ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಕೇಸ್: ಸಿಐಡಿ ತನಿಖೆ ಶುರು
ದಾವಣಗೆರೆ, ಮೇ, 27: ಮಟ್ಟಾ ಆಡಿಸುತ್ತಿದ್ದ ಆರೋಪದ ಮೇರೆಗೆ ಪೊಲೀಸ್ ವಶದಲ್ಲಿದ್ದಾಗ ಆದಿಲ್ ಸಾವಿನ ಪ್ರಕರಣ ಸಂಬಂಧ, ಸಿಐಡಿ ಡಿವೈಎಸ್ಪಿ ಕನಕರೆಡ್ಡಿ ನೇತೃತ್ವದ ತಂಡವು ಚನ್ನಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಹತ್ವದ ದಾಖಲೆ ಕಲೆ ಹಾಕಿದೆ.
ಐವರು ಅಧಿಕಾರಿಗಳು ಆಗಮಿಸಿದ್ದು, ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ದಿನ ಏನಾಯ್ತು? ಅದಕ್ಕಿಂತ ಮುಂಚೆ ನಡೆದ ಬೆಳವಣಿಗೆಗಳು, ಠಾಣೆಯಲ್ಲಿದ್ದ ಸಿಸಿಟಿವಿ, ಹೊರಗಡೆ ಇದ್ದ ಸಿಸಿಟಿವಿಯಲ್ಲಿನ ದೃಶ್ಯಾವಳಿಗಳನ್ನು ಕಲೆ ಹಾಕಿದೆ. ಅಲ್ಲದೆ, ಕಲ್ಲು ತೂರಾಟ ನಡೆಸಿ ಪೊಲೀಸ್ ಜೀಪ್‌ಗಳ ಹಾನಿಗೊಳಿಸಿದವರ ಗುರುತು ಪತ್ತೆ ಹಚ್ಚುವ ಕಾರ್ಯಕ್ಕೂ ಮುಂದಾಗಿದೆ. ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಅವರು ಉದ್ರಿಕ್ತರಿಗೆ ಶಾಂತಿ ಕಾಪಾಡುವಂತೆ ಕೈ ಮುಗಿದ ದೃಶ್ಯವೂ ಸಿಕ್ಕಿದೆ.

ಆದಿಲ್ ಕುಟುಂಬದವರು ಇದೊಂದು ಲಾಕಪ್ ಡೆತ್ ಎಂಬ ಆರೋಪ ಮಾಡುತ್ತಿದ್ದಾರೆ. ಅಲ್ಲದೆ, ಪೊಲೀಸರೇ ವಿಚಾರಣೆ ನೆಪದಲ್ಲಿ ಮನೆಗೆ ಬಂದು ಕರೆದುಕೊಂಡು ಹೋಗಿರುವುದಾಗಿ ಆದಿಲ್ ಪತ್ನಿ ಹೇಳಿಕೆ ನೀಡಿದ್ದರು. ಈ ಕುರಿತಂತೆಯೂ ಮಾಹಿತಿ ಕಲೆ ಹಾಕಲಿರುವ ಸಿಐಡಿ ತಂಡವು ಪೊಲೀಸರಿಗೆ ಮಾಮೂಲು ನೀಡಲಾಗುತ್ತಿತ್ತು ಎಂಬ ಆರೋಪದ ಕುರಿತಂತೆಯೂ ತನಿಖೆ ನಡೆಸಲಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆ, ಪೊಲೀಸರ ಮೇಲೆ ಕಲ್ಲು ತೂರಾಟ ಹಾಗೂ ಸರ್ಕಾರಿ ಸ್ವತ್ತುಗಳನ್ನು ಧ್ವಂಸಗೊಳಿಸಿದ ಕೃತ್ಯಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ನಾಲ್ಕು ಕೇಸ್‌ಗಳ ಪೈಕಿ 25 ಆರೋಪಿಗಳನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ಮೇ 24ರ ರಾತ್ರಿ 8 ಗಂಟೆಗೆ ಆದಿಲ್ ತಂದೆ ಕಲಿಂಮುಲ್ಲಾ ಎಂಬುವವರು ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಟಕಾ ಜೂಜಾಟದಲ್ಲಿ ನಿರತನಾಗಿರುವ ಕುರಿತು ಮಾಹಿತಿ ಬಂದ ಮೇರೆಗೆ ವಿಚಾರಣೆಗೆ ಠಾಣೆಗೆ ಕರೆತಂದಾಗ ಕುಸಿದು ಬಿದ್ದ ಆದಿಲ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಒಳಪಡಿಸಿದ್ದು, ಈ ವೇಳೆ ಮೃತನಾಗಿದ್ದ ಎಂದು ಹೇಳಿ ದೂರು ಕೊಟ್ಟಿದ್ದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆ ಯುಡಿಆರ್ ನಂಬರ್ 17/2024 ಕಲಂ 174 ಸಿಆರ್.ಪಿ.ಸಿ 174, 176(1-ಎ) ರೀತಿ ಪ್ರಕರಣ ದಾಖಲಾಗಿತ್ತು.
