ವಾರದ ಸಂತೆ ನಡೆಸ್ತಿದ್ದಂತೆ ವರುಣ ಪ್ರತ್ಯಕ್ಷ: ಮತ್ತಷ್ಟು ಬಲವಾದ ದೇವಿ ಭಕ್ತರ ನಂಬಿಕೆ
ದಾವಣಗೆರೆ, ಜುಲೈ 03: ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿ ಸುರಿದದ್ದು ಸ್ವಲ್ಪ ಮಳೆಯಷ್ಟೇ. ಬಳಿಕ ಈ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ. ರೈತರ ಬೆಳೆಗಳಿಗೆ ಇದೀಗ ನೀರಿನ ಅವಶ್ಯಕತೆ ಇದ್ದು, ಎಷ್ಟೇ ಬೇಡಿದರೂ ವರುಣ ಮಾತ್ರ ಜಿಲ್ಲೆಯ ಪಾಲಿಗೆ ದಯೆ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರ ದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನ ಸುತ್ತಲೂ ಕುಳಿತು ವ್ಯಾಪಾರಸ್ಥರು ವರುಣನನ್ನು ಒಲಿಸಿಕೊಳ್ಳುವ ಸಲುವಾಗಿ ವಾರದ ಸಂತೆ ನಡೆಸಿದರು. ಇನ್ನು ಸಂತೆ ನಡೆಸಲು ಆರಂಭಿಸುತ್ತಿದ್ದಂತೆ ವರುಣ ದೇವ ಆಗಮಿಸಿದ್ದು ವಿಶೇಷವಾಗಿತ್ತು.
ಜನರು ವರುಣನನ್ನು ಒಲಿಸಿಕೊಳ್ಳಲು ಭಾನುವಾರದ ವಿಶೇಷ ಸಂತೆಯ ಮೊರೆ ಹೋಗಿದ್ದಾರೆ. ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಐದು ಭಾನುವಾರವೂ ನಗರದ ತರಕಾರಿ ವ್ಯಾಪಾರಸ್ಥರು ಇಲ್ಲಿಯೇ ಸಂತೆ ನಡೆಸಬೇಕು ಎಂದು ಸೂಚನೆ ನೀಡಿದೆ. ಕಳೆದ ಭಾನುವಾರದಿಂದಲೇ ಸಂತೆ ಶುರುವಾಗಿದೆ. ನಗರ ದೇವತೆ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಸಂತೆ ನಡೆಸಲಾಗಿದೆ. ನಗರದ ಜನರು ಕೂಡ ಇಲ್ಲಿಗೆ ಬಂದು ತರಕಾರಿಗಳನ್ನು ಖರೀದಿಸಬೇಕು. ಆಗ ಮಳೆ ಸುರಿಯುತ್ತಿದೆ ಎಂಬ ನಂಬಿಕೆ ಕಳೆದೊಂದು ಶತಮಾನದಿಂದಲೂ ಇದೆ. ಅದನ್ನೇ ಮಳೆ ಕೈ ಕೊಟ್ಟಾಗ ನಡೆಸಿಕೊಂಡು ಬರಲಾಗುತ್ತಿದೆ.

ರಾಜ್ಯದ ಕೆಲವೆಡೆ ಮಳೆ ಬಂದಿದೆ. ಆದರೆ ಮಧ್ಯ ಕರ್ನಾಟಕದಲ್ಲಿ ಮಾತ್ರ ವರುಣ ಮುನಿಸಿಕೊಂಡಿದ್ದಾರೆ. ಬೆಳೆಗಳು ಮಳೆಯಿಲ್ಲದೇ ಒಣಗಲಾರಂಭಿಸಿವೆ. ಕೆಲವೆಡೆ ಕುಡಿಯುವ ನೀರಿನ ಹಾಹಾಕಾರ ಮುಂದುವರಿದಿದೆ. ಜನ ಜಾನುವಾರುಗಳ ಪರದಾಟವೂ ನಿಂತಿಲ್ಲ. ಹಾಗಾಗಿ, ದಾವಣಗೆರೆ ಜನರು ಹಿಂದಿನ ಸಂಪ್ರದಾಯ ಮತ್ತು ದೇವರ ಮೊರೆ ಹೋಗುತ್ತಿದ್ದಾರೆ.
