ಚನ್ನಗಿರಿಯಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ.!-ಕಾರಣ ಏನು?
ದಾವಣಗೆರೆ, ಮೇ, 25: ಮಟ್ಕಾ ಆಡಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರ ವಿಚಾರಣೆಗೆ ವಶದಲ್ಲಿದ್ದಾಗ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಲಾಕಪ್ ಡೆತ್ ಆರೋಪ ಮಾಡಿ ಮೃತನ ಸಂಬಂಧಿಕರು ತಡರಾತ್ರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ಜೀಪ್ ಹಾನಿಗೊಳಿಸಿದ ಘಟನೆ ಘಟನೆ ಚನ್ನಗಿರಿಯಲ್ಲಿ ನಡೆದಿದೆ.
ಘಟನೆಯಲ್ಲಿ 11ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಮೊಕ್ಕಾಂ ಹೂಡಿದ್ದು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಆದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಬಿಪಿ ಲೋ ಆದ ಕಾರಣಕ್ಕೆ ಆದಿಲ್ (30) ಎಂಬಾತ ಮೃತಪಟ್ಟಿದ್ದಾನೆ. ಚನ್ನಗಿರಿಯ ಟಿಪ್ಪು ನಗರದ ವಾಸಿಯಾದ ಆದಿಲ್ ಅವರನ್ನು ಮಟ್ಕಾ ಆಡಿಸುತ್ತಿದ್ದ ಆರೋಪದಡಿ ವಶಕ್ಕೆ ಪಡೆದಿದ್ದರು. ಸಂಜೆ ಠಾಣೆಗೆ ಕರೆದುಕೊಂಡು ಬಂದಾಗ ಕಡಿಮೆ ರಕ್ತದೊತ್ತಡ ಆಗಿ ಅವರು ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ವಿಚಾರ ಸಂಬಂಧಿಕರು, ಕುಟುಂಬದವರಿಗೆ ತಿಳಿಯುತ್ತಿದ್ದಂತೆ ತಂಡೋಪತಂಡವಾಗಿ ಠಾಣೆಗೆ ಆಗಮಿಸಿದರು.
ಪೊಲೀಸರ ವಶದಲ್ಲಿದ್ದ ಕಾರಣ ಆದಿಲ್‌ನ ಸಂಬಂಧಿಕರು ಚನ್ನಗಿರಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ಈ ವೇಳೆ ಸಂಬಂಧಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಇದು ಲಾಕಪ್ ಡೆತ್ ಎಂಬ ಆರೋಪ ಮಾಡಿದರು. ಈ ವೇಳೆ ಉದ್ರಿಕ್ತರ ಗುಂಪು ದಾಳಿ ನಡೆಸಲು ಶುರು ಮಾಡಿತು. ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದರಲ್ಲದೇ, ಪೊಲೀಸ್ ಜೀಪ್‌ನ ಗಾಜು ಪುಡಿ ಪುಡಿ ಮಾಡಿದರು.
ಇನ್ನು ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಗಿದೆ. ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದು, ಈ ವೇಳೆ ಮತ್ತಷ್ಟು ಉದ್ರಿಕ್ತಗೊಂಡ ಜನರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದರು. ಕಲ್ಲು ತೂರಾಟವೂ ಹೆಚ್ಚಾಯಿತು. ಪೊಲೀಸರ ವಿರುದ್ಧ ಘೋಷಣೆ ಕೂಗಿದರಲ್ಲದೇ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮೃತನ ಸಂಬಂಧಿಕರು ಪೊಲೀಸ್ ಠಾಣೆಯ ಒಳನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದರು. ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್, ಅಧಿಕಾರಿಗಳು ಸಿಬ್ಬಂದಿ, ಸಂಬಂಧಿಕರನ್ನು ಸಮಾಧಾನಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಎಸ್ಪಿ ಉಮಾ ಪ್ರಶಾಂತ್ ಅವರು, ಚನ್ನಗಿರಿ ಪೊಲೀಸ್ ಠಾಣೆಗೆ ಆಗಮಿಸಿದರು. ಪರಿಸ್ಥಿತಿ ನಿಯಂತ್ರಿಸುವಲ್ಲಿ ಸಫಲರಾದರು. ಘಟನೆ ಹಿನ್ನೆಲೆ ಹತ್ತಕ್ಕೂ ಹೆಚ್ಚು ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಮಾ ಪ್ರಶಾಂತ್ ಅವರು, ನಿನ್ನೆ ಸಂಜೆ ವ್ಯಕ್ತಿ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಠಾಣೆ ಮೇಲೆ ದಾಳಿ ಆಗಿದೆ. ಪರಿಸ್ಥಿತಿ ನಿಯಂತ್ರಿಸಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದ್ದು, ಪರಿಸ್ಥಿತಿ ಸದ್ಯಕ್ಕೆ ಶಾಂತವಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಠಾಣೆ ಮೇಲೆ ದಾಳಿ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications