ಪೌರಕಾರ್ಮಿಕರಿಗೆ "ಪಾಲಿಸಿ" ಉಡುಗೊರೆ ನೀಡಿದ ಪಾಲಿಕೆ ಸದಸ್ಯ
ದಾವಣಗೆರೆ, ಫೆಬ್ರವರಿ 22: ದಾವಣಗೆರೆಯ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಅವರು ಇಂದು ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು. ಇಂದು ನಗರದ ವಿಶ್ವೇಶ್ವರಯ್ಯ ಪಾರ್ಕ್ ನಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ "ಪೌರಕಾರ್ಮಿಕರು ಸ್ವಚ್ಛ ಭಾರತ ಅಭಿಯಾನದ ಸೈನಿಕರು" ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಆ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರ ಕಾರ್ಮಿಕರಿಗೆ ಸಿಹಿ ಹಂಚಿ, ಸನ್ಮಾನ ಮಾಡಿ, ಹೊಸ ಬಟ್ಟೆಗಳನ್ನು ವಿತರಿಸಿದರು.

ಅಷ್ಟೇ ಅಲ್ಲ, ಅವರ ಹೆಸರಿನಲ್ಲಿ ನೋಂದಾಯಿಸಿರುವ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ತಲಾ 2 ಲಕ್ಷ ರೂ. ಮೌಲ್ಯದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಪಾಲಿಸಿ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಪಾಲಿಸಿಯನ್ನು ಉಡುಗೊರೆಯಾಗಿ ನೀಡಿದರು.
ಪಾಲಿಕೆ ನೂತನ ಮೇಯರ್ ಅಜಯ್ ಕುಮಾರ್ ಮಾತನಾಡಿ, "ಪ್ರಸನ್ನ ಕುಮಾರ್ ಚಿಂತನೆಗಳು ಸಮಾಜಕ್ಕೆ ಒಂದು ಅದ್ಭುತ ಸಂದೇಶವಾಗಿದೆ. ನಮ್ಮ ಪರಿಸರವನ್ನು ಸ್ವಚ್ಛವಾಗಿಡಲು ದುಡಿಯುವ ಪೌರಕಾರ್ಮಿಕರಿಗಾಗಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡು ಎಲ್ಲರಿಗೂ ಸ್ಫೂರ್ತಿ ನೀಡುವ ಕೆಲಸ ಮಾಡಿದ್ದಾರೆ. ಈ ಮೂಲಕ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ" ಎಂದರು.












Click it and Unblock the Notifications