ದಾವಣಗೆರೆ: ಶಾಂತಿ ಸಾಗರ ಕೆರೆ ರಕ್ಷಣೆ, ಶೀಘವೇ ಒತ್ತುವರಿ ತೆರವು
ದಾವಣಗೆರೆ, ಮೇ 05: ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿರುವ ಶಾಂತಿ ಸಾಗರ ಕೆರೆ ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಇದನ್ನು ಸೂಳೆಕೆರೆ ಎಂದೂ ಸಹ ಕರೆಯಲಾಗುತ್ತದೆ. ಇದು ಸುಮಾರು 5447. 10 ಎಕರೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ 219 ಎಕರೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಈಗ ಈ ಒತ್ತುವರಿ ತೆರವು ಮಾಡುವ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತದೆ.
ದಾವಣಗೆರೆ ಪ್ರವಾಸ ಕೈಗೊಂಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಶಾಂತಿ ಸಾಗರ ಕೆರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. "ಶಾಂತಿ ಸಾಗರ ರಕ್ಷಣೆಗೆ ರೈತರೂ ಮುಂದಾಗಬೇಕು, ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಕೆರೆ ಮಲಿನವಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರ ವರದಿ ನೀಡಿ" ಎಂದು ಪರಿಸರ ಇಲಾಖೆ ಅಧಿಕಾರಿಗೆ ಸೂಚನೆ ಕೊಟ್ಟರು.

"ಶಾಂತಿ ಸಾಗರ ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಈ ಪ್ರದೇಶವನ್ನು ಒತ್ತುವರಿಯಾಗದಂತೆ ನೋಡಿಕೊಂಡು ನೀರು ಮಲಿನವಾಗದಂತೆ ತಡೆಗಟ್ಟಲು ವಿವರ ವರದಿ ನೀಡಬೇಕು" ಎಂದು ಉಪ ಲೋಕಾಯುಕ್ತರು ಹೇಳಿದರು. ಶಾಂತಿ ಸಾಗರ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿ ಕೆರೆ ಒತ್ತುವರಿ ಬಗ್ಗೆ ನ್ಯಾ. ಬೀರಪ್ಪ ಪರಿಶೀಲನೆ ನಡೆಸಿದರು, ಅಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟರು.
ಶಾಂತಿ ಸಾಗರ ಕರೆಯಲ್ಲಿ 219 ಎಕರೆ 10 ಗುಂಟೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಒತ್ತುವರಿಯಾಗ ಜಾಗವನ್ನು ತೆರವು ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲಿಂದ ಅನೇಕ ನಗರ, ಪಟ್ಟಣ ಹಾಗೂ ಅನೇಕ ಗ್ರಾಮಗಳಿಗೆ ಬಹುಗ್ರಾಮ ಯೋಜನೆಯ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ.
ಈ ಕೆರೆಯ ಹೂಳೆತ್ತುವುದರಿಂದ ಹೆಚ್ಚಿನ ನೀರನ್ನು ಸಂಗ್ರಹಿಸಲು ಸಾಧ್ಯವಾಗಲಿದೆ. ರೈತರು ತಮ್ಮ ತೋಟ, ಜಮೀನುಗಳಿಗೆ ಮಣ್ಣನ್ನು ತೆಗೆದುಕೊಂಡು ಹೋಗುವುದರಿಂದ ರೈತರಿಗೂ ಲಾಭ ಮತ್ತು ಅಂತರ್ಜಲ ವೃದ್ಧಿಯಾಗಿ ನೀರಿನ ಸಂಗ್ರಹ ಹೆಚ್ಚಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉಪ ಲೋಕಾಯುಕ್ತರ ಭೇಟಿ ವೇಳೆ ಸ್ಥಳದಲ್ಲಿದ್ದ ಕೆಲವು ರೈತರು ಮೇಲಿನ ಮೂರು ಅಡಿಯೊಂದಿಗೆ ಇನ್ನೂ ಆಳದವರೆಗೆ ಮಣ್ಣು ತೆಗೆಯುತ್ತಾರೆ ಎಂದಾಗ ರೈತರೊಂದಿಗೆ ಸಭೆ ನಡೆಸಿ ಹೂಳೆತ್ತಲು ಮುಂದಾಗಲು ತಿಳಿಸಿ, ರೈತರೂ ಇದಕ್ಕೆ ಸಹಕಾರ ನೀಡಬೇಕು ಎಂದು ಸೂಚಿಸಲಾಯಿತು.
