Tungabhadra Dam: ತುಂಗಾಭದ್ರ ಡ್ಯಾನಿಂದ 68,599 ಕ್ಯೂಸೆಕ್ ನೀರು ಬಿಡುಗಡೆ; ಜನರಿಗೆ ಪ್ರಮುಖ ಸೂಚನೆ ಏನು?
Tungabhadra Dam: ರಾಜ್ಯದಲ್ಲಿ ಮುಂಗಾರು ಚರುಕು ಪಡೆದಿದೆ. ಪರಿಣಾಮ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮತ್ತೊಂದೆಡೆ ಪ್ರಮುಖ ಜಲಾಶಯಗಳ ಒಳಹರಿವು ಕೂಡ ಹೆಚ್ಚಳ ಆಗುತ್ತಿದ್ದು, ಹೆಚ್ಚುವರಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ. ಹಾಗೆಯೇ ಇದೀಗ ತುಂಗಭದ್ರಾ ಡ್ಯಾಂನಿಂದ ನೀರನ್ನು ಹರಿಸಲಾಗುತ್ತಿದೆ. ಇದು ಯಾವೆಲ್ಲಾ ಜಿಲ್ಲೆಗಳ ಮೇಲೆ ಪರಿಣಾಮ ಬೀರಲಿದೆ ಹಾಗೂ ಜಿಲ್ಲಾಧಿಕಾರಿಗಳ ಸೂಚನೆ ಏನೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅದರಲ್ಲೂ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ರಣಭೀಕರ ಮಳೆ ಮುಂದುವರೆದ ಪರಿಣಾಮ ಈ ಭಾಗಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ತುಂಗಭದ್ರಾ ನದಿಯಲ್ಲಿ 1,12,170 ಕ್ಯೂಸೆಕ್ ನೀರು ಹರಿಯುತ್ತಿದೆ. ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಜನರು ನದಿಪಾತ್ರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದ್ದಾರೆ.

ಈಗಾಗಲೇ ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಕೆಲವು ಡ್ಯಾಂಗಳು ತುಂಬಿದ್ದು, ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಆಯಾ ಜಿಲ್ಲಾಡಳಿತಗಳು ಈಗಾಗಲೇ ಸೂಚನೆ ನೀಡಿವೆ. ಹಾಗೆಯೇ ಇದಿಗ ತುಂಗಭದ್ರ ಡ್ಯಾಂ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆ ದಾವಾಣಗೆರೆ ಜಿಲ್ಲಾಧಿಕಾರಿ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
ಇದೀಗ ತುಂಗಾಭದ್ರ ಡ್ಯಾನಿಂದ 68,599 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ ಹಾಗೂ ಭದ್ರಾ ಡ್ಯಾಂ ಭರ್ತಿಯಾಗುವ ಹಂತದಲ್ಲಿದ್ದು, 39,017 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿರುತ್ತದೆ. ಪ್ರಸ್ತುತ ತುಂಗಭದ್ರ ನದಿಯಲ್ಲಿ ಅಪಾಯ ಮಟ್ಟ ಮೀರಿ 1,12,170 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಪರಿಣಾಮ ಹೊನ್ನಾಳಿ, ನ್ಯಾಮತಿ ಮತ್ತು ಹರಿಹರ ತಾಲ್ಲೂಕುಗಳ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆದರೂ ಆಶ್ಚರ್ಯವಿಲ್ಲ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಜನರಿಗೆ ಈ ಸೂಚನೆ ನೀಡಿದ್ದಾರೆ.
ಇನ್ನು ಇದೀಗ ಮುಂಜಾಗ್ರತಾ ಕ್ರಮವಾಗಿ ಹೊನ್ನಾಳಿ ಪಟ್ಟಣದ ನದಿ ತೀರದ ಬಾಲರಾಜ್‍ಘಾಟ್ ಪ್ರದೇಶದ ಬಳಿ ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಅಲ್ಲಿ 8 ಕುಟುಂಬಗಳ 33 ಜನರನ್ನು ಸ್ಥಳಾಂತರ ಮಾಡಿ ಸಂತ್ರಸ್ತರಿಗೆ ಬೇಕಾದ ಸೌಕತರ್ಯವನ್ನು ಹಾಗೂ ವೈದ್ಯಕೀಯ ಸೇವೆಗಳನ್ನು ನೀಡುವ ಕೆಲಸ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹರಿಹರ ಬಳಿಯ ಗಂಗಾನಗರ ಬಳಿ ಎಪಿಎಂಸಿ ಭವನದಲ್ಲಿ ಹಾಗೂ ನ್ಯಾಮತಿ ತಾಲ್ಲೂಕು ಚೀಲೂರು ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆ ಮುಂಜಾಗ್ರತಾ ದೃಷ್ಟಿಯಿಂದ ಜನ ಹಾಗೂ ಜಾನುವಾರುಗಳು ನದಿಗೆ ಇಳಿಯದಂತೆ ತಿಳಿಸಿದೆ. ಅಲ್ಲದೆ, ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ಬಳಿ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ನಿಷೇಧ ಹೇರಿದೆ.
ಒಟ್ಟಿನಲ್ಲಿ ಡ್ಯಾನಿಂದ ನೀರು ಬಿಟ್ಟಿದ್ದು ಒಂದು ಕಡೆಯಾದ್ರೆ, ಮತ್ತೊಂದೆಡೆ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ರಣಭೀಕರ ಮಳೆ ಮುಂದುವರೆದ ಪರಿಣಾಮ ತುಂಗಾಭದ್ರ ನದಿ ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದೆ. ಇನ್ನೂ ಹೀಗೆ ಮಳೆ ಮುಂದುವರೆದರೆ, ಏನೆಲ್ಲಾ ಅನಾಹುತಗಳು ಕಾದಿವೆಯೋ ಎನ್ನುವ ಆತಂಕದಲ್ಲಿ ನದಿ ತೀರದ ಜನರದ್ದಾಗಿದೆ.












Click it and Unblock the Notifications