ನಾಲ್ಕೈದು ತಲೆಮಾರುಗಳಿಂದ ಈ ಗ್ರಾಮದಲ್ಲಿಲ್ಲ ದೀಪಾವಳಿ ಆಚರಣೆ: ಕರಾಳ ದಿನ ಆಗಿರುವುದೇಕೆ ಬೆಳಕಿನ ಹಬ್ಬ..?
ದಾವಣಗೆರೆ, ನವೆಂಬರ್ 12: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿದೆ. ಎಲ್ಲರೂ ಹಬ್ಬದ ಖುಷಿಯಲ್ಲಿದ್ದಾರೆ. ಹಬ್ಬವೂ ಜೋರಾಗಿದೆ. ಖರೀದಿಯೂ ಬಿರುಸು ಪಡೆದಿದೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಬೆಳಕಿನ ಹಬ್ಬದ ಸಡಗರ, ಸಂಭ್ರಮ ಕಂಡು ಬರುವುದಿಲ್ಲ. ಯಾಕೆ ಎನ್ನುವುದದೇ ಕುತೂಹಲ.
ಕತ್ತಲೆ ಹೋಗಲಾಡಿಸಿ ಬೆಳಕು ತರುವ ಹಬ್ಬವೇ ದೀಪಾವಳಿ. ದೀಪದಿಂದ ದೀಪವಾ ಹಚ್ಚಬೇಕು ಮಾನವ ಎಂಬಂತೆ ದೀಪಗಳನ್ನು ಹಚ್ಚಿ ಎಲ್ಲರೂ ಖುಷಿಪಡುತ್ತಾರೆ. ಮಣ್ಣಿನಿಂದ ಮಾಡಿದ, ತರಹೇವಾರಿ ದೀಪಗಳನ್ನು ಹಚ್ಚಿ ಹಬ್ಬವನ್ನು ಖುಷಿಖುಷಿಯಾಗಿ ಎಲ್ಲರೂ ಆಚರಿಸುತ್ತಾರೆ. ಈ ಗ್ರಾಮದಲ್ಲಿ ಪಟಾಕಿ ಶಬ್ಧ ಕೇಳಿ ಬರೋದಿಲ್ಲ. ಮಕ್ಕಳಿಗೂ ಪಟಾಕಿ ಅಂದರೆ ಅಚ್ಚುಮೆಚ್ಚು. ಆದರೆ ಈ ಗ್ರಾಮದ ಮಕ್ಕಳು ಪಟಾಕಿಯನ್ನೇ ಸುಡುವಂತಿಲ್ಲ.

ನಾಲ್ಕೈದು ತಲೆಮಾರಿನಿಂದಿಲ್ಲ ಆಚರಣೆ
ಇಲ್ಲಿ ನಾಲ್ಕೈದು ತಲೆಮಾರುಗಳಿಂದ ಹಬ್ಬದ ಆಚರಣೆ ಇಲ್ಲ. ಇದಕ್ಕೆ ಕಾರಣಗಳನ್ನೂ ಗ್ರಾಮಸ್ಥರು ನೀಡುತ್ತಾರೆ. ಅಂದ ಹಾಗೆ ದೀಪಾವಳಿ ರಂಗು ಇಲ್ಲದ ಗ್ರಾಮ ಇರೋದು ದಾವಣಗೆರೆ ತಾಲೂಕಿನಲ್ಲಿ. ಲೋಕಿಕೆರೆ ಗ್ರಾಮದಲ್ಲಿ ನೂರಾರು ವರ್ಷಗಳಿಂದ ದೀಪಾವಳಿ ಆಚರಿಸುತ್ತಿಲ್ಲ.
