ಬಡವರಿಂದ ಹಣ ವಸೂಲಿ ಮಾಡ್ತೀಯಾ; ರೇಣುಕಾಚಾರ್ಯ ಗರಂ!
ದಾವಣಗೆರೆ, ಏಪ್ರಿಲ್ 28; "ಎಂಆರ್‌ಪಿ ರೇಟ್‌ಗೆ ಕೊಡಬೇಕು. ಜಾಸ್ತಿ ಹಣಕ್ಕೆ ಮಾರಾಟ ಮಾಡುತ್ತೀಯಾ. ಆಸ್ಪತ್ರೆಯಲ್ಲಿ ಸುಲಿಗೆ ಮಾಡಲು ಬಂದಿದ್ದೀಯಾ. ತೆಗೆದು ಹಾಕಿಬಿಡ್ತೀನಿ, ಹೊರಗೆ ಹಾಕಿಸಿಬಿಡ್ತೀನಿ ಹುಷಾರ್. ಇದು ಮತ್ತೆ ಮರುಕಳಿಸಿದರೆ ಹೊರಗೆ ಹಾಕಿಬಿಡಿ'' ಎಂದು ಶಾಸಕ ಎಂ. ಪಿ. ರೇಣುಕಾಚಾರ್ಯ ವೈದ್ಯಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಶಾಸಕರು ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು. ರೇಣುಕಾಚಾರ್ಯ ಅವರಿಗೆ ರೋಗಿಗಳು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ದೂರುಗಳನ್ನು ನೀಡಿದರು. ಔಷಧ ಸೇರಿದಂತೆ ಇತರೆ ವಸ್ತುಗಳನ್ನು ಪಡೆಯಲು ಇಲ್ಲಿನ ಕೆಲ ಸಿಬ್ಬಂದಿ ಹಣ ಇಲ್ಲದೆ ಕೊಡುವುದಿಲ್ಲ ಎಂದು ಆರೋಪಿಸಿದರು.
ಆಗ ಕೋಪಗೊಂಡ ಎಂ. ಪಿ. ರೇಣುಕಾಚಾರ್ಯ ಅವರು, "ಇಲ್ಲಿ ಯಾಕೆ ಇನ್ನು ಇಟ್ಟುಕೊಂಡಿದ್ದೀರಾ?" ಎಂದು ವೈದ್ಯಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾದ ಬಳಿಕ ಹೊನ್ನಾಳಿಗೆ ಎಂ. ಪಿ. ರೇಣುಕಾಚಾರ್ಯ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡುತ್ತಿರುವ ಬಗ್ಗೆ ಮಾಹಿತಿಯನ್ನು ಅವರು ಪಡೆದರು.

ಆಗ ಕೋವ್ಯಾಕ್ಸಿನ್ ಖಾಲಿಯಾಗಿದೆ ಎಂದು ಹೇಳಿದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದ ಅವರು, "ಈಗಾಗಲೇ ನಾನು ಮಾತನಾಡಿದ್ದೇನೆ, ಲಸಿಕೆ ಬರುತ್ತವೆ. ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ" ಎಂದು ಸೂಚನೆ ನೀಡಿದರು.
"ಮಾಸ್ಕ್ ಧರಿಸದೇ ಬರುವವರನ್ನು ಯಾವುದೇ ಕಾರಣಕ್ಕೂ ಆಸ್ಪತ್ರೆ ಒಳಬಿಡಬೇಡಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ತುರ್ತು ಚಿಕಿತ್ಸೆಗೆ ಬರುವ ರೋಗಿಗಳನ್ನು ನಿರ್ಲಕ್ಷಿಸದೇ ಚಿಕಿತ್ಸೆ ನೀಡಿ. ಬೆಡ್ ಖಾಲಿಯಿದ್ದರೆ ಸುಮ್ಮನಿರದೇ ಕೊರೊನಾ ಸೋಂಕಿತರಿಗೆ ವ್ಯವಸ್ಥೆ ಮಾಡಿಕೊಡಿ" ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.












Click it and Unblock the Notifications