ನನ್ನ ಫೋನ್ ಕೂಡ ಕದ್ದಾಲಿಕೆಯಾಗಿದೆ ಎಂದರಪ್ಪ ಶಾಮನೂರು ಶಿವಶಂಕರಪ್ಪ
Recommended Video

ದಾವಣಗೆರೆ, ಸೆಪ್ಟೆಂಬರ್ 15: "ಕೇವಲ ಜಗದ್ಗುರುಗಳ ಪೋನ್ ಅಷ್ಟೇ ಅಲ್ಲ, ನನ್ನ ಫೋನ್ ಕೂಡ ಕದ್ದಾಲಿಕೆಯಾಗಿದೆ" ಎಂದು ದಾವಣಗೆರೆಯಲ್ಲಿ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸ್ಫೋಟಿಸಿದ್ದಾರೆ.
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ನಡೆದ ಶರನ್ನವರಾತ್ರಿ ಧರ್ಮ ಸಮ್ಮೇಳನದ ಹಂದರಗಂಬ ಪೂಜೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ರಂಭಾಪುರಿ ಜಗದ್ಗುರುಗಳ ಪೋನ್ ಕದ್ದಾಲಿಕೆಯಾಗಿದೆ ಎನ್ನುತ್ತಿದ್ದಾರೆ. ಅವರ ಫೋನ್ ಮಾತ್ರ ಅಲ್ಲ, ನನ್ನ ಪೋನ್ ಕದ್ದಾಲಿಕೆ ಕೂಡ ಆಗಿದೆ. ಅಷ್ಟೇ ಏಕೆ ಐ. ಟಿ. ದಾಳಿ ಕೂಡ ಆಗಿದೆ ಎಂದಿದ್ದಾರೆ.
ಅಲ್ಲದೆ ಒಕ್ಕಲಿಗರ ಸ್ವಾಮೀಜಿ ಫೋನ್ ಕದ್ದಾಲಿಕೆಯಾಗಿದೆ ಎನ್ನುತ್ತಿದ್ದಾರೆ. ಎಲ್ಲರ ಫೋನ್ ಕದ್ದಾಲಿಕೆ ಆಗುತ್ತದೆ. ಅದೆಲ್ಲ ಸಾಮಾನ್ಯ ಎನ್ನುವ ಮೂಲಕ ಹೊಸ ಬಾಂಬ್ ಸ್ಫೋಟಿಸಿದ್ದಾರೆ.

ದಸರಾ ಧರ್ಮ ಸಮ್ಮೇಳನ
ದಾವಣಗೆರೆಯಲ್ಲಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8ರ ವರೆಗೆ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಸ್ವಾಮೀಜಿ ದಸರಾ ಧರ್ಮ ಸಮ್ಮೇಳನ ನಡೆಯಲಿದೆ. ನಗರದ ಹೈಸ್ಕೂಲು ಮೈದಾನದಲ್ಲಿ ನಡೆಯುವ ಧರ್ಮ ಸಮ್ಮೇಳನಕ್ಕೆ ವೇದಿಕೆ ನಿರ್ಮಾಣಕ್ಕಾಗಿ ಭಾನುವಾರ ಹಂದರಗಂಬ ಪೂಜೆ ನೆರವೇರಿಸಲಾಯಿತು.
ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹಂದರಗಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ವೇದಿಕೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಇದೇ ವೇಳೆ ವಿವಿಧ ಮಠಗಳ ಮಠಾಧೀಶರು, ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
1986ರಲ್ಲಿ ದಾವಣಗೆರೆ ನಗರದಲ್ಲಿ ದಸರಾ ಧರ್ಮ ಸಮ್ಮೇಳನ ನಡೆದಿದ್ದು, 32 ವರ್ಷಗಳ ನಂತರ ಮತ್ತೊಮ್ಮೆ ರಂಭಾಪುರಿ ಶ್ರೀಗಳ ದಸರಾ ಧಾರ್ಮಿಕ ಸಮ್ಮೇಳನ ದಾವಣಗೆರೆಯಲ್ಲಿ ನಡೆಯಲಿದ್ದು, ಸರ್ವಧರ್ಮೀಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದ್ದಾರೆ.
ರಂಭಾಪುರಿ ಶ್ರೀಗಳ ಪೀಠಾರೋಹಣದ ನಂತರ 28ನೇ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಕಾರ್ಯಕ್ರಮ ಇದಾಗಿದ್ದು, ರಂಭಾಪುರಿ ಶ್ರೀಗಳು ದಸರಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ನಿತ್ಯ ಬೆಳಗ್ಗೆ ಇಷ್ಟಲಿಂಗ ಪೂಜೆ ಹಾಗೂ ಸಂಜೆ ಧರ್ಮ ಜಾಗೃತಿ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮದ ಸ್ವರೂಪದ ಬಗ್ಗೆ ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದರು.












Click it and Unblock the Notifications