ದುರ್ಗಾಂಬಿಕಾ ದೇವಿ ಸನ್ನಿಧಾನದಲ್ಲಿ ಐದು ವಾರಗಳ ಕಾಲ ವಿಶೇಷ ಸಂತೆ ನಡೆಸಿದರೆ ಖಂಡಿತವಾಗಿಯೂ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ, ಹಿಂದೆ ಹಲವು ಬಾರಿ ಹೀಗೆ ಸಂತೆ ನಡೆಸಿದಾಗ ಮಳೆ ಬಂದಿರುವ ನಿದರ್ಶನಗಳು ಸಾಕಷ್ಟಿವೆ. ಕಳೆದ ವರ್ಷವೂ ಮಳೆ ಕೈಕೊಟ್ಟಿತ್ತು. ಬಳಿಕ ಐದು ವಾರ ಸಂತೆ ನಡೆಸಿದಾಗ ಸಾಕಷ್ಟು ಮಳೆ ಬಂದಿತ್ತು ಎನ್ನುತ್ತಾರೆ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರು.

ಇನ್ನು, ದೇವಸ್ಥಾನ ಟ್ರಸ್ಟ್ ಆದೇಶದ ಮೇರೆಗೆ ನಗರ ಬಹುತೇಕ ವ್ಯಾಪಾರಸ್ಥರು ಕೂಡ ತಮ್ಮ ಮೂಲಸ್ಥಾನವನ್ನು ಬಿಟ್ಟು ಇಲ್ಲಿಯೇ ಸಂತೆ ನಡೆಸುತ್ತಾರೆ. ನಗರದ ಜನತೆ ಕೂಡ ಇಲ್ಲಿಯೇ ಬಂದು ತರಕಾರಿಗಳನ್ನು ಖರೀದಿ ಮಾಡುತ್ತಾರೆ. ಆದರೆ, ವ್ಯಾಪಾರಸ್ಥರಿಗೆ ಅಲ್ಲಿಗಿಂತ ವ್ಯಾಪಾರ ಕಡಿಮೆಯಾದರೂ ಮೊದಲು ಮಳೆಯಾಗಲಿ ಎಂಬ ಆಶಯವಿದೆ. ಹೀಗಾಗಿ, ಆದಷ್ಟು ವ್ಯಾಪಾರವಾಗಲಿ ಯಾವುದೇ ನಷ್ಟವಿಲ್ಲ. ಮಳೆ ಬಂದರೆ ಸಾಕು ಎನ್ನುತ್ತಾರೆ.
ಸಂತೆಯಿಂದ ಮಳೆಯಾಗುತ್ತದೆ ಎಂಬ ಬಗ್ಗೆ ಜನರು ಕೂಡ ವಿಶ್ವಾಸ ವ್ಯಕ್ಯಪಡಿಸಿದ್ದಾರೆ. ಅಲ್ಲದೇ, ಮಳೆ ಬರದಿದ್ದರೆ ಸಂತೆ ನಡೆಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಮೂರು ವಾರದ ಸಂತೆ ಬಳಿಕ ಮಳೆ ಬಂದೆ ಬರುತ್ತದೆ. ಇದರಿಂದ ಸಂತುಷ್ಟಗೊಂಡ ತಾಯಿ ವರುಣನನ್ನು ಧರೆಗಿಳಿಸುತ್ತಾಳೆ ಎನ್ನುತ್ತಾರೆ ಇಲ್ಲಿಯ ಜನರು. ಆದರೆ ಮೊದಲ ಸಂತೆಗೆ ಮಳೆ ಬಂದಿರುವುರಿಂದ ದೇವಿ ಭಕ್ತರ ನಂಬಿಕೆ ಮತ್ತಷ್ಟು ಬಲವಾಗಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications