ಮಾಡಾಳ್ ವಿರೂಪಾಕ್ಷಪ್ಪನನ್ನು ರಕ್ಷಣೆ ಮಾಡಿದ್ದೇ ಬಸವರಾಜ ಬೊಮ್ಮಾಯಿ-ಸಿದ್ದರಾಮಯ್ಯ
ದಾವಣಗೆರೆ, ಮಾರ್ಚ್ 10: ಲೋಕಾಯುಕ್ತರ ದಾಳಿ ವೇಳೆ ಕೋಟಿಗಟ್ಟಲೇ ಹಣ ಪತ್ತೆಯಾಗಿದ್ದು, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಾರ್ವಜನಿಕ ಜೀವನದಲ್ಲಿ ಇರಬೇಕಾ ಅಥವಾ ಬೇಡವಾ ಎಂಬುದನ್ನು ಚನ್ನಗಿರಿ ಕ್ಷೇತ್ರದ ಮತದಾರರು ತೀರ್ಮಾನ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದಾವಣಗೆರೆ ಜನತೆಗೆ ಪ್ರಶ್ನಿಸಿದ್ದಾರೆ.
ಚನ್ನಗಿರಿ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಕೋಟಿಗಟ್ಟಲೇ ಲೂಟಿ ಹೊಡೆದವನು ಎಂಎಲ್‌ಎ ಆಗಿರಬೇಕಾ? ಚನ್ನಗಿರಿ ಕ್ಷೇತ್ರದ ಮತದಾರರಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಕೋರ್ಟ್ ಜಾಮೀನು ಕೊಟ್ಟಿದೆ. ಜನತಾ ನ್ಯಾಯಾಲಯದಲ್ಲಿ ಇಂಥ ಭ್ರಷ್ಟ ಶಾಸಕನಿಗೆ ಶಿಕ್ಷೆಯಾಗಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಮಾಡಾಳ್ ವಿರೂಪಾಕ್ಷಪ್ಪನ ಪುತ್ರ ಲೋಕಾಯುಕ್ತ ದಾಳಿ ವೇಳೆ ಸಿಕ್ಕಿ ಬಿದ್ದಾಗ ಕೋಟ್ಯಂತರ ಹಣ ಪತ್ತೆಯಾಗಿದೆ. ಸರ್ಕಾರಿ ಕೆಲಸ ಮಾಡುವ ನೌಕರ ಮನೆಯಲ್ಲಿ 6 ಕೋಟಿ 10 ಲಕ್ಷ ರೂಪಾಯಿ ಸಿಕ್ಕಿದೆ. ಅಪ್ಪ ಹೇಳಿದ್ದಾನೆ, ಮಗ ತೆಗೆದುಕೊಂಡಿದ್ದಾನೆ. ಬೇರೆ ಯಾರಾದರೂ ಆಗಿದ್ದರೆ ಮನೆ ಬಿಟ್ಟು ಹೊರಬರುತ್ತಿರಲಿಲ್ಲ. ಭ್ರಷ್ಟಾಚಾರ ಆರೋಪ ಹೊತ್ತು ಜಾಮೀನು ಪಡೆದು ಮೆರವಣಿಗೆ ನಡೆಸಿದ ವಿರೂಪಾಕ್ಷಪ್ಪನಿಗೆ ಮಾನ ಮರ್ಯಾದೆ ಇಲ್ಲ. ಮಾಡಾಳ್‌ನಂತಹ ರಾಕ್ಷಸನನ್ನು ಮನೆಗೆ ಕಳುಹಿಸಿ ಎಂದು ಗುಡುಗಿದರು.
ಮಾಡಾಳ್ ವಿರೂಪಾಕ್ಷಪ್ಪನನ್ನು ರಕ್ಷಣೆ ಮಾಡಿದ್ದೇ ಬಸವರಾಜ ಬೊಮ್ಮಾಯಿ. ತಲೆಮರೆಸಿಕೊಂಡಿಲ್ಲ, ಮನೆಯಲ್ಲೇ ಇದ್ದೆ ಎಂದು ವಿರೂಪಾಕ್ಷಪ್ಪನೇ ಹೇಳಿದ್ದು, ಹಾಗಿದ್ದರೆ ಪೊಲೀಸರು ಹೇಳಿದ್ದು ಸತ್ಯನಾ, ಮಾಡಾಳ್ ಹೇಳಿದ್ದು ನಿಜನಾ. ಬೊಮ್ಮಾಯಿ ಹೇಳಿದಂತೆ ಪೊಲೀಸರು ಕೇಳಿದ್ದಾರೆ. ರೆಡ್ ಹ್ಯಾಂಡ್ ಆಗಿ ಹಣ ಸಿಕ್ಕಾಗ ಚನ್ನಗಿರಿಯ ಮಾಡಾಳ್ ಮನೆಯ ಮೇಲೆ ದಾಳಿಯೂ ಮಾಡಬೇಕಿತ್ತು. ಕೂಡಲೇ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದರು.
