ದಾವಣಗೆರೆ : ರಸ್ತೆ ಅಪಘಾತ, ಮಾಜಿ ಶಾಸಕರ ಸಂಬಂಧಿ ಸಾವು
ದಾವಣಗೆರೆ, ಜೂನ್ 14 : ದಾವಣಗೆರೆಯ ಬಾಡಾ ಕ್ರಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು ಪಕ್ಕದ ರಸ್ತೆಗೆ ಬಿದ್ದಿತು. ಅದಕ್ಕೆ ಲಾರಿ ಡಿಕ್ಕಿ ಹೊಡೆದು ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಮೃತಪಟ್ಟವರನ್ನು ಶಿವಮೊಗ್ಗ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಕಾಶ್ ಪುತ್ರ ಜೈದೀಪ್ ಗೌಡ (23), ಆತನ ಸ್ನೇಹಿತ ದಾವಣಗೆರೆ ಮೂಲದ ಸರೋವರ ಸತ್ಯನಾರಾಯಣ (25) ಎಂದು ಗುರುತಿಸಲಾಗಿದೆ.
ಮಾಜಿ ಶಾಸಕರ ಸಂಬಂಧಿಗಳು : ಜೈದೀಪ್ ಗೌಡ ದಾವಣಗೆರೆಯ ಧವನ್ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದರು. ಹೊನ್ನಾಳಿಯ ಮಾಜಿ ಶಾಸಕ ಜಿ.ಡಿ.ಶಾಂತನಗೌಡ ಅವರ ಸಹೋದರ ಬಸವನಗೌಡ ಅವರ ಮೊಮ್ಮಗ.

ಚಿತ್ರದುರ್ಗದಿಂದ ದಾವಣಗೆರೆಗೆ ಬರುವಾಗ ಮಹೀಂದ್ರ ಎಕ್ಸ್‌ಯುವಿ 500 ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ನಂತರ ಪಕ್ಕದ ರಸ್ತೆಗೆ ಬಿದ್ದಿದೆ. ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ನಾಲ್ಕು ಪಲ್ಟಿಯಾಗಿದ್ದು ಮೃತದೇಹ ಗುರುತು ಸಿಗದಷ್ಟು ಛಿದ್ರವಾಗಿದ್ದವು.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬುಧವಾರ ರಾತ್ರಿ ಈ ಅಪಘಾತ ನಡೆದಿದ್ದು, ಕೆಲಕಾಲ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಕ್ರೇನ್ ಸಹಾಯದಿಂದ ಕಾರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಈ ಅಪಘಾತದಲ್ಲಿ ಲಾರಿ ಚಾಲಕ ಕೃಷ್ಣಮೂರ್ತಿ, ಕ್ಲೀನರ್ ಸಹ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications