Davangere Riot: ಗಣೇಶ ವಿಸರ್ಜನೆ ವೇಳೆ ಕಿಡಿ ಹೊತ್ತಿಸಿದ ಕಿಡಿಗೇಡಿಗಳು: ದಾವಣಗೆರೆಯಲ್ಲೂ ಕಲ್ಲುತೂರಾಟ
ದಾವಣಗೆರೆ ಸೆಪ್ಟೆಂಬರ್ 20: ರಾಜ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆಗಳು ಹೆಚ್ಚಾಗುತ್ತಿರುವುದು ವರದಿಯಾಗುತ್ತಿವೆ. ದಾವಣಗೆರೆಯಲ್ಲೂ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು ಕೆಲ ಕಾಲ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಪೊಲೀಸರು ಹೈರಾಣಾಗಿದ್ದಾರೆ. ಕಳೆದ ದಿನ ದಾವರಣಗೆರೆಯ ಬೇತೂರು ರಸ್ತೆಯಲ್ಲಿ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.
ಹೌದು... ಗುರುವಾರ (ಸೆ.19) ಸಂಜೆ ನಗರದ ಮುದ್ದ ಬೋವಿ ಕಾಲೋನಿ ಹಾಗೂ ವೆಂಕಬೋವಿ ಕಾಲೋನಿಯ ಗಣೇಶನನ್ನು ನಗರದ ಅರಳಿ ಮರ ಸರ್ಕಲ್‌ನಲ್ಲಿ ಮೆರವಣಿಗೆ ಮಾಡುವಾಗ ಕಲ್ಲು ತೂರಾಟ ನಡೆದಿದೆ. ಈ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ಗುರುಬಸವರಾಜ್ ಹಾಗೂ ಕ್ರೈಂ ವಿಭಾಗದ ಪೊಲೀಸ್ ಕಾನ್ಸ್‌ಸ್ಟೇಬಲ್ ರಘು ಎಂಬುವವರಿಗೆ ಗಾಯಗಳಾಗಿವೆ.

ಗಣೇಶ ಮೆರವಣಿಗೆ ಸಾಗಿದ ಕಡೆಗಳಲೆಲ್ಲಾ ಕಿಡಿಗೇಡಿಗಳು ಕಲ್ಲು ತೂರಿ ಅಟ್ಟಹಾಸ ಮೆರೆದಿದ್ದಾರೆ. ಕೂಡಲೇ ಮುಸ್ಲಿಂ ಮುಖಂಡರು ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕಳೆದೆರೆಡು ದಿನಗಳ ಹಿಂದೆ ಮಂಡ್ಯದ ನಾಗಮಂಗಲದಲ್ಲಿ ನಡೆದ ಕಲ್ಲು ತೂರಾಟ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಮಾಡಿದ್ದನ್ನು ಹಿಂದೂ ಮುಖಂಡರು ಖಂಡಿಸಿ ಪ್ರತಿಭಟನೆ ಮಾಡಿದ್ದರು.
ಈ ವೇಳೆ ಹಿಂದೂ ಜಾಗರ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ್ ಪೂಜಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮುಸ್ಲಿಂ ಮುಖಂಡನೊಬ್ಬ ತಾಕತ್ ಇದ್ದರೆ ಬೇತೂರು ರಸ್ತೆಗೆ ಬಾ ಎಂದು ಸವಾಲ್ ಹಾಕಿದ್ದನು. ಇದೇ ಕಾರಣಕ್ಕೆ ಗಲಾಟೆ ನಡೆದಿದೆ.
ಕಳೆದ ದಿನ ಗಣೇಶ ಮೆರವಣಿಗೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಮುಸ್ಲಿಮರು ಇಸ್ಲಾಂ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಇದೇ ವೇಳೆ ಕಲ್ಲು ತೂರಾಟ ನಡೆದಿದೆ. ಇನ್ನೂ ಕಲ್ಲು ತೂರಿದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯ ಸಂಗ್ರಹಿಸಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಇಳಿದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅಂಗಡಿ ಮುಗ್ಗಟ್ಟುಗಳನ್ನು ಪೊಲೀಸರು ಮುಚ್ಚಿಸಿದ್ದಾರೆ. ಇತ್ತ ಗಲಾಟೆ ನಡೆದ ಸ್ಥಳದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಪಿ ಉಮಾ ಪ್ರಶಾಂತ್, 'ಬೇತೂರು ರಸ್ತೆ ಗಣೇಶ ಮೆರವಣಿಗೆ ವೇಳೆ ಕಲ್ಲೂ ತೂರಾಟ ಆಗಿದೆ. ಈ ವೇಳೆ ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮೆರವಣಿಗೆ ವೇಳೆ ಕಲ್ಲು ತೂರಿದ ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದೇವೆ. ನಿಷೇಧಾಜ್ಞೆ ಜಾರಿ ಬಗ್ಗೆ ಡಿಸಿ ಜೊತೆ ಚರ್ಚೆ ನಡೆಸಲಾಗಿದೆ. ಪ್ರಚೋದನಾತ್ಮಕ ಭಾಷಣವೇ ಗಲಾಟೆಗೆ ಕಾರಣವಾಗಿದೆ. ಒಂದು ಕೋಮಿನವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಇನ್ನೊಂದು ಕೋಮಿನದು ವಿರೋಧ ವ್ಯಕ್ತಪಡಿಸಿದ್ದರು. ಎರಡೂ ಕಡೆಯವರಿಂದ ದೂರು ದಾಖಲಾಗಿದೆ, ಇದರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ' ಎಂದು ಹೇಳಿದ್ದಾರೆ.
ಏನಿದು ಮಂಡ್ಯ ನೆಲಮಂಗಲ ಗಲಭೆ?
ಕಳೆದ ಬುಧವಾರ (ಸೆ.11) ರಾತ್ರಿ ಗಣೇಶ ಮೆವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ನಾಗಮಂಗಲದಲ್ಲಿ ಉದ್ವಿಗ್ನತೆ ಉಂಟಾಗಿದೆ. ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಮಸೀದಿಯೊಂದರ ಬಳಿಯಿಂದ ಕಲ್ಲು ತೂರಾಟ ನಡೆದಿದೆ. ಬಳಿಕ ಅಂಗಡಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಹೀಗಾಗಿ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು ನಿಷೇಧಾಜ್ಞೆ ಕೂಡ ಜಾರಿಗೊಳಿಸಲಾಗಿತ್ತು. ಇನ್ನೂ ಈ ಹಿಂಸಾಚಾರಕ್ಕಾಗಿ ಬಂಧಿತರಾದವರ ಒಟ್ಟು ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಆರಂಭದಲ್ಲಿ ಬಂಧಿಸಲ್ಪಟ್ಟ 52 ಜನರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications