ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೈಂಗಿಕ ದೌರ್ಜನ್ಯ ಆರೋಪ: ಮುರುಘಾ ಶರಣರ ವಿರುದ್ದ ದಾವಣಗೆರೆಯಲ್ಲಿ ಪ್ರತಿಭಟನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್ 30: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯರ ಸ್ವಾಮೀಜಿ ವಿರುದ್ಧ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಪ್ರತಿಭಟನೆ ನಡೆಸಿತು. ಆದರೆ, ದಿಶಾ ಸಮಿತಿ ಸದಸ್ಯರು ಶ್ರೀಗಳು ಯಾವುದೇ ತಪ್ಪು ಮಾಡಿಲ್ಲ. ಇದೊಂದು ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು ಶ್ರೀಗಳ ವಿರುದ್ಧ ಘೋಷಣೆ ಹಾಕಿದರು. ಪ್ರತಿಭಟನೆ ವೇಳೆ ಮುರುಘಾ ಶರಣರ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಪ್ರತಿಭಟನಾಕಾರರನ್ನು ಸ್ಥಳದಲ್ಲಿದ್ದ ಪೊಲೀಸರು ತಡೆದರು. ಈ ವೇಳೆ ಪೊಲೀಸರ ಜೊತೆ ಮಾತಿನ ಚಕಮಕಿಯೂ ನಡೆಯಿತು. ಕೊನೆಗೂ ಸ್ವಾಮೀಜಿಗಳ ಭಾವಚಿತ್ರ ಸುಟ್ಟುಹಾಕಲು ಬಿಡಲಿಲ್ಲ.

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಾಮಾನ್ಯವಾದದ್ದಲ್ಲ. ಹಾಸ್ಟೆಲ್ ನಲ್ಲಿ ಮಕ್ಕಳನ್ನು ಪೋಷಕರು ಓದಲು ಬಿಡುತ್ತಾರೆ. ಸಮಾಜಕ್ಕೆ ಮಾದರಿಯಾಗಬೇಕಿದ್ದ ಸ್ವಾಮೀಜಿಗಳ ಮೇಲೆ ಇಂಥ ಗಂಭೀರ ಆರೋಪ ಕೇಳಿ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲೇಬೇಕು. ಸಾಮಾನ್ಯರಿಗೊಂದು ನ್ಯಾಯ, ಬಲಿಷ್ಠರಿಗೊಂದು ನ್ಯಾಯ ಎಂಬಂತಾಗಬಾರದು. ಶ್ರೀಗಳು ತಪ್ಪೆಸಗಿದ್ದೇ ಆದರೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು‌.

ಚಿತ್ರದುರ್ಗ ಮುರುಘಾ ಮಠದ ಶಿವಾಚಾರ್ಯ ಸ್ವಾಮೀಜಿ ಬಲಾಢ್ಯರು. ರಾಜಕೀಯವಾಗಿ ಬೆಂಬಲ ಇದೆ. ಶ್ರೀಗಳ ಪರ ಹಲವರು ನಿಂತಿದ್ದಾರೆ. ಪೊಲೀಸರಿಗೆ ತನಿಖೆ ನಡೆಸಲು ಯಾರೂ ಒತ್ತಡ ಹೇರಬಾರದು. ಬಾಲಕಿಯರನ್ನು ಸರಿಯಾಗಿ ವಿಚಾರಣೆ ನಡೆಸಬೇಕು. ಹೇಳಿಕೆ ನೀಡಿದ ಬಳಿಕ ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

 ದೌರ್ಜನ್ಯ ಎಸಗಲು ಸಹಾಯ ಮಾಡಿದವರನ್ನು ಬಿಡಬಾರದು

ದೌರ್ಜನ್ಯ ಎಸಗಲು ಸಹಾಯ ಮಾಡಿದವರನ್ನು ಬಿಡಬಾರದು

ಬಾಲಕಿಯರು ಸುಮಾರು ಮೂರು ವರ್ಷಗಳ ಕಾಲ ಅನುಭವಿಸಿರುವ ಯಾತನೆ ಹೇಳತೀರದ್ದು. ಲೈಂಗಿಕ ದೌರ್ಜನ್ಯ ಎಸಗಲು ಸಹಾಯ ಮಾಡಿದವರನ್ನು ಬಿಡಬಾರದು. ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹದಿನೈದು ವರ್ಷಗಳಿಂದ ಮಠದೊಳಗೆ ನಡೆಯುತ್ತಿದ್ದ ಷಡ್ಯಂತ್ರ ಈಗ ಹೊರಗಡೆ ನಡೆಯುತ್ತಿದೆ ಎಂದು ಶ್ರೀಗಳೇ ಹೇಳಿದ್ದಾರೆ. ಹಾಗಾಗಿ ಇಷ್ಟು ವರ್ಷ ಯಾಕೆ ಸುಮ್ಮನಿದ್ದರು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ಬಲ್ಲೂರು ರವಿಕುಮಾರ್, ವಕೀಲ ಗುಮ್ಮನೂರು ಮಲ್ಲಿಕಾರ್ಜುನ್, ಡಿಎಸ್ ಎಸ್ ಮುಖಂಡರು ಪಾಲ್ಗೊಂಡಿದ್ದರು.

