ಹರಿಹರದಲ್ಲಿ "ನಮ್ಮೂರ ಮಸೀದಿ ನೋಡ ಬನ್ನಿ" ಕಾರ್ಯಕ್ರಮ, ವಿಶೇಷತೆ ಏನು?
ದಾವಣಗೆರೆ, ಡಿಸೆಂಬರ್, 19: ಹರಿಹರ ನೆಲೆಸಿರುವ ಕ್ಷೇತ್ರ ಎಂದೇ ಪ್ರಸಿದ್ಧಿಯಾಗಿರುವ ಹರಿಹರದಲ್ಲಿ ಇದೀಗ "ನಮ್ಮೂರು ಮಸೀದಿ ನೋಡ ಬನ್ನಿ" ಎಂಬ ವಿನೂತನ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನಕ್ಕೆ ಮುಸ್ಲಿಮರು ಮಾತ್ರವಲ್ಲ, ಹಿಂದೂಗಳು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲಾ ಧರ್ಮದವರು ಆಗಮಿಸಿ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹರಿಹರ ಪಟ್ಟಣದ ಹೊಸ ಹರ್ಲಾಪುರದ ಮುಬಾರಕ್ ಮಸೀದಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ನಡೆಯುತ್ತಿದೆ. ಇದುವರೆಗೂ ಏಳು ನೂರಕ್ಕೂ ಹೆಚ್ಚು ಜನ ಇಲ್ಲಿಗೆ ಭೇಟಿ ನೀಡಿರುವುದು ವಿಶೇಷವಾಗಿದೆ. ದಿನದಿಂದ ದಿನಕ್ಕೆ ಇಲ್ಲಿಗೆ ಆಗಮಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಇಸ್ಲಾಂ ಧರ್ಮದ ಸಾರ, ಇಸ್ಲಾಂನಿಂದ ಮುಸ್ಲಿಮರಿಗೆ ಕಡ್ಡಾಯಗೊಳಿಸಿರುವಂತಹ ಐದು ನಿಯಮಗಳಾದ ಅಲ್ಲಾಹ್ ಮತ್ತು ಪ್ರವಾದಿ ಮೊಹಮ್ಮದ್‌ರಲ್ಲಿ ನಂಬಿಕೆ, ನಮಾಜ್, ರಂಜಾನ್ ಉಪವಾಸ, ದಾನ ಮತ್ತು ಹಜ್ ಯಾತ್ರೆ ಕುರಿತಂತೆ ಮಾಹಿತಿ ನೀಡಲಾಗುತ್ತಿದೆ.
ದಿನಕ್ಕೆ ಐದು ಬಾರಿ ನಮಾಜ್ ನಡೆಸಲಾಗುತ್ತದೆ. ನಮಾಜ್‌ಗೂ ಮುನ್ನ ಕೂಗುವ ಆಜಾನ್‌ನ ಅರ್ಥ, ನಜಾಜ್‌ಗೆ ಮುನ್ನ ಕೈ, ಕಾಲು ಏಕೆ ತೊಳೆದುಕೊಳ್ಳಬೇಕು, ವಜೂ ಖಾನಾ, ಶುಕ್ರವಾರಕ್ಕೊಮ್ಮೆ ನಡೆಯುವ ಧಾರ್ಮಿಕ ಉಪನ್ಯಾಸದ ಕುರಿತು ತಿಳಿಸಲಾಗುತ್ತದೆ. ನಮಾಜ್ ಮಾಡುವ ಸ್ಥಳವನ್ನು ಎಲ್ಲಾ ವರ್ಗದವರು ಕಣ್ತುಂಬಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಮಹಿಳೆಯರಿಗೂ ವಿವರಣೆ ನೀಡಲಾಗುತ್ತದೆ
ಇನ್ನು ಮುಸ್ಲಿಂ ಧಾರ್ಮಿಕ ಗುರುಗಳಿಂದ ಇಸ್ಲಾಂ ಧರ್ಮದ ಕುರಿತ ಸಂದೇಹಗಳಿಗೆ ಉತ್ತರವನ್ನೂ ಕೊಡುವ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ವೀಕ್ಷಕರಿಗೂ ಸಹ ಮಸೀದಿಯ ಮಹಡಿಯ ಮಹಿಳಾ ವಿಭಾಗದಲ್ಲಿ ವಿವರಣೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಮಸೀದಿ ಒಳಗಡೆ ಆವರಣದ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ. ಸಂದರ್ಶಕರಿಗೆ ಕುರಾನ್‌ನ ಕನ್ನಡ ಅನುವಾದ, ಪ್ರವಾದಿ ಮೊಹಮ್ಮದ್ ಕುರಿತಾದ ಪುಸ್ತಕಗಳು ಇಲ್ಲಿ ಲಭ್ಯವಿದೆ.