ಆದರೆ, ಇದನ್ನು ತಪ್ಪಾಗಿ ಗ್ರಹಿಸಿದ ಕುಟುಂಬಸ್ಥರು ಮತ್ತು ಸಮುದಾಯದವರು ಶವವನ್ನು ಇಟ್ಟು ಠಾಣೆಯಲ್ಲಿ ಪ್ರತಿಭಟನೆ ಮಾಡುತ್ತಿರುವಾಗ ಉದ್ರಿಕ್ತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಅಲ್ಲದೆ, ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್‌ನವರಿಗೆ ಗಾಯಪಡಿಸಿ ಹಾಗೂ ಸರ್ಕಾರಿ ಸ್ವತ್ತುಗಳನ್ನು ಧ್ವಸಗೊಳಿಸಿದ ಕೃತ್ಯಕ್ಕೆ ಸಂಬಂಧಪಟ್ಟಂತೆ ಚನ್ನಗಿರಿ ಠಾಣೆಯಲ್ಲಿ 6 ಪ್ರಕರಣಗಳು ದಾಖಲಾಗಿವೆ.
ಮೇ 25ರಂದು 6 ಪ್ರಕರಣಗಳ ಪೈಕಿ 4 ಪ್ರಕರಣಗಳಲ್ಲಿ 25 ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಸಂಪೂರ್ಣ ನಿಗಾವಹಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಎಸ್ಪಿ ಎಚ್ಚರಿಕೆ: ಚನ್ನಗಿರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವಂತ ಧಾರ್ಮಿಕ ನಿಂದನೆ, ವ್ಯಕ್ತಿ ನಿಂದನೆನೆ ಪೋಸ್ಟ್‌ಗಳು, ಪ್ರಚೋದನಾಕರಿ ಹೇಳಿಕೆಗಳು, ಪೋಸ್ಟ್‌ಗಳು, ವಿಡಿಯೋ ಹಾಗೂ ಪೋಟೋಗಳನ್ನು ಶೇರ್ ಮಾಡಬಾರದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪೋಸ್ಟ್ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲಾಗಿದೆ ಎಂದು ಉಮಾ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.
ಮಾಡಾಳ್ ವಿರೂಪಾಕ್ಷಪ್ಪ ಆರೋಪವೇನು?: ಚನ್ನಗಿರಿ ಇತಿಹಾಸದಲ್ಲಿ ಎಂದೆಂದೂ ನಡೆಯದಂತಹ ಅಹಿತಕರ ಘಟನೆ ನಡೆದಿದೆ. ಇದೊಂದು ಪೂರ್ವನಿಯೋಜಿತ ಕೃತ್ಯ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಯಾರನ್ನೋ ಮೆಚ್ಚಿಸಲು ಬಂಧಿಸುವ ಬದಲು ನೈಜ ಆರೋಪಿಗಳನ್ನು ಬಂಧಿಸಿ, ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಗುಟುರು ಹಾಕಿದ್ದಾರೆ.
