ಲೋಕಾಯುಕ್ತ ದಾಳಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಶ್ರೀರಾಮ ಸೇನೆ ಆಗ್ರಹ
ಪ್ರಶಾಂತ್ ಮಾಡಾಳ್ ಕೆಎಎಸ್ ಅಧಿಕಾರಿಯಾಗಿ 2017ರಲ್ಲಿ ಬೆಂಗಳೂರಿನ ಕರ್ನಾಟಕ ರೂರಲ್ ಇನ್ಪ್ರಾಸ್ಟ್ರಕ್ಚರ್‌ನಲ್ಲಿ ಕರ್ತವ್ಯ ನಿರ್ವಹಿಸುವಾಗ 55 ಕೋಟಿ ರೂಪಾಯಿ ಅಕ್ರಮ ಎಸಗಿ ಅಮಾನತು ಮಾಡಲಾಗಿತ್ತು ಎಂದು ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಹೇಳಿದ್ದಾರೆ.
ದಾವಣಗೆರೆ, ಮಾರ್ಚ್ 3: ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಬೆಂಗಳೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಕೂಡಲೇ ಶಾಸಕ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ನೀಡಬೇಕು. ಶಾಸಕರ ಬಂಧನ ಆಗುವವರೆಗೂ ಶ್ರೀರಾಮಸೇನೆ ಹೋರಾಟ ನಡೆಸಲಿದೆ. ಮಾಡಾಳ್ ವಿರೂಪಾಕ್ಷಪ್ಪರದ್ದು ಭ್ರಷ್ಟ ಕುಟುಂಬ ಎಂದು ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2008-09ನೇ ಸಾಲಿನಲ್ಲಿ ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ಸಾಮಾನ್ಯ ಜನರಿಗೆ ಖಾಲಿ ನಿವೇಶನ ನೀಡಲಾಗಿತ್ತು. ಈ ನಿವೇಶನಗಳಲ್ಲಿ 113 ಮಂದಿ ಸುಳ್ಳು ದಾಖಲಾತಿ ನೀಡಿ ಖಾಲಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿದರು.

2015ರಲ್ಲಿ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿದ ಅಧಿಕಾರಿ ವಿರುದ್ಧ ನಾನು ಬೆಂಗಳೂರು ವಿಶೇಷ ಲೋಕಾಯುಕ್ತ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೆ. ಈ ಪ್ರಕರಣ ಈಗಲೂ ವಿಚಾರಣೆ ನಡೆಯುತ್ತಿದೆ. ಈ ದೂರಿನಲ್ಲಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಪುತ್ರ ಮಲ್ಲಿಕಾರ್ಜುನ್, ಸೊಸೆ ಸುಧಾರಾಣಿ, ಪ್ರವೀಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.
ಪ್ರಶಾಂತ್ ಮಾಡಾಳ್ ಕೆಎಎಸ್ ಅಧಿಕಾರಿಯಾಗಿ 2017ರಲ್ಲಿ ಬೆಂಗಳೂರಿನ ಕರ್ನಾಟಕ ರೂರಲ್ ಇನ್ಪ್ರಾಸ್ಟ್ರಕ್ಚರ್‌ನಲ್ಲಿ ಕರ್ತವ್ಯ ನಿರ್ವಹಿಸುವಾಗ 55 ಕೋಟಿ ರೂಪಾಯಿ ಅಕ್ರಮ ಎಸಗಿ ಸಸ್ಪೆಂಡ್ ಮಾಡಲಾಗಿತ್ತು. ತಂದೆ ಶಾಸಕರಾದ ಕಾರಣ ರಾಜಕೀಯ ಬೆಂಬಲ ಪಡೆದು ಪುನಃ ಉದ್ಯೋಗಕ್ಕೆ ಬಂದು ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲ್ಲೂ ಅಕ್ರಮವಾಗಿ ಟೆಂಡರ್ ಗಳಿಗೆ ಲಂಚ ಪಡೆಯುತ್ತಿದ್ದರು ಎಂದು ಆರೋಪಿಸಿದರು.

