ಅಭಿವೃದ್ಧಿಗೆ ಇನ್ನೊಂದು ಹೆಸರೇ ನಮ್ಮ ಬಿಜೆಪಿ ಸರ್ಕಾರ: ಜೆ.ಪಿ. ನಡ್ಡಾ
ದಾವಣಗೆರೆ, ಜನವರಿ, 06: ಕೊರೊನಾದಂತಹ ಸಂಕಷ್ಟ, ಉಕ್ರೇನ್ -ರಷ್ಯಾ ಯುದ್ಧವಾದಾಗಲೂ ಭಾರತ ದೇಶದ ಆರ್ಥಿಕತೆ ಕಾಪಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿರ್ಧಾರವೇ ಕಾರಣ. ಆರ್ಥಿಕತೆ ಸ್ಥಿರತೆ, ಹಣದುಬ್ಬರ ನಿಯಂತ್ರಣದಲ್ಲಿದೆ. ವಿಶ್ವದಲ್ಲಿ ಆರ್ಥಿಕವಾಗಿ ಬಲಿಷ್ಟವಾಗಿರುವ 5ನೇ ರಾಷ್ಟ್ರ ನಮ್ಮದು. 2014ರ ನಂತರ ದೇಶದಲ್ಲಿ ಅಭಿವೃದ್ಧಿ ರಾಜಕಾರಣದ ಭಾಷ್ಯ ಬರೆದವರು ಮೋದಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ದಾವಣಗೆರೆಯಲ್ಲಿ ಹೇಳಿದರು.
ನಗರದ ತ್ರಿಶೂಲ್ ಕಲಾ ಮಂಟಪದಲ್ಲಿ ಏರ್ಪಡಿಸಲಾಗಿದ್ದ ವೃತ್ತಿಪರರು ಹಾಗೂ ವೋಟರ್ಸ್ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಚೀನಾ, ಅಮೆರಿಕಾ, ಜಪಾನ್, ಯುರೋಪ್ ಸೇರಿದಂತೆ ಅನೇಕ ರಾಷ್ಟ್ರಗಳು ಕೊರೊನಾದಿಂದ ದಿವಾಳಿಯಾಗಿವೆ. ಕಡಿಮೆ ಅವಧಿಯಲ್ಲಿ ಲಸಿಕೆ ಕಂಡು ಹಿಡಿಯುವ ಮೂಲಕ ಡಬಲ್ ಡೋಸ್, ಬೂಸ್ಟರ್ ಡೋಸ್ ಕೂಡ ಕೊಡಲಾಗಿದೆ. ಭಾರತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ವೈದ್ಯಕೀಯ ಉಪಕರಣ, ಆಮ್ಲಜನಕ, ಐಸಿಯು ಬೆಡ್, ವೆಂಟಿಲೇಟರ್, ಪಿಪಿಇ ಕಿಟ್ ಸಮರ್ಪಕವಾಗಿ ಇರಲಿಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಎಲ್ಲಾ ರೀತಿಯಲ್ಲಿ ನೆರವು ನೀಡಿ ವಿಜ್ಞಾನಿಗಳಿಗೆ ಸಂಪೂರ್ಣ ಸಹಕಾರ ಕೊಟ್ಟು ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾದೆವು. ಆಸ್ಪತ್ರೆಗಳು ನಿರ್ಮಾಣವಾದವು. ನೂರು ದೇಶಗಳಿಗೆ ವ್ಯಾಕ್ಸಿನ್ ಕಳುಹಿಸಿಕೊಟ್ಟ ಹಿರಿಮೆ ನಮ್ಮದು ಎಂದು ಹೇಳಿದರು.

ಎಲ್ಲಾ ರಂಗಗಳಲ್ಲಿಯೂ ಅದ್ವಿತೀಯ ಸಾಧನೆ
ಬೇರೆ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿನಿಂದ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಭಾರತದಲ್ಲಿ ಈ ವಾತಾವರಣ ಇಲ್ಲ. ಯಾಕೆಂದರೆ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಯಾರೂ ಮಾಸ್ಕ್ ಧರಿಸಿಲ್ಲ. ಅಕ್ಕಪಕ್ಕ ಕುಳಿತುಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಲು ಸಾಧ್ಯವಾಗಿದ್ದು ಬಿಜೆಪಿಯಿಂದ. ದೇಶದ ಎಲ್ಲಾ ಜನರ ಪರವಾಗಿ ಕೆಲಸ ಮಾಡುತ್ತಿರುವ ಪಕ್ಷವೆಂದರೆ ಭಾರತೀಯ ಜನತಾ ಪಾರ್ಟಿ ಆಗಿದೆ. ಹಾಗೆಯೇ 2014ರಲ್ಲಿ ದೇಶದ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ನೇತೃತ್ವದ ಎಸ್‌ಡಿಎ ಸರ್ಕಾರ ವಿಶ್ವದಲ್ಲಿಯೇ ಎಲ್ಲರೂ ಇತ್ತ ತಿರುಗಿ ನೋಡುವಂತಹ ಅಭಿವೃದ್ಧಿ ಮಾಡಿದೆ. ಎಲ್ಲಾ ರಂಗಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡಿದೆ, ಮಾಡುತ್ತಲೇ ಇದೆ ಎಂದರು.

