ಸಿದ್ದರಾಮಯ್ಯ ಸ್ವಯಂ ಘೋಷಿತ ಹಿಂದುಳಿದ ವರ್ಗಗಳ ನಾಯಕ : ಶ್ರೀರಾಮುಲು
ದಾವಣಗೆರೆ, ಅಕ್ಟೋಬರ್ 28: "ಹಿಂದುಳಿದ ಜಾತಿಗಳ ಹೆಸರು ಹೇಳಿಕೊಂಡು ಬೆಳೆದಿರುವ ಸ್ವಯಂಘೋಷಿತ ನಾಯಕ ಎಂದರೆ ಅದು ಮಾಜಿ ಸಿಎಂ ಸಿದ್ದರಾಮಯ್ಯ. ಮೀಸಲಾತಿ ಬಗ್ಗೆ ವೀರಾವೇಶದಿಂದ ಮಾತನಾಡುವ ಅವರು ಅಧಿಕಾರದಲ್ಲಿದ್ದಾಗ ಯಾಕೆ ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ?" ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಟೀಕಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಮಾಜಿ ಸಿಎಂ ಸಿದ್ದರಾಮಯ್ಯಇತ್ತೀಚೆಗೆ ರಾಮುಲು.. ರಾಮುಲು ಎಂಬ ಜಪ ಮಾಡುತ್ತಿದ್ದಾರೆ, ಒಮ್ಮೆಮ್ಮೆ ಹೊಗಳುತ್ತಾರೆ, ಇಲ್ಲ ತೆಗಳುತ್ತಾರೆ. ಬಿಜೆಪಿ ಕಂಡರೆ ಸಿದ್ದರಾಮಯ್ಯರಿಗೆ ಭಯ ಶುರುವಾಗಿದೆ. ಮೀಸಲಾತಿ ಜಾರಿಯಾದ ನಂತರ ತಳಸಮುದಾಯಗಳು ಕಾಂಗ್ರೆಸ್ ಪಕ್ಷ ತಿರಸ್ಕರಿಸಿ ಬಿಜೆಪಿಯತ್ತ ವಾಲಿವೆ. ಇದರಿಂದ ಕಾಂಗ್ರೆಸ್‌ನವರಿಗೆ ಚಿಂತೆ ಶುರುವಾಗಿರಬೇಕು" ಎಂದು ವ್ಯಂಗ್ಯವಾಡಿದರು.
"ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮನಸ್ಸು ಮಾಡಿದ್ದರೆ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಬಹುದಿತ್ತು. ಆದರೂ ಅವರು ಮಾಡಿಲ್ಲ. ಅವರು ಹಿಂದುಳಿದವರ ಪರ ಇರಲಿಲ್ವಾ? . ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಆಯಿತಾ. ಹಿಂದುಳಿದ ಜಾತಿಗಳ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಅನೇಕ ಬಾರಿ ಮೀಸಲಾತಿ ನೀಡುವಂತೆ ನಾನು ಆಗಲೇ ಒತ್ತಾಯಿಸಿದ್ದೆ. ಸರಕಾರ ಬಂದಮೇಲೂ ಒತ್ತಾಯಿಸಿದ್ದೆ, ಇದೀಗ ಆಡಿದ್ದ ಮಾತು ಈಡೇರಿಸಿದ್ದೇನೆ" ಎಂದರು.