ಈ ಗ್ರಾಮದ ಜನರಿಗೆ ದೀಪಾವಳಿ ಹಬ್ಬ ಬಂದರೆ ಕರಾಳ ದಿನ ನೆನಪಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ಬೆಳಕಿನ ಹಬ್ಬದ ದಿನದಂದು ಬೆಳಕು ಮೂಡಿದರೆ ಇಲ್ಲಿ ಕತ್ತಲು ಆವರಿಸಿರುತ್ತದೆ. ದೇಶಾದ್ಯಂತ ಪಟಾಕಿ ಸಿಡಿಸಿ, ದೀಪಗಳನ್ನು ಹಚ್ಚಿ ದೀಪಾವಳಿ ಹಬ್ಬ ಆಚರಿಸಿದರೆ. ಲೋಕಿಕೆರೆ ಗ್ರಾಮದಲ್ಲಿ ಹಬ್ಬ ಸೆಲೆಬ್ರೆಟ್ ಮಾಡದೇ ಮೂಢನಂಬಿಕೆಗೆ ಈಗಲೂ ಜೋತು ಬಿದ್ದಿದ್ದಾರೆ.
ಯಾಕೆ ಕರಾಳ ದಿನ...?
ದೀಪಾವಳಿ ಹಬ್ಬದ ಸಮಯದಲ್ಲಿ ಸುಮಾರು ವರ್ಷಗಳ ಹಿಂದೆ ಗ್ರಾಮದ ಹಿರಿಯರು ಕಾಡಿಗೆ ಸೌದೆ ತರಲು ಹೋಗಿದ್ದರಂತೆ. ಆ ಬಳಿಕ ಮತ್ತೆ ವಾಪಸ್ ಬರಲೇ ಇಲ್ಲ. ಎಷ್ಟು ದಿನ ಕಾದರೂ, ಎಲ್ಲಾ ಕಡೆ ಹುಡುಕಾಡಿದರೂ, ಕಾಡಿಗೆ ಹೋಗಿ ನೋಡಿದರೂ ಸಿಗಲೇ ಇಲ್ಲ. ಹಾಗಾಗಿ, ನಾಲ್ಕಾರು ತಲೆಮಾರುಗಳಿಂದ ಹಬ್ಬ ಆಚರಣೆ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ.

ಈ ದಿನದಲ್ಲಿ ಎಲ್ಲಾ ಬೆಳೆಗಳು ಫಸಲಿಗೆ ಬಂದಿರುತ್ತವೆ. ಬಂದ ಲಾಭದಿಂದ ಹಳೆ ಬಾಕಿ ತೀರಿಸಿ, ಹೊಸ ವಸ್ತು ಖರೀದಿಸಿ ಹೊಸ ಲೆಕ್ಕ ಶುರು ಮಾಡುವುದು ದೀಪಾವಳಿಯ ಹಳೆ ಶಿಷ್ಟಾಚಾರ. ಧನಲಕ್ಷ್ಮಿ ಪೂಜೆಯೇ ಈ ಹಬ್ಬದ ಸಂಭ್ರಮ. ದೀಪಾವಳಿಯ ಈ ಖರೀದಿ ಸಂಭ್ರಮ ಈಗಂತೂ ಹೊಸ ಎತ್ತರಕ್ಕೇರಿದೆ. ಮನೆ, ಮನೆಗಳ ಸಂಭ್ರಮ ಹೆಚ್ಚಿಸುವ ಸಲಕರಣೆಗಳ ಖರೀದಿಗೆ ಸಾವಿರ ವೈವಿಧ್ಯಗಳು ಹಿತವಾಗಿ ತೆರೆದುಕೊಳ್ಳುವುದರಿಂದ ದೀಪಾವಳಿ ಕಾತರವನ್ನು ಉಂಟು ಮಾಡುತ್ತದೆ. ಬಡವರಿಂದ ಹಿಡಿದು ಶ್ರೀಮಂತರವರೆಗಿನ ಸರ್ವರಿಗೂ ಹಿತಕರವಾಗಿರುವ ಬೆಲೆ ಮತ್ತು ಗುಣಮಟ್ಟದ ವಿಸ್ತಾರ ಲೋಕ ಈಗಿನ ದೀಪಾವಳಿಯ ವಿಶೇಷ.
