾವೃತವಾಗಿವೆ. ಸೂಕ್ತ ಸೂರು ಕಲ್ಪಿಸುವಂತೆ ಜನರು ಒತ್ತಾಯಿಸುತ್ತಾ ಬಂದಿದ್ದರೂ ಬೇಡಿಕೆ ಮಾತ್ರ ಇದುವರೆಗೂ ಈಡೇರಿಲ್ಲ. ಈಗ ಲಭ್ಯವಿರುವ ಕಡೆ ತಕ್ಷಣ ಜಾಗ ಗುರುತಿಸಿ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ಕ್ರಮವಹಿಸಿ. ಎಷ್ಟು ದಿನ ಹೀಗೆಯೇ ಪರಿಹಾರ ಕೊಟ್ಟು ಕೂರುತ್ತೀರಿ. ಈ ಸಮಸ್ಯೆ ಇಲ್ಲಿಗೆ ಮುಗಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದ್ದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖ ಆಗಿದ್ದರೂ ಕೆಲಸ ವೇಗವಾಗಿ ನಡೆಯುತ್ತಿಲ್ಲ ಎಂದು ಮಳೆ ಹಾನಿಗೊಳಗಾದವರು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications