ವಿಡಿಯೋ; ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಕಾನ್ಸ್ಟೇಬಲ್
ದಾವಣಗೆರೆ, ನವೆಂಬರ್ 25; ಪೊಲೀಸರೆಂದರೆ ಸಾಕು ಜನರು ಭಯಬೀಳ್ತಾರೆ. ಎಲ್ಲಿ ದಂಡ ಹಾಕ್ತಾರೋ ಅನ್ನೋ ಭೀತಿಯ ಜೊತೆಗೆ ಹಿಡಿಶಾಪ ಹಾಕ್ತಾರೆ. ಮಾತ್ರವಲ್ಲ, ಪೊಲೀಸರ ಬಗ್ಗೆ ಆರೋಪಗಳು ಕೇಳಿ ಬರುತ್ತವೆ. ಆದರೆ ದಾವಣಗೆರೆಯಲ್ಲಿ ಪೊಲೀಸ್ ಸಿಬ್ಬಂದಿ ಮಾಡಿರುವ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹೌದು. ಈಗ ಈ ಪೊಲೀಸ್ ಕಾನ್ಸ್ಸ್ಟೇಬಲ್ ಮಾಡಿರುವ ಕೆಲಸ ಜನರ ಮನಗೆದ್ದಿದೆ. ಸಮಾಜಮುಖಿ ಕಾರ್ಯಕ್ಕೆ ಜೈಹೋ ಎನ್ನುತ್ತಿದ್ದಾರೆ. ಟ್ರಾಫಿಕ್ ಪೊಲೀಸರು ಎಲ್ಲಿ ವಾಹನ ಹಿಡಿದು ಫೈನ್ ಹಾಕುತ್ತಾರೆ ಎಂದುಕೊಂಡಿದ್ದವರೇ ಈಗ ಜನಮುಖಿ ಕೆಲಸಕ್ಕೆ ಶಹಬ್ಬಾಸ್ ಗಿರಿ ನೀಡುತ್ತಿದ್ದಾರೆ.
ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಎಸ್. ಹೇಮಣ್ಣ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಜಲ್ಲಿ ಕಲ್ಲು ಹಾಕಿ ಮುಚ್ಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ#Davangere #DavangereNews #Police #Viral #VIralvideo
ಅಂದ ಹಾಗೆ ಈಗ ಒಳ್ಳೆಯ ಕಾರ್ಯದ ಮೂಲಕ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಎಸ್. ಹೇಮಣ್ಣ ಪ್ರತಿಯೊಬ್ಬರ ಮನಗೆದ್ದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲಾ ಹಾಳಾಗಿವೆ. ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಪ್ರಮುಖ ರಸ್ತೆಗಳಲ್ಲಿ, ತಿರುವಿನಲ್ಲಿಯೂ ಗುಂಡಿಗಳದ್ದೇ ಕಾರುಬಾರು.
ಇಲ್ಲಿ ಸಂಚರಿಸಲು ಸವಾರರು ಹಿಡಿಶಾಪ ಹಾಕುತ್ತಿದ್ದರು. ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿರಲಿಲ್ಲ. ಈ ವಿಚಾರ ಹೇಮಣ್ಣರ ಗಮನಕ್ಕೆ ಬಂದಿದೆ.
ನಗರದ ಗುಂಡಿಮಹಾದೇವಪ್ಪ ವೃತ್ತದಲ್ಲಿ ಕರ್ತವ್ಯನಿರತರಾಗಿದ್ದ ಹೇಮಣ್ಣ ಗುಂಡಿಗಳಲ್ಲಿ ವಾಹನ ಸವಾರರು ವಾಹನ ಓಡಿಸಲು ಪಡುತ್ತಿದ್ದ ಪರಿಪಾಟಲು ಕಂಡು ತಾವೇ ಸ್ವತಃ ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಸಂಕಲ್ಪ ಮಾಡಿದರು.
ಸಂಚಾರಿ ಪೊಲೀಸ್ ಸಿಬ್ಬಂದಿಯಾಗಿಯೂ ಕಾರ್ಯ ನಿರ್ವಹಿಸಿ ಬಳಿಕ ಮನೆಗೆ ಹೋಗಿ ಆರಾಮಾಗಿ ಇರಬಹುದಿತ್ತು. ಆದರೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಬಳಿಕ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಗರದ ಪ್ರಮುಖ ವೃತ್ತವಾದ ಗುಂಡಿ ಸರ್ಕಲ್ನ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದವು. ಇದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತಿತ್ತು. ಇದನ್ನು ಗಮನಿಸಿದ ಹೇಮಣ್ಣ ರಸ್ತೆಯಲ್ಲಿನ ಗುಂಡಿಗಳಿಗೆ ತಾವೇ ಸ್ವತಃ ಜಲ್ಲಿ ಕಲ್ಲು ಹಾಕಿ ಮುಚ್ಚಿದ್ದಾರೆ. ವಾಹನಗಳ ಮೇಲೆ ನಿಗಾವಹಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ನೋಡಿಕೊಳ್ಳುವ ಮೂಲಕ ಜನರ ಜೀವ ರಕ್ಷಿಸುವ ಕರ್ತವ್ಯದ ಜೊತೆಗೆ ವಾಹನಗಳ ಸುಗಮ ಸಂಚಾರಕ್ಕೆ ಈ ರೀತಿಯ ಒಳ್ಳೆಯ ಕೆಲಸ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಪೊಲೀಸರೆಂದರೆ ಅದರಲ್ಲಿಯೂ ಟ್ರಾಫಿಕ್ ಪೊಲೀಸರೆಂದರೆ ಜನ ಭಯಪಡುತ್ತಾರೆ. ಆದರೆ ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಪೊಲೀಸ್ ಸಿಬ್ಬಂದಿ ಮಾಡಿದ್ದಾರೆ. ಗುಂಡಿಗಳಿಗೆ ಜಲ್ಲಿ ಕಲ್ಲು ಹಾಕಿ ಮುಚ್ಚಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಕಾರ್ಯ ನಿಜಕ್ಕೂ ಪ್ರಶಂಸನಾರ್ಹ ಎಂದು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಗ್ನಿ ಆಕಸ್ಮಿಕ: ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿನ ಜೈನ್ ಲ್ಯಾಬ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಯುಪಿಎಸ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಈ ಘಟನೆ ನಡೆದಿದೆ.
ಲ್ಯಾಬ್ನಲ್ಲಿ ಅಳವಡಿಸಿರುವ ಯುಪಿಎಸ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಇದರಿಂದ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ, ನೋಡನೋಡುತ್ತಿದ್ದಂತೆ ದಟ್ಟ ಹೊಗೆ ಕಟ್ಟಡದ ತುಂಬೆಲ್ಲ ಆವರಿಸಿದ್ದು, ರಸ್ತೆಯಲ್ಲಿ ಹರಡಿಕೊಂಡಿತ್ತು.
ಇದರಿಂದ ಆತಂಕಗೊಂಡಿದ್ದ ಸ್ಥಳೀಯರು ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸುವಷ್ಟರಲ್ಲಿ ಬೆಂಕಿ ನಂದಿ ಹೋಗಿತ್ತು. ಆದರೆ ರಸ್ತೆಯಲ್ಲಿ ದಟ್ಟ ಹೊಗೆ ತುಂಬಿದ್ದರಿಂದ ಜನರಲ್ಲಿ ಆತಂಕಗೊಂಡಿದ್ದರು.













Click it and Unblock the Notifications