ಈ ಎಲ್ಲಾ ಆಚರಣೆ ಮತ್ತು ಹೊಸ ವಸ್ತುಗಳ ಖರೀದಿಗೆ ನಾಲ್ಕೈದು ತಲೆಮಾರುಗಳಿಂದ ಲೋಕಿಕೆರೆ ಗ್ರಾಮದಲ್ಲಿ ಬ್ರೇಕ್ ಬಿದ್ದಿದೆ. ಸಣ್ಣ ಒಂದು ಮೂಢನಂಬಿಕೆಗೆ ಮೊರೆ ಹೋಗಿರುವ ಈ ಊರಿನಲ್ಲಿ ಮುಕ್ಕಾಲು ಮಂದಿ ಇರುವ ಕುರುಬ ಜನಾಂಗದ ಮಂದಿ ಈ ಹಬ್ಬವನ್ನು ಮರೆತೇ ಹೋಗಿದ್ದೇವೆ ಎಂದು ಗ್ರಾಮದ ಮುಖಂಡ ಅಂಜಿನಪ್ಪ ಹೇಳಿದ್ದಾರೆ.
ಇಲ್ಲಿ ದೀಪಾವಳಿ ಆಚರಿಸದಿರಲು ಎರಡು ಕಾರಣಗಳನ್ನು ಗ್ರಾಮಸ್ಥರು ನೀಡುತ್ತಾರೆ. ಈ ಗ್ರಾಮದ ಯುವಕನೊಬ್ಬ ಚಿತ್ರದುರ್ಗದಲ್ಲಿ ಮದುವೆ ಆಗಿರುತ್ತಾನೆ. ಈ ವೇಳೆ ಆ ನವ ವರ ಹಾವು ಕಚ್ಚಿ ಸಾವು ಕಂಡಿರುತ್ತಾರೆ. ಇವರ ಪತ್ನಿಗೆ ಮತ್ತೊಂದು ಮದುವೆ ಮಾಡಲು ಮುಂದಾದಾಗ ಈ ಮಹಿಳೆ ನನಗೆ ಈಗಾಗಲೇ ಮದುವೆ ಆಗಿದೆ. ಅವನು ಸತ್ತರೂ ಅವನೇ ನನ್ನ ಪತಿ. ನಾನು ಮತ್ತೊಂದು ಮದುವೆ ಆಗಲಾರೆ ಎಂದು ದೀಪಾವಳಿ ದಿನವೇ ಅಗ್ನಿಗೆ ಆಹುತಿಯಾದಳಂತೆ. ಅಂದಿನಿಂದ ಇಂದಿನವರೆಗೆ ಮಹಿಳೆಯು ಅಗ್ನಿ ಪ್ರವೇಶ ಮಾಡಿದ ಕಾರಣಕ್ಕೆ ಹಬ್ಬ ಆಚರಿಸುವುದಿಲ್ಲ. ಸೂತಕ ಇರುವ ಕಾರಣಕ್ಕೆ ಹಬ್ಬ ಮಾಡುವುದಿಲ್ಲ ಜೊತಗೆ ದೀಪಾವಳಿ ದಿನವೇ ಊರಿನಲ್ಲಿ ಕತ್ತಲೆ ಆವರಿಸಿರುತ್ತದೆ ಎನ್ನುತ್ತಾರೆ ಲೋಕಿಕೆರೆ ಗ್ರಾಮದ ಮುಖಂಡರು.