ಕಾಂಗ್ರೆಸ್ ವಿರುದ್ಧ ಜೆ.ಪಿ. ನಡ್ಡಾ ವಾಗ್ದಾಳಿ
ಪೊಲಿಟಕಲ್ ರಿಪೋರ್ಟ್ ಕಾರ್ಡ್ ಮೂಲಕ ಯಾವೆಲ್ಲಾ ಕೆಲಸ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತೇವೆ. ಅಂತಹ ಬದ್ಧತೆ ಇರುವ ಸರ್ಕಾರ ನಮ್ಮದು ಎಂದ ಅವರು, ಮತ ಬ್ಯಾಂಕ್, ಜಾತಿ ಜಾತಿಗಳು, ಧರ್ಮ - ಧರ್ಮದ ನಡುವೆ ಕಂದಕ ಸೃಷ್ಟಿಸಿ ರಾಜಕಾರಣವನ್ನು ಬೇರೆ ಪಕ್ಷಗಳು ಮಾಡುತ್ತಿವೆ. ಕುಟುಂಬದ ಪಕ್ಷಗಳು ಕೆಲವು ಇವೆ. ಯುಪಿಎ ಸರ್ಕಾರ ಅಧಿಕಾರ ನಡೆಸಿದ್ದು ಇಂತಹ ಪಕ್ಷಗಳ ಜೊತೆ ಸೇರಿಕೊಂಡು. ಆದರೆ ಅಭಿವೃದ್ಧಿ ಮರೀಚಿಕೆಯಾಗಿದ್ದ ದೇಶದಲ್ಲಿ ಇದನ್ನು ಸಾಗರೋಪಾದಿಯಲ್ಲಿ ಸಾಧಿಸಿದ್ದು ಕೇಂದ್ರ ಸರ್ಕಾರ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಧ್ಯೆೇಯವಾಕ್ಯದಡಿ ಬಿಜೆಪಿ ಸರ್ಕಾರ ಮುನ್ನಡೆಯುತ್ತಿದೆ ಎಂದು ವಿವರಿಸಿದರು.

ಉಕ್ರೇನ್‌ನಿಂದ ದೇಶದ ವಿದ್ಯಾರ್ಥಿಗಳು ವಾಪಸ್
ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವಾಗ ದೇಶದ 32 ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬರಲಾಯಿತು. ಬೇರೆ ರಾಷ್ಟ್ರಗಳ ವಿದ್ಯಾರ್ಥಿಗಳು ಭಾರತದ ಧ್ವಜ ಹಿಡಿದು ತಮ್ಮ ಪ್ರಾಣ ಉಳಿಸಿಕೊಂಡರು. ಇದು ಭಾರತದ ಶಕ್ತಿಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿ ಜನರು ಪ್ರಯೋಜನ ಪಡೆಯುತ್ತಾರೆ. ವರ್ಷಕ್ಕೆ ದೊಡ್ಡ ಆಸ್ಪತ್ರೆಗಳಲ್ಲಿಯೂ 5 ಲಕ್ಷ ರೂಪಾಯಿಯವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಬೇರೆ ರಾಷ್ಟ್ರಗಳ ಜನಸಂಖ್ಯೆಗಿಂತ ಹೆಚ್ಚು ಜನರಿಗೆ ಪ್ರಯೋಜನ ಸಿಗುತ್ತದೆ ಎಂದು ಹೇಳಿದರು.

12 ಕೋಟಿ ಜನರಿಗೆ ಶೌಚಾಲಯ ನಿರ್ಮಾಣ
ನಾನು ಹಳ್ಳಿಯಿಂದ ಬಂದವನು. ಬೆಳಗ್ಗೆ 5 ಗಂಟೆಗೆ ಎದ್ದು ಮಹಿಳೆಯರು ಬಹಿರ್ದೆಸೆಗೆ ಹೋಗಬೇಕಿತ್ತು. ಕಾಡಿನಿಂದ ಕಟ್ಟಿಗೆ ತಂದು ಅಡುಗೆ ಮಾಡಬೇಕಿತ್ತು. ಮೋದಿ ಅವರು ಪ್ರಧಾನಿ ಆದ ಬಳಿಕ 12 ಕೋಟಿ ಜನರಿಗೆ ಶೌಚಾಲಯ ನಿರ್ಮಿಸಿಕೊಡುವ ಯೋಜನೆ ರೂಪಿಸಿದರು. ಈ ಮೂಲಕ ಮಹಿಳೆಯರು ಘನತೆಯಿಂದ ಬದುಕುವಂತೆ ಮಾಡಿದವರು. ಅಡುಗೆ ಸಿಲಿಂಡರ್ ಅನ್ನು ಜನರಿಗೆ ಕೈಗೆಟುಕುವಂತೆ ನೀಡುವಂತೆ ಮಾಡಿದ್ದೇವೆ ಎಂದರು.
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಕೇಂದ್ರದ ಯೋಜನೆ, ನೀತಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ನಂಬರ್ ಒನ್ ರಾಜ್ಯ ಕರ್ನಾಟಕವಾಗಿದೆ ಎಂದರು.
ಇನ್ನು ಭಾರತ್ ಗೌರವ್ ದರ್ಶನ, ಕೆಂಪೇಗೌಡ ಪ್ರತಿಮೆ ಅನಾವರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆರ್ಥಿಕತೆ ಸರಿದೂಗಿಸಿಕೊಂಡು ಉತ್ತಮವಾಗಿ ಸರ್ಕಾರ ನಡೆಯುತ್ತಿದೆ. ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ವೈದ್ಯಕೀಯ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಬಿಜೆಪಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಸ್. ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ದೂಡಾ ಅಧ್ಯಕ್ಷ ಎ. ವೈ. ಪ್ರಕಾಶ್, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ನವೀನ್, ಅಶ್ವತ್ಥ್ ನಾರಾಯಣ್ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.












Click it and Unblock the Notifications