ಕೋಲಾರದ ಭಾಗದಲ್ಲಿ 1000 ಅಡಿಗಿಂತ ಆಳದವರೆಗೂ ನೀರು ಸಿಗುವುದೇ ಕಷ್ಟವಾಗಿದೆ. ಶಾಂತಿ ಸಾಗರ ಬಹಳ ಸುಂದರವಾದ ಪ್ರದೇಶವಾಗಿದ್ದು ಇದನ್ನು ಸಂರಕ್ಷಣೆ ಮಾಡುವುದರಿಂದ ಭವಿಷ್ಯಕ್ಕೆ ಅನುಕೂಲ ಮತ್ತು ಪ್ರಾಣಿ, ಪಕ್ಷಿ ಸೇರಿದಂತೆ ಸಕಲ ಜೀವರಾಶಿಗಳಿಗೂ ಅನುಕೂಲವಾಗಲಿದೆ. ಈ ಸಂಪತ್ತನ್ನು ಒಮ್ಮೆ ಕಳೆದುಕೊಂಡರೆ, ಭವಿಷ್ಯದ ಪೀಳಿಗೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಉಪ ಲೋಕಾಯುಕ್ತರು ಹೇಳಿದರು.
ಶಾಂತಿ ಸಾಗರವನ್ನು ಪ್ರವಾಸಿ ತಾಣವಾಗಿಸಲು ಸಾಕಷ್ಟು ಅವಕಾಶಗಳಿವೆ. ಕೆರೆ ಸುತ್ತಮುತ್ತಲು ಅರಣ್ಯ ಸಸಿಗಳನ್ನು ಬೆಳೆಸಬೇಕು. ಇಲ್ಲಿ ಹೋಂ ಸ್ಟೇಗಳಿಗೆ ಅವಕಾಶ ಮಾಡಿಕೊಡಬಾರದು. ಜಲಸಾಹಸ ಕ್ರೀಡೆಗಳಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಿ ನೀರು ಮಲಿನವಾಗದಂತೆ ನೋಡಿಕೊಳ್ಳಬೇಕು. ಪ್ಲಾಸ್ಟಿಕ್ ನೀರಿಗೆ ಹಾಕಿಸಬಾರದು ಮತ್ತು ಪ್ರವಾಸಿಗರು ತಂದ ಆಹಾರವನ್ನು ಕೆರೆಗೆ ಹಾಕದಂತೆ ನೋಡಿಕೊಳ್ಳಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಉಪ ಲೋಕಾಯುಕ್ತರು ಸೂಚನೆ ನೀಡಿದರು.
ಶಾಂತಿ ಸಾಗರ ವ್ಯಾಪ್ತಿಯಲ್ಲಿ 10 ಪಂಚಾಯಿತಿಗಳು ಬರುತ್ತವೆ. ಇಲ್ಲಿನ ಬಳಕೆ ನೀರನ್ನು ಮತ್ತು ಮಲ, ಮೂತ್ರದ ನೀರು ಶಾಂತಿ ಸಾಗರಕ್ಕೆ ಸೇರದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಪರಿಶೀಲಿಸಿ ಸಮಗ್ರವಾದ ವರದಿಯನ್ನು ಪರಿಸರ ಇಲಾಖೆ ಅಧಿಕಾರಿಗಳು ನೀಡಬೇಕು. ಅಧಿಕಾರಿಗಳು ನೀಡಿದ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.












Click it and Unblock the Notifications