ಚನ್ನಗಿರಿಯಲ್ಲಿ 6,150 ಮನೆಗಳನ್ನು ವಡ್ನಾಳ್ ರಾಜಣ್ಣ ಶಾಸಕರಾಗಿದ್ದಾಗ ನೀಡಿದ್ದೇವೆ. 2,500 ಕೋಟಿ ರೂಪಾಯಿ ನಾನು ಅನುದಾನ ನೀಡಿದ್ದೆ. ಮಾಡಾಳ್ ವಿರೂಪಾಕ್ಷಪ್ಪ ಎಷ್ಟು ಮನೆ ಕೊಟ್ಟಿದ್ದಾನೆ. ಗ್ರಾಮ ಪಂಚಾಯಿತಿ ಸದಸ್ಯರು ಇದನ್ನು ಹೇಳಬೇಕು. ಹೊಸದಾಗಿ ಒಂದೇ ಒಂದು ಮನೆಯನ್ನೂ ನೀಡಿಲ್ಲ. ಇವ್ನ ಮನೆ ಹಾಳಾಗ. ಇಂಥವರು ಅಧಿಕಾರದಲ್ಲಿ ಇರಬೇಕೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಭ್ರಷ್ಟನನ್ನು ಆಯ್ಕೆ ಮಾಡಿ ತಪ್ಪು ಮಾಡಿಬಿಟ್ಟೀರಾ. ಈ ಕ್ಷೇತ್ರದ ಜನರ ಮನೆ ಮನೆಗೆ ತೆರಳಿ ಈ ವಿಷಯ ತಿಳಿಸಿ. ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಿ. ಪ್ರಾಮಾಣಿಕ ವ್ಯಕ್ತಿ ವಡ್ನಾಳ್ ರಾಜಣ್ಣರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ವಡ್ನಾಳ್ ವಿರೂಪಾಕ್ಷಪ್ಪ ಬಂಧನವಾಗಲೇಬೇಕು ಎಂದು ಸಿದ್ದರಾಮಯ್ಯ ಹೇಳಿದ್ದು, ಈ ವೇಳೆ ಅಲ್ಲಿದ್ದವರು ವಡ್ನಾಳ್ ಅಲ್ಲ, ಮಾಡಾಳ್ ಆಗಬೇಕು ಎಂದು ಹೇಳಿದ ಪ್ರಸಂಗ ನಡೆಯಿತು. ಚನ್ನಗಿರಿ ಪ್ರಜಾಧ್ವನಿ ಯಾತ್ರೆಯಲ್ಲಿ ಈ ಯಡವಟ್ಟು ಮಾಡಿದ ಸಿದ್ದರಾಮಯ್ಯ, ಅವ್ನಾ ಊರ ಹೆಸರು ಅದಾ ಮಾಡಾಳ್. ಮಾಡಾಳ್ ಊರಿನವರಾ ವಿರೂಪಾಕ್ಷಪ್ಪ? ವಡ್ನಾಳ್ ಇವರದ್ದಾ? ಅದೊಂದು ಕಡೆ, ಇದೊಂದು ಕಡೆ, ಪೂರ್ವ, ಪಶ್ಚಿಮನಾ ಎಂದರು.
ಮಾತು ಮುಂದುವರಿಸಿದ ಸಿದ್ದರಾಮಯ್ಯ, ರಾಜಣ್ಣ ಪ್ರಾಮಾಣಿಕ ವ್ಯಕ್ತಿ. ಜನಪರ ಕಾಳಜಿ ಇರುವ ಮನುಷ್ಯ. ವಡ್ನಾಳ್ ರಾಜಣ್ಣ ಶಾಸಕರಾಗಿದ್ದರು. ಆಗ ನಾನು ಮುಖ್ಯಮಂತ್ರಿ ಆಗಿದ್ದೆ. ವಡ್ನಾಳ್ ರಾಜಣ್ಣರ ಬಗ್ಗೆ ಅಪಾರ ಗೌರವವಿದೆ. ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಾತ್ರ ಮಾತನಾಡ್ತಿದ್ದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದರು. ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಹೇಳಿದರು. ವಡ್ನಾಳ್ ರಾಜಣ್ಣರನ್ನು ಗೆಲ್ಲಿಸಿ ಎನ್ನುತ್ತಿದ್ದಂತೆ ವೇದಿಕೆಯ ಮೇಲಿದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಮೊಗದಲ್ಲಿ ಬೇಸರ ಕಂಡು ಬಂತು.

ವಡ್ನಾಳ್ ರಾಜಣ್ಣ ಗರಂ ಆಗಿದ್ದೇಕೆ..?
ಇನ್ನು ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ಶ್ರಮಿಸೋಣ. ಅದನ್ನು ಬಿಟ್ಟು ಜೈಕಾರ ಹಾಕುವುದು ಸರಿಯಲ್ಲ ಎಂದು ವೇದಿಕೆ ಮೇಲೆ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸಿಟ್ಟಾದ ಘಟನೆ ನಡೆಯಿತು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಚನ್ನಗಿರಿ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾ ಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡವರು ಪೋಸ್ಟರ್ ಹಿಡಿದು ಕಿರುಚಾಟ ನಡೆಸಿದರು. ಇದರಿಂದ ವೇದಿಕೆಯಲ್ಲಿ ಸಿಟ್ಟಿಗೆದ್ದ ರಾಜಣ್ಣ, ಕ್ಷೇತ್ರದಲ್ಲಿ ಒಟ್ಟು 8 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದು, ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ನಾಯಕರು ಬಂದ ಮೇಲೆ ಘೋಷಣೆ ಯಾರ ಪರವೂ ಹಾಕಬೇಡಿ ಎಂದು ಕರೆ ನೀಡಿದರು.
ಯಾರಿಗೆ ಟಿಕೆಟ್ ಕೊಡಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸಿಸುತ್ತದೆ. ಹಾಗಾಗಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಿ, ಇಲ್ಲಾ ಅಂದ್ರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದರು. ಇದರಿಂದ ವೇದಿಕೆ ಮೇಲಿದ್ದ ಆಕಾಂಕ್ಷಿಗಳು ಮುಜುಗರ ಅನುಭವಿಸಬೇಕಾಯಿತು.












Click it and Unblock the Notifications