 ಶಿವಾಚಾರ್ಯ ಸ್ವಾಮೀಜಿ ತಪ್ಪು ಮಾಡಿಲ್ಲ

ಶಿವಾಚಾರ್ಯ ಸ್ವಾಮೀಜಿ ತಪ್ಪು ಮಾಡಿಲ್ಲ

ಚಿತ್ರದುರ್ಗದ‌ ಮುರುಘಾಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಯಾವುದೇ ತಪ್ಪು ಮಾಡಿಲ್ಲ. ಮಠದ ಆಡಳಿತಾಧಿಕಾರಿ ಎಸ್. ಕೆ.ಬಸವರಾಜನ್ ಈ ಷಡ್ಯಂತ್ರ ರೂಪಿಸಿದ್ದಾರೆ ಎಂದು ದಿಶಾ ಸಮಿತಿ ಸದಸ್ಯ, ವಕೀಲ ಕೆ. ಹೆಚ್. ವೆಂಕಟೇಶ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್. ಕೆ. ಬಸವರಾಜನ್ ದಂಪತಿ ಮಕ್ಕಳನ್ನು ತಮ್ಮ ವಶದಲ್ಲಿಟ್ಟುಕೊಂಡು ಶ್ರೀಗಳ ವಿರುದ್ಧ ಹೇಳಿಕೆ ನೀಡುವಂತೆ ಪ್ರಚೋದನೆ ನೀಡಿದ್ದಾರೆ. ಈ ಬಗ್ಗೆ ತಯಾರಿಯನ್ನು ಮಾಡಿದ್ದಾರೆ. ಕಳೆದ ಜುಲೈ 25ಕ್ಕೆ ವಿದ್ಯಾರ್ಥಿನಿಯರು ಮೆಜೆಸ್ಟಿಕ್‌ನ ಆಟೋ ಚಾಲಕರಿಗೆ ಸಿಕ್ಕಿದ್ದಾರೆಂದು ಹೇಳಲಾಗುತ್ತಿದೆ. ಇದು ನಿಜವೋ, ಬಸವರಾಜನ್ ಪಾತ್ರ ಇದೆಯೋ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

 ಪರಶುರಾಮ್ ರನ್ನು ಬಂಧಿಸಬೇಕು

ಪರಶುರಾಮ್ ರನ್ನು ಬಂಧಿಸಬೇಕು

ಮಕ್ಕಳು ಸಿಕ್ಕ ಕೂಡಲೇ ಬೆಂಗಳೂರಿನ ಕಾಟನ್ ಪೇಟೆ ಪೊಲೀಸರು ದೂರು ಏಕೆ ಪಡೆದಿಲ್ಲ ಎಂಬ ಅನುಮಾನ ಕಾಡುತ್ತಿದೆ‌. ಬೆಂಗಳೂರಿನಲ್ಲಿ ಒಡನಾಡಿ ಸಂಸ್ಥೆ ಕಚೇರಿ ಇದ್ದರೂ ಮೈಸೂರಿಗೆ ಯಾಕೆ ಮಕ್ಕಳನ್ನು ಕರೆದೊಯ್ಯಲಾಯಿತು ಎಂಬ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಚಿತ್ರದುರ್ಗದಲ್ಲಿ ಒಡನಾಡಿ ಸಂಸ್ಥೆಯ ನಿರ್ದೇಶಕ ಪರಶುರಾಮ್ ಅವರು ಮಕ್ಕಳ ಬಳಿ ಸಾಕ್ಷಿಗಳಿವೆ. ಅವುಗಳನ್ನು ನ್ಯಾಯಾಧೀಶರಿಗೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ಪರಶುರಾಮ್ ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಸ್ವಾಮೀಜಿ ವಿರುದ್ಧ ನಿರಂತರವಾಗಿ ಷಡ್ಯಂತ್ರ ನಡೆಯುತ್ತಿದೆ. ಪರಶುರಾಮ್ ಹಾಗೂ ಬಸವರಾಜನ್ ನಡುವೆ ಮಾತುಕತೆ ನಡೆದಿದೆಯಾ? ಹಣ ಸಂದಾಯವಾಗಿದೆಯಾ ಎಂಬ ಆಯಾಮದಲ್ಲಿಯೂ ತನಿಖೆ ನಡೆಸಬೇಕು ಎಂದರು.

 ಎಲ್ಲಾ ಆರೋಪಿಗಳನ್ನು ಬಂಧಿಸಬೇಕು

ಎಲ್ಲಾ ಆರೋಪಿಗಳನ್ನು ಬಂಧಿಸಬೇಕು

ವಾರ್ಡನ್ ರಶ್ಮಿ ಮಕ್ಕಳು ಹಾಸ್ಟೆಲ್‌ ಬಿಟ್ಟು ಒಂದು ತಿಂಗಳಾಗಿದ್ದರೂ ಮುರುಘಾ ಶರಣರ ಗಮನಕ್ಕೆ ಯಾಕೆ ತಂದಿಲ್ಲ. ಮಕ್ಕಳು ಕಾಣೆಯಾದ ಬಗ್ಗೆ ಪೊಲೀಸರಿಗೆ ಯಾಕೆ ದೂರು ಕೊಟ್ಟಿಲ್ಲ. ಚಿತ್ರದುರ್ಗ ಎಸ್ಪಿ ನಿಷ್ಪಕ್ಷವಾಗಿ ತನಿಖೆ ನಡೆಸುತ್ತಿದ್ದು, ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಸ್ವಾಮೀಜಿಯವರ ವಿರುದ್ಧ ಒಳಸಂಚಿನಿಂದ ಪ್ರಕರಣ ದಾಖಲಾಗಿದೆ. ಸ್ವಾಮೀಜಿ ನಿರ್ದೋಷಿಯಾಗಿ ಹೊರಬರುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಹನುಮಂತಪ್ಪ ಹಾಜರಿದ್ದರು.

English summary
Murugha mutt sexual assault case; group of people Protested against police failure to arrest and question the chief seer of Murugha mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X