ಹೆಚ್ಚುವರಿ 200 ಲಸಿಕೆ ನೀಡಿಕೆ: ಸಂಸದ ಸಿದ್ದೇಶ್ವರ್ ವಿರುದ್ಧ ಶಾಮನೂರು ಗರಂ!
ದಾವಣಗೆರೆ, ಜೂನ್ 28: ದಾವಣಗೆರೆ ನಗರದ ಕೆ.ಬಿ. ಬಡಾವಣೆಯಲ್ಲಿ ಆಯೋಜಿಸಿದ್ದ ಉಚಿತ ಕೊರೊನಾ ಲಸಿಕಾ ಶಿಬಿರವು ಯಶಸ್ವಿಯಾಗಿ ನಡೆಯಿತು. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೆಚ್ಚುವರಿಯಾಗಿ 200 ಕೋವಿಶೀಲ್ಡ್ ಲಸಿಕೆ ಪೂರೈಸುವ ಮೂಲಕ ಸಮಸ್ಯೆ ಬಗೆಹರಿಸಿದರು. ಆದರೆ ಸರ್ಕಾರದ ವತಿಯಿಂದ ಲಸಿಕೆ ನೀಡದಿದ್ದಕ್ಕೆ ಶಿವಶಂಕರಪ್ಪ ಅವರು ಸಂಸದ ಜಿ.ಎಂ. ಸಿದ್ದೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೊರೊನಾ ಲಸಿಕೆ ಸಿಗದೇ ಕಂಗಾಲಾಗಿದ್ದ ಹಿನ್ನೆಲೆಯಲ್ಲಿ ನಗರದ ಕೆ.ಬಿ. ಬಡಾವಣೆಯಲ್ಲಿ ಆಯೋಜಿಸಿದ್ದ ಉಚಿತ ಲಸಿಕಾ ಶಿಬಿರಕ್ಕೆ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಭೇಟಿ ನೀಡಿದರು. ಈ ವೇಳೆ ಲಸಿಕೆ ಕೊರತೆ ಆದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಮತ್ತೆ 200 ವ್ಯಾಕ್ಸಿನ್ ನೀಡುವ ಮೂಲಕ ಸಮಸ್ಯೆ ಪರಿಹರಿಸಿದರು.
ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ದಾವಣಗೆರೆಯಾದ್ಯಂತ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ. ಅದರಂತೆಯೇ ಕೆ.ಬಿ. ಬಡಾವಣೆಯಲ್ಲಿಯೂ ಆಯೋಜಿಸಲಾಗಿತ್ತು.
ಮಧ್ಯಾಹ್ನದವರೆಗೆ ಸರ್ಕಾರದ ಕಡೆಯಿಂದ 300 ಲಸಿಕೆ ಬರುತ್ತದೆ ಎಂದು ಹೇಳಲಾಗಿತ್ತಾದರೂ ಬರಲಿಲ್ಲ. ಬೆಳಿಗ್ಗೆಯಿಂದಲೇ ನೂರಾರು ಮಂದಿ ಆಗಮಿಸಿದ್ದು, ಲಸಿಕೆ ಸಿಗದ ಕಾರಣ ಪರದಾಟ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಜನರು ಮಧ್ಯಾಹ್ನ ಊಟ ಇಲ್ಲದೇ ಬಿಸಿಲಿನಲ್ಲಿ ನಿಂತು ಕಾಯುವಂತಾಗಿತ್ತು.

ಹೆಚ್ಚಿನ ಜನರು ಬಂದ ಕಾರಣ ಕಾರ್ಯಕ್ರಮದ ಆಯೋಜನೆ ಹೊಣೆ ಹೊತ್ತಿದ್ದ ಕಾಂಗ್ರೆಸ್ ಮುಖಂಡ ಶಿವಕುಮಾರ್ ಹಾಗೂ ಚಂದ್ರು ಸೇರಿದಂತೆ ಹಲವರು ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡರು. ಆದರೂ ಜನರು ವ್ಯಾಕ್ಸಿನ್ ಸಿಗುತ್ತದೋ, ಇಲ್ಲವೋ ಎಂಬ ಗೊಂದಲಕ್ಕೀಡಾದರು. ಸರ್ಕಾರದಿಂದ ಬರಬೇಕಿದ್ದ 300 ಡೋಸ್ ಬರುವುದಿಲ್ಲ ಎಂಬ ಮಾಹಿತಿ ಸಿಗುತ್ತಿದ್ದಂತೆ ಮುಗಿಬೀಳಲು ಶುರು ಮಾಡಿದರು.
ಇಷ್ಟೆಲ್ಲಾ ಬೆಳವಣಿಗೆ ಆದ ಬಳಿಕ ಶಾಮನೂರು ಶಿವಶಂಕರಪ್ಪ ಆಗಮಿಸಿ ಎಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಹೆಚ್ಚುವರಿಯಾಗಿ ಎಷ್ಟು ತರಿಸಲಾಗಿದೆ ಎಂಬ ಮಾಹಿತಿ ಪಡೆದುಕೊಂಡರು. ಲಸಿಕೆ ಪಡೆಯಲು ಬಂದಿದ್ದವರಿಗೆ ವ್ಯವಸ್ಥೆಯ ಬಗ್ಗೆ ಕೇಳಿದಾಗ ಕೆಲವರು "ಲಸಿಕೆನೇ ಸಿಗುತ್ತಿಲ್ಲ, ಬೆಳಿಗ್ಗೆಯಿಂದ ಕಾದು ಕಾದು ಸುಸ್ತಾಗಿ ಹೋಗಿದ್ದೇವೆ,'' ಎಂದು ಅಳಲು ತೋಡಿಕೊಂಡರು. ಬಳಿಕ ಹೆಚ್ಚುವರಿಯಾಗಿ 200 ವ್ಯಾಕ್ಸಿನ್ ನೀಡಿದ್ದರಿಂದ ಜನರು ನಿಟ್ಟುಸಿರುಬಿಟ್ಟರು.

ಈ ವೇಳೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, "ಜಿ.ಎಂ. ಸಿದ್ದೇಶ್ವರ್ ಕೆಲಸಕ್ಕೆ ಬಾರದ ಎಂಪಿ. ಸರಿಯಾದ ಪಾಠ ಕಲಿಸಬೇಕಿದೆ. ಜನರೇ ಪಾಠ ಕಲಿಸಬೇಕು ಅಷ್ಟೇ,'' ಎಂದು ಹೇಳಿದರು.

"ಈ ವಾರ್ಡ್‌ನ ಕಾರ್ಪೋರೇಟರ್ ಆದ ಮೇಯರ್ ವೀರೇಶ್ ಅವರು ಎಂಪಿ ಬಳಿ ಹೋಗಿ ಹೇಳಿದ್ದರಿಂದ ಅಧಿಕಾರಿಗಳನ್ನು ಹೆದರಿಸಿ ಲಸಿಕೆ ಕೊಡದಂತೆ ಮಾಡಿದ್ದಾರೆ. ಜನರು ಸಾಯುತ್ತಿದ್ದಾರೆ. ಆದರೆ ಇಲ್ಲಿಗೆ ಲಸಿಕೆ ನೀಡಿಲ್ಲ. ಅವರ ಬಳಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರದ ಉಚಿತ ಲಸಿಕೆ ಕೊಡಿಸಿದ್ದಾರೆ. ಬಡವರ ಪರ ಆಲೋಚನೆ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುವುದು ಸರಿಯಲ್ಲ,'' ಎಂದು ಹೇಳಿದರು.












Click it and Unblock the Notifications