ಬಸ್ ಚಾರ್ಜ್ ಕೊಡ್ಬೇಡಿ, ವಿದ್ಯುತ್ ಬಿಲ್ ಕಟ್ಬೇಡಿ, ನಂಗೇಳಿ ನೋಡ್ಕೋಳ್ತೀನಿ ಎಂದ ಎಂ.ಪಿ.ರೇಣುಕಾಚಾರ್ಯ
ದಾವಣಗೆರೆ, ಮೇ, 29: ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ಕೊಟ್ಟ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿತ್ತು. ಇನ್ನೂ ಒಂದು ವಾರದೊಳಗೆ ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಹಾಗೆಯೆ ಸರ್ಕಾರ ಮೊಂಡುತನ ಪ್ರದರ್ಶಿಸಿದರೆ ಪೊರಕೆ ಚಳವಳಿ ನಡೆಸಲಾಗುವುದು ಎಂದು ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಹೊನ್ನಾಳಿ ಕ್ಷೇತ್ರದಲ್ಲಿ ಸೋಲನುಭವಿಸಿದ ಕೆಲ ದಿನಗಳ ಕಾಲ ಬೇಸರದಲ್ಲಿದ್ದ ಎಂ.ಪಿ.ರೇಣುಕಾಚಾರ್ಯ ಮತ್ತೆ ರೊಚ್ಚಿಗೆದ್ದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೋದ ಕಡೆಗಳಲ್ಲಿ, ಗ್ರಾಮ, ಗ್ರಾಮಗಳಲ್ಲಿಯೂ ಕಾಂಗ್ರೆಸ್ ಸರ್ಕಾರದ ಭರವಸೆ ಈಡೇರಿಸದಿರುವ ಕುರಿತಂತೆಯೇ ಮಾತನಾಡುತ್ತಿದ್ದಾರೆ. ಜೊತೆಗೆ ಜನರಿಗೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುವ ರೀತಿಯ ವಾತಾವರಣ ನಿರ್ಮಾಣ ಮಾಡಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಸರ್ಕಾರದ ಭರವಸೆಗಳ ವಿರುದ್ದ ಫೀಲ್ಡಿಗಿಳಿದಿರುವ ರೇಣುಕಾಚಾರ್ಯ, ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕುಗಳ ಗ್ರಾಮಗಳಲ್ಲಿ ಭರವಸೆಗಳ ವಿರುದ್ಧ ಜನಾಂದೋಲನ ಮಾಡಲು ಮುಂದಾಗಿದ್ದಾರೆ. ಕೆಲ ದಿನಗಳ ಕಾಲ ಮಾತ್ರ ಗಡುವು ನೀಡುವುದಾಗಿ ಹೇಳಿರುವ ರೇಣುಕಾಚಾರ್ಯ, ಯಾರು ಕೂಡ ವಿದ್ಯುತ್ ಬಿಲ್ ಕಟ್ಟದಂತೆ ಮನವಿ ಮಾಡಿದ್ದಾರೆ.
ಯಾರಾದರೂ ವಿದ್ಯುತ್ ಬಿಲ್ ಕಟ್ಟುವಂತೆ ಒತ್ತಾಯ ಮಾಡಿದರೆ ನಮಗೆ ಕರೆ ಮಾಡಿ ತಿಳಿಸಿ. ಅದೇ ರೀತಿಯಲ್ಲಿ ಬಸ್‌ಗಳಲ್ಲಿ ಉಚಿತವಾಗಿ ಮಹಿಳೆಯರಿಗೆ ಪ್ರಯಾಣ ಮಾಡಲು ಅನುವು ಮಾಡಿಕೊಡುವುದಾಗಿ ಹೇಳಿದ್ದಾರೆ. ಯಾರೂ ಕೂಡ ಹಣ ಕೊಟ್ಟು ಪ್ರಯಾಣಿಸಬೇಡಿ ಎಂದು ಅವಳಿ ತಾಲೂಕಿನ ಜನರಲ್ಲಿ ಮನವಿ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಗುಡುಗಿದರು.
ಹಳ್ಳಿ, ಹಳ್ಳಿಗೂ ತೆರಳಿ ಮಹಿಳೆಯರು, ವೃದ್ಧೆಯರ ಜೊತೆ ಮಾತುಕತೆ ನಡೆಸುವ ರೇಣುಕಾಚಾರ್ಯ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಸಹ ಚುನಾವಣೆಗೆ ಮುನ್ನ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಇಷ್ಟು ದಿನ ಆದರೂ ಯಾಕೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ನನಗೂ ಫ್ರೀ, ನಿಮಗೂ ಫ್ರೀ ಎಂದು ಹೇಳಿದ್ದರು. 200 ಯೂನಿಟ್ ಉಚಿತ ವಿದ್ಯುತ್ ಎಂದಿದ್ದರು. ಈಗ ಯಾಕೆ ನೀವು ಕಟ್ಟಬೇಕು? ಡಿಸಿಎಂ ಡಿ.ಕೆ.ಶಿವಕುಮಾರ್ ಹೆಣ್ಣು ಮಕ್ಕಳು ಅತ್ತೆ ಮನೆಗೂ ಹೋಗಬಹುದು, ಗಂಡನ ಮನೆಗೂ ಹೋಗಬಹುದು. ರಾಜ್ಯದಲ್ಲಿ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು ಎಂದಿದ್ದರು. ಹಾಗೆಯೆ ಬೆಂಗಳೂರು, ಮೈಸೂರು ಎಲ್ಲಾ ಕಡೆ ಓಡಾಡಬಹುದು. ಯಾರಾದರೂ ಸರ್ಕಾರಿ ಬಸ್ಗಳಿಗೆ ಹೋದರೆ ನಾವು ಹಣ ಕೊಡುತ್ತೇವೆ ಎಂದಿದ್ದರು ಅಂತಾ ವ್ಯಂಗ್ಯವಾಡಿದರು.
