ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಹತ್ಯೆ ಬಗ್ಗೆ ಸಚಿವ S.S.ಮಲ್ಲಿಕಾರ್ಜುನ್ ಹೇಳಿದ್ದೇನು ಗೊತ್ತಾ?, ಇಲ್ಲಿದೆ ಮಾಹಿತಿ
ದಾವಣಗೆರೆ, ನವೆಂಬರ್, 05: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಪ್ರತಿಮಾ ಅವರದ್ದು ಫ್ಯಾಮಿಲಿ ಡಿಸ್ಪ್ಯೂಟ್ ಅಂತಾನೂ ಹೇಳುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅಂತಹ ಹೇಳಿಕೊಳ್ಳುವಂತಹ ದೊಡ್ಡ ಸಮಸ್ಯೆಯೇನೂ ಇರಲಿಲ್ಲ. ಹತ್ಯೆಗೆ ಏನು ಕಾರಣ ಎಂಬುದು ತನಿಖೆ ನಂತರವಷ್ಟೇ ಗೊತ್ತಾಗಲಿದೆ ಎಂದು ತಿಳಿಸಿದರು.
ಪ್ರತಿಮಾ ಅವರಿಗೆ ಮಗು ಇದೆ. ಅವರು ತೀರ್ಥಹಳ್ಳಿಯವರು ಎಂಬ ಮಾಹಿತಿ ಸಿಕ್ಕಿದೆ. ಹತ್ಯೆಗೆ ಸಂಬಂಧಿಸಿದಂತೆ ಯಾರಿಗೂ ನಿಖರವಾದ ಮಾಹಿತಿ ಗೊತ್ತಾಗಿಲ್ಲ. ಕೆಲವರು ಕೌಟುಂಬಿಕವಾಗಿ ಸಮಸ್ಯೆಗಳಿದ್ದವು ಎಂದು ಹೇಳಿದರೆ, ಮತ್ತೆ ಕೆಲವರು ಸಮಸ್ಯೆ ಇರಲಿಲ್ಲ ಅಂತಾನೂ ಮಾಹಿತಿ ನೀಡುತ್ತಿದ್ದಾರೆ. ಹತ್ಯೆ ಕುರಿತಂತೆ ಪೂರ್ತಿ ತನಿಖೆ ನಡೆದ ಬಳಿಕವಷ್ಟೇ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಮಲ್ಲಿಕಾರ್ಜುನ್ ತಿಳಿಸಿದರು.

ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಿದ ಕಾರಣಕ್ಕೂ ಹತ್ಯೆ ನಡೆದಿರಬಹುದು ಎಂಬ ಅನುಮಾನವೂ ಇದೆ. ಕೌಟುಂಬಿಕ ಕಾರಣವೂ ಇರಬಹುದು ಎಂಬುದು ಮತ್ತೊಂದು ಕಡೆ ಇದೆ. ಹಾಗಾಗಿ, ಈಗಲೇ ನಿಖರ ನಿರ್ಧಾರಕ್ಕೆ ಬರಲಾಗದು. ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದ್ದರೆ ಕಠಿಣ ಕ್ರಮ ಜರುಗಿಸುವುದು ಖಚಿತ. ಯಾರು ಏನು ಎಂಬ ಬಗ್ಗೆಯೂ ತನಿಖೆಯಾಗುತ್ತದೆ. ಇದರಲ್ಲಿ ಆರೋಪಿಗಳ ಬಿಡುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಧಿಕಾರಿ ಪ್ರತಿಮಾ ಅವರ ಕಾರು ಚಾಲಕ ಸಂಪರ್ಕದಲ್ಲಿದ್ದ. ಅವರೊಂದಿಗೆ ಬೇರೆ ಯಾರ್ಯಾರು ಸಂಪರ್ಕದಲ್ಲಿದ್ದರು ಎಂಬ ಕುರಿತಂತೆಯೂ ತನಿಖೆ ನಡೆಯಲಿದೆ. ಇದೆಲ್ಲಾ ತನಿಖೆ ವೇಳೆ ಗೊತ್ತಾಗಲಿದೆ. ಆಮೇಲೆ ಯಾರೂ ಕೃತ್ಯ ಎಸಗಿರಬಹುದು ಎಂಬುದು ತಿಳಿದು ಬರಲಿದೆ. ಇಲಾಖೆಯ ವತಿಯಿಂದಲೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರತಿಮಾ ಒಳ್ಳೆಯ ಅಧಿಕಾರಿಯಾಗಿದ್ದರು. ನಿನ್ನೆ ವಿಡಿಯೋ ಕಾನ್ಫೆರನ್ಸ್ ಸಭೆಗೂ ಹಾಜರಾಗಿದ್ದರು. ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿದೆ. ಅಧಿಕಾರಿಗಳಿಗೆ ಭದ್ರತೆ ಇಲ್ಲ ಎಂಬುದು ಸುಳ್ಳು. ಊರಲ್ಲಿ ಇದ್ದವರಿಗೆಲ್ಲಾ ಪೊಲೀಸರು ಭದ್ರತೆ ನೀಡಲಾಗುವುದಿಲ್ಲ. ಕೇಸ್ ಟು ಕೇಸ್ ತನಿಖೆ ನಡೆಯುತ್ತದೆ. ನೀನು ಬೇರೆ ಊರಿನಲ್ಲಿದ್ದು ಏನಾದರೂ ಮಾಡಿದ್ದರೆ ಇಲ್ಲಿನವರಿಗೆ ಹೇಗೆ ಮಾಹಿತಿ ಸಿಗುತ್ತದೆ? ಹಾಗಾಗಿ, ಪೊಲೀಸರು ತನಿಖೆ ನಡೆಸಿದ ಬಳಿಕವಷ್ಟೇ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಮಲ್ಲಿಕಾರ್ಜುನ್ ಹೇಳಿದರು.












Click it and Unblock the Notifications