ಈ ಗ್ರಾಮಕ್ಕೆ ದೀಪಾವಳಿ ಹಬ್ಬವೇ ಕಂಟಕವಾಗಿ ಪರಿಣಮಿಸಿದೆ. ಮತ್ತೊಂದು ಕಥೆಯನ್ನೂ ಹಿರಿಯರು ಹೇಳುತ್ತಾರೆ. ನಾಲ್ಕೈದು ಯುವಕರು ಹಬ್ಬದ ದಿನ ಪೂಜೆ ವಸ್ತುಗಳಾದ ಕಾಚಿ ಕಡ್ಡಿ, ಉತ್ರಾಣಿ ಕಡ್ಡಿ ತರುವುದಕ್ಕಾಗಿ ಹೋದವರು ಇಂದಿಗೂ ಗ್ರಾಮಕ್ಕೆ ಮರಳಿ ಬಂದಿಲ್ಲ. ಅವರು ಬದುಕಿದ್ದಾರೋ, ಇಲ್ಲವೋ ಎಂಬುದು ಇನ್ನೂ ನಿಗೂಢ. ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚಿದೆ ಎಂಬುದು ಗ್ರಾಮಸ್ಥರ ಮಾತು. ಈ ಕಾರಣಕ್ಕಾಗಿ ದೀಪಾವಳಿ ದಿನದಂದು ಹಬ್ಬ ಆಚರಿಸಲು ಮುಂದಾದರೆ ಏನಾದರೊಂದು ಅನಾಹುತ ಸಂಭವಿಸುತ್ತದೆ. ಹಾಗಾಗಿ, ಹಬ್ಬ ಆಚರಣೆ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ವಿವರಿಸುತ್ತಾರೆ.
ಅಂದಿನಿಂದ ಇಂದಿನವರೆಗೆ ಇಲ್ಲಿ ದೀಪಾವಳಿ ಇಲ್ಲ. ಆದರೆ ಈಗಿನ ಯುವಕರು ಎಲ್ಲರೂ ಹಬ್ಬ ಮಾಡುವುದು ನೋಡಿ ನಾವು ಮಾಡಬೇಕು ಎಂದು ಹಲವು ಬಾರಿ ಅಂದುಕೊಂಡರೂ ಇದುವರೆಗೆ ಆಗಿಲ್ಲ. ಮುಂದಿನ ವರ್ಷ ಕುಲದೇವರು ಬೀರಪ್ಪನ ಆಶೀರ್ವಾದ ಪಡೆದು ಹಬ್ಬ ಮಾಡಿಯೇ ಮಾಡುತ್ತೇವೆ ಎನ್ನುವ ಗ್ರಾಮಸ್ಥರು, ಮತ್ತೆ ಏನಾದರೂ ಅನಾಹುತ ಆದರೆ ಎಂಬ ಭೀತಿಯೂ ಕಾಡುತ್ತಿದೆ ಎಂದು ಹೇಳುತ್ತಾರೆ.
ಒಟ್ಟಿನಲ್ಲಿ ಎಷ್ಟೇ ಪ್ರಪಂಚ ಮುಂದುವರಿದಿದ್ದರೂ, ಈ ಗ್ರಾಮದ ಜನರು ಮೂಢನಂಬಿಕೆ ಮಾತ್ರ ಬಿಟ್ಟಿಲ್ಲ. ಇಲ್ಲಿ ಹಬ್ಬದ ಸಂಭ್ರಮ ಇಲ್ಲ. ಪಟಾಕಿ ಸೌಂಡೂ ಇಲ್ಲ. ದೀಪಗಳ ಬೆಳಕೂ ಇಲ್ಲ. ಮೂಢನಂಬಿಕೆಗೆ ತಿಲಾಂಜಲಿ ಇಟ್ಟು ಮುಂದಿನ ವರ್ಷಗಳಲ್ಲಿ ದೀಪಾವಳಿ ಹಬ್ಬವನ್ನು ಈ ಗ್ರಾಮದಲ್ಲಿ ಆಚರಿಸುವಂತಾಗಲಿ ಎಂಬುದೇ ಎಲ್ಲರ ಕಳಕಳಿ.












Click it and Unblock the Notifications