ಅಲ್ಲದೆ ಮನೆಯೊಡತಿಗೆ 2000 ರೂ. ನೀಡುತ್ತೇವೆ ಎಂದಿದ್ದಾರೆ. ಸಿಲಿಂಡರ್‌ಗೆ 500 ರೂ. ಕಡಿಮೆ ಮಾಡುವುದಾಗಿ ಹೇಳಿದ್ದಾರೆ. ಉಚಿತ ಕೊಡುತ್ತೇವೆ ಎಂದು ಹೇಳಿಕೊಂಡು ಬಂದಿದ್ದಾರೆ. ಸಾಲ ಮಾಡಿ ನಿಮಗೆ ಕೊಡಬೇಕು. ಈಗಲೇ 2 ಲಕ್ಷ ಕೋಟಿ ರೂಪಾಯಿ ಸಾಲ ಇದೆ. ಮತ್ತೆ ಸಾಲ ಮಾಡಲು ಹೊರಟಿದ್ದಾರೆ. ಇದಕ್ಕೆಲ್ಲ ವರ್ಷಕ್ಕೆ ಲಕ್ಷ ಕೋಟಿ ರೂಪಾಯಿ ಬೇಕು. ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅನ್ನು ಪ್ರಶ್ನಿಸಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು.
ಆಮಿಷವೊಡ್ಡಿ, ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಇದು ನನ್ನ ತಾಲೂಕು. ನಾನು ಚುನಾವಣೆಯಲ್ಲಿ ಸೋತಿರಬಹುದು. ಅದಕ್ಕೆ ನಾನು ಹೊಟ್ಟೆ ಉರಿಸಿಕೊಳ್ಳುವುದಿಲ್ಲ. ಆದರೆ ಜನರಿಗೆ ಸುಳ್ಳು ಹೇಳುವವರನ್ನು ಬಿಡಬೇಡಿ. ಭರವಸೆ ಈಡೇರಿಸದಿದ್ದರೆ ಹೋರಾಟ ಮಾಡುತ್ತೇವೆ. ನೀವೆಲ್ಲರೂ ಬನ್ನಿ. ಸರ್ಕಾರಕ್ಕೆ ಪೊರಕೆ ತೆಗೆದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಿಸಿ ಮುಟ್ಟಿಸೋಣ ಎಂದು ಹೇಳಿದರು.
ವಿದ್ಯುತ್ ಬಿಲ್ ಕಟ್ಬೇಡಿ
ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕಿನ ಗ್ರಾಮ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ರೇಣುಕಾಚಾರ್ಯ ಅವರು, ಹೋದ ಕಡೆಗಳಲ್ಲಿ ಬಸ್ ಪ್ರಯಾಣಕ್ಕೆ ಹಣ ಕೊಡಬೇಡಿ. ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಹೇಳುತ್ತಲೇ ಸಾಗುತ್ತಿದ್ದಾರೆ. ಸರ್ಕಾರಿ ಬಸ್‌ನಲ್ಲಿ ಎಲ್ಲಿ ಬೇಕಾದರೂ ಹೋಗಬಹುದು. ಭರವಸೆ ಕೊಟ್ಟಿದ್ದಾರೆ. ಒಂದು ವಾರ ನೋಡಿ, ಪೊರಕೆ ಚಳವಳಿ ನಡೆಸುತ್ತೇವೆ ಎಂದು ರೇಣುಕಾಚಾರ್ಯ ಪುನರುಚ್ಚರಿಸಿದ್ದಾರೆ.
ಯಾವುದೋ ಕಾರಣಕ್ಕೋ ಹಿನ್ನೆಡೆ ಆಗಿರಬಹುದು. ಸಿದ್ದರಾಮಯ್ಯ ಅವರು ಪ್ರಚಾರ ಸಭೆಗಳಲ್ಲಿ ಎಲ್ಲರಿಗೂ ಉಚಿತ ಎಂದಿದ್ದಾರೆ. ಷರತ್ತುಗಳು ತುಂಬಾನೇ ಇವೆ. ಷರತ್ತುಗಳನ್ವಯ ಮಾತ್ರ ನೀಡುತ್ತೇವೆ ಎನ್ನುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ಒಂದು ಮಾತು, ಬಂದ ಮೇಲೆ ಮತ್ತೊಂದು ರೀತಿಯ ಮಾತು. ಇದನ್ನೆಲ್ಲಾ ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.












Click it and Unblock the Notifications