ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ; ಇನ್ನೂ ಜೀವಂತವಾಗಿದೆ ಅನಿಷ್ಟ ಪದ್ಧತಿ
ದಾವಣಗೆರೆ, ಜೂನ್ 12: ಸಾಮಾಜಿಕ ಅನಿಷ್ಟ ಪದ್ಧತಿಗಳು ದೇಶದಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಆಗಾಗ ಹಲವು ನಿದರ್ಶನಗಳು ಬೆಳಕಿಗೆ ಬರುತ್ತವೆ.
ದಲಿತರಿಗೆ ಕುಡಿಯುವ ನೀರು, ಕ್ಷೌರಿಕ ಅಂಗಡಿ, ಹೋಟೆಲ್‌ಗಳಲ್ಲಿ ಹಾಗೂ ದೇವಸ್ಥಾನದಲ್ಲೂ ಕೂಡ ಪ್ರವೇಶ ನಿಷೇಧ ಹೇರುವ ಘಟನೆಗಳು ನಡೆಯುತ್ತವೆ. ಈಗ ಅಂಥದ್ದೇ ಪರಿಸ್ಥಿತಿ ದಾವಣಗೆರೆ ಜಿಲ್ಲೆಯಲ್ಲಿ ವರದಿಯಾಗಿದೆ.
ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದಾರೆ ಎಂಬ ಆರೋಪ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಧೂಳೆಹೊಳೆ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಇನ್ನೂ ಈ ಗ್ರಾಮದಲ್ಲಿ ಅನಿಷ್ಟ ಪದ್ಧತಿ ಜೀವಂತವಾಗಿದೆಯಾ ಎಂಬ ಅನುಮಾನ ಮೂಡಿದೆ.

ದಲಿತರಿಗೆ ಕ್ಷೌರ ಮಾಡಲ್ಲ ಎಂದಿದ್ದಕ್ಕೆ ಗಲಾಟೆ ನಡೆದಿದ್ದು, ಊರಿನ ಗೌಡರನ್ನು ಕೇಳಿ ಕ್ಷೌರ ಮಾಡುತ್ತೇನೆ ಎಂದು ಕ್ಷೌರಿಕ ಅಣ್ಣಪ್ಪ ಹೇಳಿರುವ ವಿಡಿಯೋ ವೈರಲ್ ಆಗಿದೆ. ದಲಿತರಿಗೆ ಏಕೆ ಕ್ಷೌರ ಮಾಡುವುದಿಲ್ಲ ಎಂದು ದಲಿತ ಯುವಕರು ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ.
ಈ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು, ಧೂಳೆಹೊಳೆ ಗ್ರಾಮದಲ್ಲಿ ಕ್ಷೌರ ಮಾಡದೇ ಇರುವುದರಿಂದ ಹರಿಹರ ಪಟ್ಟಣಕ್ಕೆ ಜನರು ಹೋಗುತ್ತಿದ್ದಾರೆ. ಧೂಳೆಹೊಳೆ ಗ್ರಾಮದಲ್ಲಿ ದಲಿತರಿಗೆ ದೇವಸ್ಥಾನದಲ್ಲೂ ಕೂಡ ಪ್ರವೇಶ ನಿಷೇಧ ಮಾಡಲಾಗಿದೆ ಎನ್ನಲಾಗಿದೆ.
ಶುಕ್ರವಾರ ಬೆಳಿಗ್ಗೆ ಗಲಾಟೆ ಆದರೂ ಕೂಡ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿರಲಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.












Click it and Unblock the Notifications