PM Modi Security Breach In Davanagere: ಸ್ಪಷ್ಟನೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್
ದಾವಣಗೆರೆ, ಮಾರ್ಚ್ 25: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಾವಣಗೆರೆಯಲ್ಲಿನ ರೋಡ್ ಶೋ ವೇಳೆ ಭದ್ರತಾ ಲೋಪವಾಗಿದೆ ಎನ್ನುವ ಸುದ್ದಿಯ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎರಡನೇ ಬಾರಿ ರಾಜ್ಯದಲ್ಲಿ ಇಂತಹ ಘಟನೆ ವರದಿಯಾಗುತ್ತಿರುವುದು ಎಂದು ಕೆಲವೊಂದು ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿದ್ದವು.
#WATCH | Karnataka: Security breach during PM Modi's roadshow in Davanagere, earlier today, when a man tried to run towards his convoy. He was later detained by police.
— ANI (@ANI) March 25, 2023
(Visuals confirmed by police) pic.twitter.com/nibVxzgekz
ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನಲೆಯಲ್ಲಿ ಸರಕಾರೀ ಕಾರ್ಯಕ್ರಮದ ಜೊತೆಗೆ ಬಿಜೆಪಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಮಹಾಸಂಗಮ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಯುವಕನೊಬ್ಬ ಬ್ಯಾರಿಕೇಡ್ ಬೇಧಿಸಿ ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆಯ ವಿಡಿಯೋವನ್ನು ಉಲ್ಲೇಖಿಸಿ ಕೆಲವೊಂದು ಮಾಧ್ಯಮಗಳು ವರದಿ ಮಾಡಿದ್ದವು.

ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ಅಲೋಕ್ ಕುಮಾರ್, "ದಾವಣಗೆರೆಯ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಯಾವುದೇ ಭದ್ರತಾ ವೈಫಲ್ಯವಾಗಿಲ್ಲ. ಅದೊಂದು ವಿಫಲ ಪ್ರಯತ್ನವಾಗಿತ್ತು, ಆ ವ್ಯಕ್ತಿಯನ್ನು ನಾನು ಮತ್ತು ವಿಶೇಷ ಭದ್ರತಾ ಪಡೆಯ (SPG) ಅಧಿಕಾರಿಗಳು ದೂರದಿಂದಲೇ ಹಿಡಿದು ಸ್ಥಳದಲ್ಲಿದ್ದ ಅಧಿಕಾರಿಗಳ ವಶಕ್ಕೆ ನೀಡಿದ್ದೇವೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆಯನ್ನು ನಡೆಸಲಾಗುತ್ತಿದೆ"ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಈ ವರ್ಷದ ಆದಿಯಲ್ಲಿ (ಜನವರಿ 12) ಹುಬ್ಬಳ್ಳಿಯಲ್ಲಿನ ರೋಡ್‌ಶೋ ವೇಳೆ ವ್ಯಕ್ತಿಯೊಬ್ಬರು ಬ್ಯಾರಿಕೇಡ್ ಅನ್ನು ಮುರಿದು ಪ್ರಧಾನಿ ಮೋದಿಯವರ ಬೆಂಗಾವಲು ಪಡೆಯತ್ತ ಓಡಿಹೋಗಿದ್ದರು. ಆ ವೇಳೆಯೂ ಭದ್ರತಾ ಲೋಪ ಉಂಟಾಗಿಲ್ಲ ಎಂದು ಸ್ಥಳೀಯ ಪೊಲೀಸರು ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ನಗರದ ಜಿಎಂಐಟಿ ಸಮೀಪದ 400 ಎಕರೆ ಜಾಗದಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಮಹಾಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, "ನೀವು, ನಿಮ್ಮ ಪತ್ನಿ ಮತ್ತು ಮಕ್ಕಳು ಎರಡು ತಿಂಗಳ ಕಾಲ ಪ್ರಾಮಾಣಿಕವಾಗಿ ದುಡಿಯಿರಿ. ಕೇಂದ್ರ ಸರ್ಕಾರ ಸವಲತ್ತು ಪ್ರತಿಯೊಂದು ಮನೆಗೆ ಒಂದಲ್ಲಾ ಒಂದು ರೀತಿಯ ಸೌಲಭ್ಯ ಕೊಟ್ಟಿದ್ದೇವೆ. ಯಾವ ಮನೆಗೂ ತಲುಪಿಲ್ಲ ಎಂದು ಯಾರೂ ಹೇಳಲ್ಲ" ಎಂದು ಮನವಿ ಮಾಡಿದರು.
"ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ. ಯಾವುದೇ ಕಾರಣಕ್ಕೂ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗುವುದು ಬೇಡ. ಅಭಿವೃದ್ಧಿ ಪಥದಲ್ಲಿ ಮುಂದೆ ಹೋಗಬೇಕಾದರೆ ಬಿಜೆಪಿ ಸಂಪೂರ್ಣ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಯಾರಿಗೂ ಬಹುಮತ ನೀಡದಿದ್ದರೆ ರಾಜ್ಯದ ಭವಿಷ್ಯ ಉಜ್ವಲವಾಗುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಭದ್ರತೆಯಲ್ಲಿ ಲೋಪ ಉಂಟಾಗಿದೆ ಎನ್ನುವ ಕೆಲವೊಂದು ಮಾಧ್ಯಮಗಳ ವರದಿ ಸುಳ್ಳು. ಬ್ಯಾರಿಕೇಡ್ ಬಳಿ ಬಹಳಷ್ಟು ಜನರು ಜಮಾಯಿಸಿದ್ದರಿಂದ ಆ ವ್ಯಕ್ತಿ ಅಲ್ಲಿಂದ ದಬ್ಬಲ್ಪಟ್ಟಿದ್ದಾನೆ. ಕೂಡಲೇ ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ, ಈ ವಿದ್ಯಮಾನ ಪ್ರಧಾನಿಯವರು ಆ ಹಾದಿಯನ್ನು ಹಾದುಹೋಗುವ ಮೊದಲು ನಡೆದಿರುವುದು ಎಂದು ದಾವಣಗೆರೆ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಮೈಸೂರು ಪೇಟವನ್ನು ಸಂಸದ ಜಿ.ಎಂ.ಸಿದ್ದೇಶ್ವರ್ ಕಾರ್ಯಕ್ರಮದಲ್ಲಿ ತೊಡಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರು, 2023ರ ವಿಧಾನಸಭೆ ಚುನಾವಣೆಯ ವಿಜಯಯಾತ್ರೆಯ ಪ್ರಯುಕ್ತ ಬೆಳ್ಳಿಗದೆಯನ್ನು ಮೋದಿ ಅವರಿಗೆ ಈ ಸಂದರ್ಭದಲ್ಲಿ ನೀಡಿದರು.











Click it and Unblock the Notifications