ಯದ್ವಾ ತದ್ವಾ ವಿದ್ಯುತ್ ಬಿಲ್ ಏರಿಕೆ, ಯಾರೂ ಬಿಲ್ ಕಟ್ಟಬೇಡಿ ಎಂದ ರೇಣುಕಾಚಾರ್ಯ
ದಾವಣಗೆರೆ, ಜೂನ್ 13: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿಜೆಪಿ ಸರ್ಕಾರ ಮಾಡಿದ್ದ ಯೋಜನೆಗಳ 20 ಸಾವಿರ ಕೋಟಿ ರೂಪಾಯಿ ವಾಪಸ್ ಪಡೆಯಲು ಆಗುತ್ತದೆ. ಆದರೆ ವಿದ್ಯುತ್ ದರ ಏರಿಕೆ ವಾಪಸ್ ಪಡೆದಿಲ್ಲ. ಯಾರೂ ಸಹ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿದ್ಯುತ್ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಯದ್ವಾ ತದ್ವಾ ಬಿಲ್ ಬಿಲ್ ಬಂದಿದೆ. ಯಾರು ಕರೆಂಟ್ ಬಿಲ್ ಕಟ್ಟ ಬೇಡಿ. ನಾನೇ ಜನರಿಗೆ ಹೇಳುತ್ತಾ ಇದ್ದೀನಿ, ಯಾರು ಬಿಲ್ ಕಟ್ಟಬೇಡಿ. ಬಿಲ್ ಪಡೆಯಲು ಪೊಲೀಸರನ್ನು ಕರೆ ತಂದರೆ ನನಗೆ ಫೋನ್ ಮಾಡಿ ಎಂದು ಜನರಿಗೆ ಕರೆ ನೀಡಿದರು.

ಕಾಂಗ್ರೆಸ್ ಸರ್ಕಾರದವರು ಗ್ಯಾರಂಟಿ ಯೋಜನೆಗಳಿಗೆ ದಿನಕ್ಕೊಂದು ಷರತ್ತು ಹಾಕುತ್ತಿದ್ದಾರೆ. ಸರಾಸರಿ ಪ್ರಮಾಣದಲ್ಲಿ ಬಿಲ್ ಕೊಡುತ್ತಾರಂತೆ. ಸರ್ಕಾರ ಬಂದು ತಕ್ಷಣ ವಿದ್ಯುತ್ ಫ್ರೀ ಎಂದು ಹೇಳಿ ಈಗ ಹಳೆ ಬಿಲ್ ಕಟ್ಟಿ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರು ಕರೆಂಟ್ ಬಿಲ್ ಕಟ್ಟಬೇಡಿ ಎಂದು ಹೇಳಿದರು.
ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೀರಿ, ಆದರೆ ಹಳ್ಳಿಗಾಡುಗಳಲ್ಲಿ ಇದುವರೆಗೆ ಬಸ್ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳನ್ನು ಬಿಟ್ಟಾಗ ಮಾತ್ರ ಮಹಿಳಾ ಸಬಲೀಕರಣ ಆಗಲಿದೆ. ಎಲ್ಲಾ ಗ್ಯಾರಂಟಿಗಳಿಗೆ ಒಳ್ಳೆಯ ಹೆಸರು ಇಟ್ಟಿದ್ದೀರಿ. ನಮ್ಮ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಣ್ಣಂದಿರಾ ಸಮಾಧಾನ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ, ಅತ್ತೆ ಸೊಸೆ ನಡುವೆ ಜಗಳ ತಂದಿಟ್ಟಿದ್ದು ಯಾರಮ್ಮ ಸಹೋದರಿ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಮಾತು ಮುಂದುವರಿಸಿದ ಅವರು,ದಾವಣಗೆರೆ ಲೋಕಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾನಲ್ಲ. ನಮ್ಮ ಹಿರಿಯ ನಾಯಕರಾದ ಜಿಎಂ ಸಿದ್ದೇಶ್ವರ್ ಅವರು ಇದ್ದಾರೆ. ಅವರು ಸ್ಪರ್ಧೆ ಮಾಡುವುದಿಲ್ಲ ಎಂದರೆ ಮುಂದೆ ನೋಡೋಣ. ಸದ್ಯಕ್ಕೆ ನಾನು ಎಂಪಿ ಟಿಕೆಟ್ ಆಕಾಂಕ್ಷಿ ಅಲ್ಲ ಎಂದರು.

ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಆಯ್ಕೆ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ನಾನು ಶಾಸಕನಲ್ಲ. ಪಕ್ಷದ ಶಾಸಕರು, ಹಿರಿಯರು ಮುಂದಿನ ಅಧಿವೇಶನ ಸಂದರ್ಭದಲ್ಲಿಆಯ್ಕೆ ಮಾಡುತ್ತಾರೆ. ಜೊತೆಗೆ ರಾಜ್ಯಾಧ್ಯಕ್ಷರು ಯಾರು ಆಗಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾದವ್, ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಪ್ರ.ಕಾರ್ಯದರ್ಶಿ ಬಿಎಸ್ ಜಗದೀಶ್, ಶ್ರೀನಿವಾಸ್, ಶಿವನಗೌಡ ಟಿ. ಪಾಟೀಲ್ ಸೇರಿದಂತೆ ಮತ್ತಿತರು ಹಾಜರಿದ್ದರು.












Click it and Unblock the Notifications