ಇನ್ನು ಬೆಂಗಳೂರಿನಲ್ಲಿ ನಿನ್ನೆ 40 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಂದೇಶ್ ಕಾಶಪ್ಪನವರ್ ಅವರು ನಮ್ಮ ಸಂಪರ್ಕದಲ್ಲಿದ್ದು, ನಾಳೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು.
ಚನ್ನಗಿರಿಯಲ್ಲಿ 112 ಎಕರೆ ಅಡಿಕೆ ತೋಟ, ಚನ್ನಗಿರಿ ಪಟ್ಟಣದಲ್ಲಿ 17 ಕಾಂಪ್ಲೆಕ್ಸ್, 3 ಬಂಗಲೆ, ಸೊಸೆ ಹೆಸರಿನಲ್ಲಿ ಒಂದು ಬಂಗಲೆ, ಜಿಎಂಐಟಿ ಹಿಂಭಾಗ ಮಲ್ಲಿಕಾರ್ಜುನ್ ಹೆಸರಿನಲ್ಲಿ 50 ಸಾವಿರ ಅಡಿ ನಿವೇಶನ ಹೊಂದಿದ್ದಾರೆ. ಇನ್ನು ಪ್ರಶಾಂತ್ ಮಾಡಾಳ್ ಅವರ ಡಾಲರ್ಸ್ ಕಾಲೋನಿಯ ಒಂದು ಬಂಗಲೆಯ ಮೌಲ್ಯ ಸುಮಾರು 94 ಕೋಟಿ ರೂಪಾಯಿ. ಸಂಜೆ ನಗರದಲ್ಲಿ 2 ಮನೆ, ವಿಜಯ ನಗರದಲ್ಲಿ 2 ಮನೆ ಮತ್ತು ಮೂರು ನಿವೇಶನ ಸೇರಿದಂತೆ ಅಕ್ರಮ ಆಸ್ತಿ ಹೊಂದಿದ್ದಾರೆ. ಈ ಕುರಿತು ಲೋಕಾಯುಕ್ತರಿಗೆ ಮಾಹಿತಿ ನೀಡಲಾಗಿದೆ ಎಂದರು.
ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಮಲ್ಲಿಕಾರ್ಜುನ್ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದು, 2022-23 ನೇ ಸಾಲಿನಲ್ಲಿ ದಾವಣಗೆರೆ ಕುಂದುವಾಡದಲ್ಲಿ 4 ಎಕರೆ 23 ಗುಂಟೆ ಜಮೀನು, ಚಿಕ್ಕತೊಗಲೇರಿಯಲ್ಲಿ 47 ಎಕರೆ ಜಮೀನು, ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿಯ ಮಾರಿಹಳ್ಳಿಯಲ್ಲಿ 50 ಎಕರೆ ಅಡಿಕೆ ತೋಟ ಖರೀದಿಸಿದ್ದಾರೆ. ಶಿವಮೊಗ್ಗದಲ್ಲಿ ಒಂದು ಮನೆ, ಐದು ನಿವೇಶನ, ಭದ್ರಾವತಿಯಲ್ಲಿ 60 ಎಕರೆ ಸೇರಿದಂತೆ ಹಲವೆಡೆ ಅಕ್ರಮ ದುಡ್ಡಿನಿಂದ ಆಸ್ತಿ ಖರೀದಿಸಿದ್ದು ಇದಕ್ಕೆಲ್ಲಾ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಈ ಕುಟುಂಬದ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದ್ದರೂ ಯಾವುದೇ ಭಯವಿಲ್ಲದೇ ಹಣ ಪಡೆದಿರುವುದನ್ನು ಗಮನಿಸಿದರೆ ಇಡೀ ಕುಟುಂಬವೇ ಹಣ ಲೂಟಿ ಹೊಡೆಯುವುದರಲ್ಲಿ ಶಾಮೀಲಾಗಿದೆ. ವಿರೂಪಾಕ್ಷಪ್ಪ ರಾಜೀನಾಮೆ ನೀಡದಿದ್ದರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದ ಅವರು, ಈ ಎಲ್ಲಾ ದಾಖಲಾತಿಗಳನ್ನು ಲೋಕಾಯುಕ್ತ ಪೊಲೀಸರಿಗೆ ನೀಡಲಾಗುವುದು ಎಂದು ಹೇಳಿದರು.
ಕೆಎಎಸ್ ಅಧಿಕಾರಿಯಾಗುವ ವೇಳೆಯಲ್ಲಿ ಆದಾಯ ಕೇವಲ 1.20 ಲಕ್ಷ ರೂಪಾಯಿ ಕಡಿಮೆ ಎಂದು ತೋರಿಸಿ, ಮೀಸಲಾತಿಗೂ ಸುಳ್ಳು ಮಾಹಿತಿ ನೀಡಲಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕು. 55 ಕೋಟಿ ರೂಪಾಯಿ ಹಗರಣ ಮಾಡಿ ಸಸ್ಪೆಂಡ್ ಆಗಿ ಒಂದು ವರ್ಷ ಮನೆಯಲ್ಲಿದ್ದ ಪ್ರಶಾಂತ್ ಮಾಡಾಳ್ ಮತ್ತೆ ಕೆಲಸಕ್ಕೆ ತೆಗೆದುಕೊಂಡು ಇಂತಹ ಹುದ್ದೆ ನೀಡಿರುವುದು ಆಶ್ಚರ್ಯಕರ. ಇನ್ನು ನಾಲ್ಕೈದು ದಿನಗಳಲ್ಲಿ ಮತ್ತಷ್ಟು ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆ ಕಾರ್ಯದರ್ಶಿ ಪಿ.ಸಾಗರ್, ಖಜಾಂಚಿ ಶ್ರೀಧರ್, ಆಲೂರು ರಾಜಶೇಖರ್, ರಾಹುಲ್, ರಾಜು, ವಿನಯ್, ರಮೇಶ್, ಡಿ. ವಿನೋದ್ ಮತ್ತಿತರರು ಹಾಜರಿದ್ದರು.












Click it and Unblock the Notifications