2024ರ ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮುಖ್ಯ ಪ್ರಾಣ ಪ್ರತಿಷ್ಠಾಪನೆ: ಪೇಜಾವರ ಶ್ರೀ
ದಾವಣಗೆರೆ, ಡಿಸೆಂಬರ್ 12: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, 2024ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮುಖ್ಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಎಂದು ಉಡುಪಿಯ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024ರ ಜನವರಿ ತಿಂಗಳು ಮಕರ ಸಂಕ್ರಾಂತಿಯ ನಂತರ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ. ಕಂಬಗಳು ಹಾಗೂ ಸುತ್ತಲಿನ ಗೋಡೆಯನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಈಗಾಗಲೇ ಐದಾರು ಅಡಿಗಳಷ್ಟು ಎತ್ತರಕ್ಕೆ ಬಂದಿದೆ. 2023ರ ಅಂತ್ಯಕ್ಕೆ ಎಲ್ಲ ಕೆಲಸಗಳು ಮುಕ್ತಾಯವಾಗಲಿವೆ. ಮುಂಬರುವ ಜನವರಿಯಲ್ಲಿ ಸಂಕ್ರಾಂತಿ ಹಬ್ಬದ ನಂತರ ಶುಭ ಮುಹೂರ್ತದಲ್ಲಿ ಮುಖ್ಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ ಎಂದು ತಿಳಿಸಿದರು.
ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಅಗತ್ಯವಾಗಿ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಕೆ ಮಾಡಲೇಬೇಕು. ಇದು ಸಾಮಾಜಿಕ ಮತ್ತು ಕರ್ತವ್ಯ ಪ್ರಜ್ಞೆಯನ್ನ ಜಾಗೃತಿಗೊಳಿಸುವ ಕೆಲಸ. ಕೃಷ್ಣನು ಕೂಡ ಇದನ್ನೇ ಹೇಳಿದ್ದಾನೆ. ಸಮಾಜಕ್ಕೆ ಕೃಷ್ಣನ ಉಪದೇಶದ ಅಗತ್ಯವಿದೆ. ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ ಎಂದು ಪ್ರತಿಪಾದಿಸಿದರು.

ದಲಿತ ಕೇರಿಗಳಿಗೆ ಭೇಟಿ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಿಂದಿನ ಪೇಜಾವರ ಮಠಾಧೀಶರು ದಲಿತ ಕೇರಿಗಳಿಗೆ ಭೇಟಿ ನೀಡಿದ್ದರು. ಈ ಮೂಲಕ ಸಮಾನತೆ ತರಲು ಪ್ರಯತ್ನಿಸಿದ್ದರು. ಶ್ರೀಗಳ ಕಾರ್ಯವನ್ನು ಮುಂದುವರಿಸುವ ಅಭಿಲಾಷೆ ನಮ್ಮದು. ನಾವು ಕೂಡ ದಲಿತ ಕೇರಿಗಳಿಗೆ ಭೇಟಿ ನೀಡುತ್ತಿದ್ದೇವೆ. ಇದು ಮುಂದುವರಿಯಲಿದೆ ಎಂದು ತಿಳಿಸಿದರು.
ಪಾದಪೂಜೆ ಮಾಡುವುದು ಭಕ್ತರಿಗೆ ಬಿಟ್ಟ ವಿಚಾರ. ಪಾದಪೂಜೆ ಮಾಡುವಂತೆ ನಾವೆಲ್ಲಿಯೂ ಹೇಳಿಲ್ಲ. ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಭಕ್ತರ ನಂಬಿಕೆಗೆ ಚ್ಯುತಿ ತರುವ ಕೆಲಸ ಯಾವ ಶ್ರೀಗಳು ಮಾಡುವುದಿಲ್ಲ. ಭಕ್ತರ ನಂಬಿಕೆಯೂ ಉಳಿಯಬೇಕು. ಸಂಪ್ರಾದಾಯವೂ ಹಾಗೆ ಇರಬೇಕು ಎಂಬುದು ಎಲ್ಲರ ಒತ್ತಾಸೆ. ಸಂದರ್ಭ ಬಂದಾಗ ನಾವು ತಪ್ಪದೇ ದಲಿತ ಕೇರಿಗೆ ಭೇಟಿ ನೀಡುತ್ತೇವೆ ಎಂದು ಹೇಳಿದರು.












Click it and Unblock the Notifications