ಚನ್ನಗಿರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚನ್ನಗಿರಿ ತಾಲೂಕಿನ ಇತಿಹಾಸದಲ್ಲಿ ಇದೊಂದು ಕಪ್ಪುಚುಕ್ಕೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ 11 ಪೊಲೀಸರಿಗೆ ಹಲ್ಲೆ ಆಗಿರುವುದು ಖಂಡನೀಯ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚನ್ನಗಿರಿಯಲ್ಲಿ ಇಂತಹ ಘಟನೆ ನಡೆದಿದೆ. ರಕ್ಷಣೆ ನೀಡಬೇಕಾದ ರಕ್ಷಕರಿಗೆ ರಕ್ಷಣೆಯಿಲ್ಲ ಎನ್ನುವುದಾದರೆ, ತಾಲೂಕಿನಲ್ಲಿ ಕಾನೂನು ವ್ಯವಸ್ಥೆ ಯಾವ ರೀತಿಯಿದೆ
ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಈ ಬಗ್ಗೆ ಆಲೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ರಾಜ್ಯ ಮಟ್ಟದಲ್ಲಿಯೂ ಕಾನೂನು ಸುವ್ಯವಸ್ಥೆ ಕುಸಿದಿದೆ. ಡಿವೈಎಸ್ಪಿ, ಸರ್ಕಲ್ ಇನ್‌ಸ್ಪೆಕ್ಟರ್ ಅವರನ್ನು ಸಸ್ಪೆಂಡ್ ಮಾಡಿರುವುದು ಯಾವುದೇ ರೀತಿಯಲ್ಲೂ ಸರಿಯಲ್ಲ. ಆದಿಲ್ ಸಾವಿನ ಪ್ರಕರಣ ಸಂಬಂಧ ತನಿಖೆ ಮುಗಿದಿಲ್ಲ. ಲಾಕಪ್ ಡೆತ್, ಸಹಜ ಸಾವೋ ಎಂಬುದು ಇನ್ನೂ ಅಧಿಕೃತವಾಗಿ ದೃಢವಾಗಿಲ್ಲ. ಯಾರನ್ನೋ ಮೆಚ್ಚಿಸಲು ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿರುವುದರಿಂದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ. ಯಾವ ರೀತಿ ಕೆಲಸ ಮಾಡಬೇಕೆಂಬ ಮನೋಭಾವ ಬರುವುದು ಸಹಜವೆಂದು ತಿಳಿಸಿದರು.
ಅಧಿಕಾರಿಗಳ ಅಮಾನತು ಮಾಡಿರುವುದರಿಂದ ಜನರಲ್ಲಿ ತಪ್ಪು ಮನೋಭಾವನೆ ಮೂಡುವಂತೆ ಆಗಿದೆ. ಇದೊಂದು ಪೂರ್ವನಿಯೋಜಿತ ಕೃತ್ಯ. ಸಾವಿರಾರು ಜನರು ಒಮ್ಮೆಲೆ ಬಂದು ಪೊಲೀಸ್ ಠಾಣೆಗೆ ನುಗ್ಗುವುದು, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವುದು, ಠಾಣೆಯೊಳಗೆ ನುಗ್ಗಿ ಧ್ವಂಸ ಮಾಡುವುದನ್ನು ಖಂಡಿಸುತ್ತೇನೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಸರ್ಕಾರಕ್ಕೆ ಆಗಿರುವ ನಷ್ಟವನ್ನು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸರ್ಕಾರಕ್ಕೆ ಭರಿಸಬೇಕು. ಯಾರನ್ನೋ ಮೆಚ್ಚಿಸಲು ಸರಿಯಾದ ಸಾಕ್ಷಾಧಾರಗಳಿಲ್ಲದೇ ನಿರಾಪರಾಧಿಗಳನ್ನು ಬಂಧಿಸಬಾರದು ಎಂದು ಆಗ್ರಹಿಸಿದರು.
ಕಳೆದೊಂದು ವರ್ಷದಿಂದ ಚನ್ನಗಿರಿ ತಾಲೂಕಿನಲ್ಲಿ ಐಪಿಲ್ ಜೂಜು, ಮಟ್ಕಾ ದಂಧೆ, ಇಸ್ಪೀಟ್ ಹಳ್ಳಿಹಳ್ಳಿಗಳಲ್ಲಿಯೂ ಅಧಿಕೃತವಾಗಿ ಪರವಾನಗಿ ಪಡೆದವರ ರೀತಿ ಆಡುತ್ತಿದ್ದಾರೆ ಎಂಬುದು ಚನ್ನಗಿರಿ ತಾಲೂಕಿನ ಜನರು ಆಡುತ್ತಿರುವ ಮಾತು. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಇದಕ್ಕೆ ಕಡಿವಾಣ ಹಾಕಬೇಕು. ಯಾವುದೇ ರೀತಿಯ ದಂಧೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ಬಿಜೆಪಿ ವತಿಯಿಂದ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಮಾಡಾಳ್ ವಿರೂಪಾಕ್ಷಪ್ಪ ಎಚ್ಚರಿಕೆ ನೀಡಿದರು.
ಚನ್ನಗಿರಿ ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ತಾಲೂಕು ಮಟ್ಟದ ಯಾವುದೇ ಕಚೇರಿಯಲ್ಲಿ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಇಲ್ಲ. ನೈತಿಕತೆಯೂ ಕುಸಿದಿದೆ. ಭಯದ ವಾತಾವರಣವೂ ಇದೆ. ಇದಕ್ಕೆ ಇತಿಶ್ರೀ ಹಾಡಬೇಕಿದೆ ಎಂದು ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.












Click it and Unblock the Notifications