ಮೀಸಲಾತಿಯಲ್ಲಿ ರಾಜಕಾರಣವಿಲ್ಲ
ಮೀಸಲಾತಿ ಹೆಚ್ಚಳ ನಿಮಗೆ ಉಪಮುಖ್ಯಮಂತ್ರಿ ಪದವಿ ತಂದುಕೊಡಬಹುದಾ? ಎಂಬ ಪ್ರಶ್ನೆಗೆ ಉತ್ತರಿಸಿ, "ರಾಜಕಾರಣ ಉದ್ದೇಶದಿಂದ ಸರಕಾರ ಮೀಸಲಾತಿ ಕೊಟ್ಟಿಲ್ಲ. ಹಲವು ವರ್ಷಗಳಿಂದಲೂ ಮೀಸಲಾತಿಗಾಗಿ ಪಕ್ಷಾತೀತವಾಗಿ ಹೋರಾಟ ನಡೆದಿದೆ. 150ಕ್ಕೂ ಹೆಚ್ಚು ಜಾತಿಗಳು ಬೇರೆ ಬೇರೆ ಸರಕಾರದ ಮುಂದೆ ಭಿಕ್ಷೆ ಬೇಡಿದ್ದವು. ಸ್ವಾಮೀಜಿಗಳು ಸತ್ಯಾಗ್ರಹ ಮಾಡಿದ್ದಾರೆ. ರಾಜಕೀಯ ಇಚ್ಛಾಶಕ್ತಿ ಇರುವ ಕಾರಣ ಈ ರಾಜ್ಯದ ಮುಖ್ಯಮಂತ್ರಿಗಳು ಮೀಸಲಾತಿ ಕೊಟ್ಟಿದ್ದಾರೆ" ಎಂದು ಬಸವರಾಜ ಬೊಮ್ಮಾಯಿಯನ್ನು ಶ್ಲಾಘಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ
ಬೇರೆ ಬೇರೆ ಸಮುದಾಯರಿಗೆ ಮೀಸಲಾತಿ ಹೋರಾಟ ಮಾಡುತ್ತಿರುವ ಬಗ್ಗೆ ಕೇಳಿದ್ದಕ್ಕೆ, "ಯಾವುದೇ ಸಮುದಾಯಕ್ಕೆ ಮೀಸಲಾತಿ ಕೊಡಬೇಕೆಂದರೆ ಮೊದಲು ಕುಲಶಾಸ್ತ್ರ ಅಧ್ಯಯನ ಆಗಬೇಕು. ನನಗೆ ಅವರಿಗೆ ಮೀಸಲಾತಿ ನೀಡುವುದರ ಬಗ್ಗೆ ಯಾವುದೇ ಅಭ್ಯಂತರವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಕಾನೂನಿನ ಪ್ರಕಾರ ಯಾರಿಗಾದರೂ ಮೀಸಲಾತಿ ನೀಡಲಿ. ಆದರೆ ನನ್ನ ಸಮುದಾಯಕ್ಕೆ ಕೊಟ್ಟಂತಹ ಮೀಸಲಾತಿಯನ್ನು ಯಾವ ಮುಖ್ಯಮಂತ್ರಿ ನೀಡರಲಿಲ್ಲ, ನಮ್ಮ ಮುಖ್ಯಮಂತ್ರಿ ನೀಡಿದ್ದಾರೆ" ಎಂದರು.
ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ಕೆಲಸ ಮಾಡಿದೆ. ಬೇರೆ ಪಕ್ಷಗಳು ಮಾಡಿರಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಿದೆ. ಈ ಕಾರಣಕ್ಕೆ ಅಭಿನಂದನೆ ಸಲ್ಲಿಸಲು ಬಳ್ಳಾರಿಯಲ್ಲಿ ದೊಡ್ಡ ಕಾರ್ಯಕ್ರಮ ನಡೆಸಲಾಗುವುದು. ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಬಡವರ ಪಕ್ಷ ಎಂದು ತೋರಿಸಿದೆ
"ಬಿಜೆಪಿ ಮೀಸಲಾತಿ ಕೊಟ್ಟ ಪಾರ್ಟಿ. ಕಾಂಗ್ರೆಸ್ ಮೀಸಲಾತಿ ನೀಡದ ಪಕ್ಷ. ಹಿಂದುಳಿದ ವರ್ಗದವರ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಬಿಟ್ಟು ಬಿಜೆಪಿಯ ಕಡೆಗೆ ಹಿಂದುಳಿದ ವರ್ಗದವರು ಬರುತ್ತಿದ್ದಾರೆ. ಬಿಜೆಪಿ ಶ್ರೀಮಂತರ ಪಕ್ಷ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಮೀಸಲಾತಿ ನೀಡುವ ಮೂಲಕ ಬಡವರ ಪರವಾಗಿದ್ದೇವೆ ಎಂಬುದನ್ನು ತೋರಿಸಿದೆ ಎಂದ ಅವರು, ಜನರು ಈಗ ಕಾಂಗ್ರೆಸ್ ತಿರಸ್ಕರಿಸುತ್ತಿದ್ದಾರೆ" ಎಂದು ಸಚಿವರು ಹೇಳಿದರು.

ಶೀಘ್ರದಲ್ಲೆ ಸಾರಿಗೆ ನೌಕರರಿಗೆ ಸಹಿ ಸುದ್ದಿ
ಇನ್ನು ಸಾರಿಗೆ ನೌಕರರ 6ನೇ ವೇತನ ಪರಿಷ್ಕರಣೆ ಬಗ್ಗೆ ಮಾತನಾಡಿ, "ಪ್ರತಿ ನಾಲ್ಕು-ಐದು ವರ್ಷಗಳಲ್ಲಿ ವೇತನ ಪರಿಷ್ಕರಣೆ ಆಗಬೇಕಿತ್ತು, ಈ ಬಾರಿ ಬೇರೆ ಬೇರೆ ಕಾರಣಗಳಿಂದ ಆಗಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸುತ್ತಿದ್ದೇನೆ. ಆಗಲೇಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ಆದಷ್ಟು ಬೇಗ ಅವರಿಗೆ ಸಿಹಿ ಸುದ್ದಿ ನೀಡುವ ಕೆಲಸ ಮಾಡುತ್ತೇನೆ" ಎಂದು ಶ್ರೀರಾಮುಲು ತಿಳಿಸಿದರು.












Click it and Unblock the Notifications