ರಾಜಕೀಯ ಪಕ್ಷಗಳ ನಾಯಕರ ಭೇಟಿ
ಹರಿಹರ ಶಾಸಕ ಎಸ್. ರಾಮಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಬಿಜೆಪಿಯ ನಗರಸಭಾ ಸದಸ್ಯ ರಜನಿಕಾಂತ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಬಿ. ಅಣ್ಣಪ್ಪ, ಕಾಂಗ್ರೆಸ್ ಮುಖಂಡ ಎನ್. ಹೆಚ್. ಶ್ರೀನಿವಾಸ್ ನಂದಿಗಾವಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜೆ. ಮುರುಗೇಶಪ್ಪ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಸಹ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ಪ್ರದರ್ಶನದ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ
ಮೌಲನರಾದ ಸನಾವುಲ್ಲಾ ಖಾನ್ ನಿಜಾಮಿ, ಅಜ್ಮತ್ ಉಲ್ಲಾ ಪಂಜಾಬಿ ಮೊಹಮ್ಮದಿ, ಮಕ್ಸೂದ್ ಅಹ್ಮದ್ ಉಮ್ರಿ ನಜೀರಿ, ಅಬ್ದುಲ್ ರೆಹಮಾನ್ ಸೇರಿದಂತೆ ಹಲವರು ಇಸ್ಲಾಂ ಧರ್ಮದ ಕುರಿತಾದ ಮಾಹಿತಿ ನೀಡಿದರು. ಮಸೀದಿ ಆಡಳಿತ ಮಂಡಳಿ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಬೇಗ್, ಕಾರ್ಯದರ್ಶಿ ರಿಜ್ವಾನ್ ಉಲ್ಲಾ, ಸಹ ಕಾರ್ಯದರ್ಶಿ ಸೈಯದ್ ಅಬ್ದುಲ್ ಅಲೀಂ, ಖಜಾಂಚಿ ಅಬ್ರಾರ್ ಬೇಗ್, ಇಸ್ಮಾಯಿಲ್ ಪಪ್ಪು, ಶಫೀವುಲ್ಲಾ, ಅಬ್ದುಲ್ ರಹಮತ್‌ರ ನೇತೃತ್ವದ ತಂಡ ಈ ಪ್ರದರ್ಶನವನ್ನು ಆಯೋಜಿಸಿದೆ.

ಮಸೀದಿಗಳಲ್ಲಿ ಬೇರೆ ಧರ್ಮದವರಿಗೂ ಪ್ರವೇಶ
ಪ್ರದರ್ಶನ ವೀಕ್ಷಿಸಿದ ಬಳಿಕ ಮಾತನಾಡಿದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಎಲ್ಲರೂ ಬರಬೇಕೆಂಬ ದೂರದೃಷ್ಟಿ ಪರಿಕಲ್ಪನೆಯಲ್ಲಿ ಈ ಪ್ರದರ್ಶನ ಆಯೋಜಿಸಿರುವುದು ಖುಷಿಯ ವಿಚಾರವಾಗಿದೆ. ಮಸೀದಿಗಳಲ್ಲಿ ಬೇರೆ ಧರ್ಮೀಯರಿಗೆ ಪ್ರವೇಶ ಇಲ್ಲ ಎಂದು ಭಾವಿಸುವ ಸಮುದಾಯ ಮತ್ತು ಜನರಿದ್ದಾರೆ. ದೇವಸ್ಥಾನಕ್ಕೆ ಹೋಗಲು ಯಾರೂ ಅಡ್ಡಿ ಮಾಡುವುದಿಲ್ಲ. ಮಸೀದಿ ಒಳಗೆ ಹೋಗಲು ಯಾರೂ ಅಡ್ಡಿ ಮಾಡುವುದಿಲ್ಲ ಎಂಬ ಭಾವನೆ ನನ್ನದಾಗಿದೆ. ಆದರೆ, ಅಲ್ಲಿಯ ಪರಂಪರೆ, ವ್ಯವಸ್ಥೆಗೆ ಅನುಗುಣವಾಗಿ ನಡೆದುಕೊಂಡು ಒಳಗಡೆ ಹೋದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದರು.
ಮುಸ್ಲಿಂ ಬಾಂಧವರು ಮಾತ್ರವಲ್ಲ, ಸಾರ್ವಜನಿಕವಾಗಿ ದರ್ಶನ ಏರ್ಪಾಟು ಮಾಡಿರುವುದು ಜನರಲ್ಲಿನ ಗೊಂದಲದ ವಾತಾವರಣ ನಿವಾರಣೆ ಆದಂತಾಗಿದೆ. ಅಧಿಕಾರ ಬಂತು, ಬೇರೊಬ್ಬರ ಅಪೇಕ್ಷೆಗಾಗಿ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಮಸೀದಿಗಳನ್ನು ತಪ್ಪಾಗಿ ಬಿಂಬಿಸುವಂತಹ ಕೆಲಸ ನಡೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.












Click it and Unblock the Notifications