ಹರಿಹರದಲ್ಲಿ ಎಥೆನಾಲ್ ಘಟಕ ಆರಂಭಿಸಲಿದೆ ಎಂಆರ್‌ಪಿಎಲ್
ದಾವಣಗೆರೆ, ನವೆಂಬರ್ 09 : ಮಂಗಳೂರು ರಿಫೈನರಿ ಆಂಡ್ ಕೆಮಿಕಲ್ಸ್ ಲಿಮಿಟೆಡ್ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ 2ಜಿ ಎಥೆನಾಲ್ ಉತ್ಪಾದನಾ ಘಟಕ ಆರಂಭಿಸಲಿದೆ. 2021ರಲ್ಲಿ ಘಟಕ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರ ತೈಲ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಪರ್ಯಾಯ ಇಂಧನಗಳತ್ತ ಗಮನಹರಿಸಿದ್ದು, ತೈಲೋತ್ಪಪನ್ನ ಕಂಪನಿಗಳು ಎಥೆನಾಲ್ ಉತ್ಪಾದನೆಗೆ ಮುಂದಾಗಿವೆ. ಇದರ ಭಾಗವಾಗಿ ಘಟಕ ಆರಂಭವಾಗುತ್ತಿದೆ.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಎಂಆರ್‌ಪಿಎಲ್ 2ಜಿ ಎಥೆನಾಲ್ ಉತ್ಪಾದನಾ ಘಟಕ ಆರಂಭಿಸಲಿದೆ. ಇದಕ್ಕಾಗಿ ಅಗತ್ಯವಿರುವ ಭೂಮಿಯನ್ನು ಹಸ್ತಾಂತರ ಮಾಡಲಾಗಿದೆ. ಘಟಕ ನಿರ್ಮಾಣದ ತಂತ್ರಜ್ಞಾನದ ಕುರಿತು ಚರ್ಚೆ ನಡೆಯುತ್ತಿದೆ.
ಕಬ್ಬು, ಕಬ್ಬಿನ ತಾಜ್ಯವಾದ ಕಾಕಂಬಿ, ಗೋಧಿ, ಜೋಳ ಮುಂತಾದ ಬೆಳೆಗಳಿಂದ ಎಥೆನಾಲ್ ಉತ್ಪಾದನೆ ಮಾಡಬಹುದು. ಇಂತಹ ಕಚ್ಚಾವಸ್ತುಗಳು ಹರಿಹರ ಮತ್ತು ಸುತ್ತ-ಮುತ್ತಲು ದೊರೆಯುತ್ತದೆ. ಆದ್ದರಿಂದ, ಘಟಕ ಸ್ಥಾಪನೆಗೆ ಹರಿಹರವನ್ನು ಆಯ್ಕೆ ಮಾಡಲಾಗಿದೆ.

ಪೆಟ್ರೋಲಿಯಂ ಬೇಡಿಕೆ
ಮಂಗಳೂರು ರಿಫೈನರಿ ಆಂಡ್ ಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ರಾಜ್ಯದ ಶೇ 95ರಷ್ಟು ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಪೂರೈಸುತ್ತಿದೆ. ಈಗ ಪೆಟ್ರೋಲಿಂ ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮತ್ತೊಂದು ಕಡೆ ಕಚ್ಚಾತೈಲ ಪೂರೈಕೆಗೆ ಬೇರೆ ರಾಷ್ಟ್ರಗಳನ್ನು ಪೂರೈಕೆ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ, ಪರ್ಯಾಯ ಇಂಧನ ಮೂಲಗಳ ಹುಡುಕಾಟ ನಡೆದಿದೆ.

ಶೇ 5ರಷ್ಟು ಮಿಶ್ರಣ
ಪೆಟ್ರೋಲ್‌ಗೆ ಶೇ 5ರಷ್ಟು ಎಥೆನಾಲ್ ಮಿಶ್ರಣ ಮಾಡಲು ಅವಕಾಶವಿದೆ. ಈ ಮಿತಿಯನ್ನು ಶೇ 10ಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದರ ಭಾಗವಾಗಿಯೇ ಎಥೆನಾಲ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ಎಥೆನಾಲ್ ಬಳಕೆ ಹೆಚ್ಚಾದರೆ ಕಚ್ಚಾತೈಲದ ಆಮದು ಕಡಿಮೆಯಾಗಲಿದೆ. ಇದರಿಂದ ತೈಲ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ.

7 ಲಕ್ಷ ಲೀಟರ್ ಎಥೆನಾಲ್
ಕರ್ನಾಟಕದಲ್ಲಿ 68 ಸಕ್ಕರೆ ಕಾರ್ಖನೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಇವುಗಳಲ್ಲಿ 15ರಲ್ಲಿ ಮಾತ್ರ ಎಥೆನಾಲ್ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 7.50 ಲಕ್ಷ ಲೀಟರ್ ಎಥೆನಾಲ್ ಉತ್ಪಾದನೆಯಾಗುತ್ತಿದೆ. ಎಥೆನಾಲ್ ಉತ್ಪಾನೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆದ್ದರಿಂದ, ಜೋಳ, ಗೋಧಿಯಿಂದ ಉತ್ಪಾದನೆಗೆ ಎಂಆರ್‌ಪಿಎಲ್ ಮುಂದಾಗಿದೆ.

ಎಂಆರ್‌ಪಿಎಲ್‌ಗೆ ಭೂಮಿ
ಮಂಗಳೂರು ರಿಫೈನರಿ ಆಂಡ್ ಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಹರಿಹರದಲ್ಲಿ ಎಥೆನಾಲ್ ಉತ್ಪಾದನಾ ಘಟಕ ಆರಂಭಿಸಲಿದೆ. ಇದಕ್ಕಾಗಿ ಕೆಐಎಡಿಬಿ 40 ಎಕರೆ ಭೂಮಿಯನ್ನು ನೀಡಲಾಗಿದೆ. ರಾಜ್ಯ ಸರ್ಕಾರ ಸಹ ಈ ಯೋಜನೆಗೆ ಒಪ್ಪಿಗೆ ನೀಡಿದೆ.












Click it and Unblock the Notifications