ಶಾಮನೂರಿನಲ್ಲಿ ಅಪಘಾತ ಮಾಡಿದ ಶಾಸಕರ ಮೊಮ್ಮಗ
ದಾವಣಗೆರೆ, ಫೆಬ್ರವರಿ 24: ಶಾಸಕರೊಬ್ಬರ ಮೊಮ್ಮಗ ಇನೋವಾ ಕಾರನ್ನು ಅತಿ ವೇಗವಾಗಿ ಓಡಿಸಿ ಅಪಘಾತ ಮಾಡಿರುವ ಘಟನೆ ದಾವಣಗೆರೆಯ ಹೊರ ವಲಯದಲ್ಲಿನ ಶಾಮನೂರಿನಲ್ಲಿ ನಡೆದಿದೆ.
ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಪುತ್ರಿ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಅವರ ಮಗನ ಕಾರು ಅದಾಗಿದ್ದು, ಶಾಸಕರ ಮೊಮ್ಮಗ ಅರುಣ್ ಕುಮಾರ್ ಅಲಿಯಾಸ್ ರೇವಣ ಸಿದ್ದಪ್ಪ ತಡ ರಾತ್ರಿ ಮದ್ಯ ಸೇವನೆ ಹಾಗೂ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮನೆ ಬಳಿ ಕಾರು ನಿಲ್ಲಿಸಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಇದರಿಂದ ಭಯಗೊಂಡ ಮನೆಯವರು ಶಾಸಕರ ಮೊಮ್ಮಗನನ್ನು ಪ್ರಶ್ನೆ ಮಾಡಿದಾಗ, ಸ್ಥಳೀಯರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಸ್ಥಳೀಯರಿಂದ ತೀವ್ರ ವಿರೋಧ ಮಾಡಿದ ಹಿನ್ನೆಲೆ ಸ್ಥಳದಲ್ಲಿಯೇ ಕಾರ್ ಬಿಟ್ಟು ಅರುಣ್ ಕುಮಾರ್ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಕಾರಿನಲ್ಲಿ ಶಾಸಕರ ಪಾಸ್, ಬಿಜೆಪಿ ಬಾವುಟ ಹಾಗೂ ವೀಣಾ ನಂಜಪ್ಪನವರ ಪಾಸ್ ಕೂಡ ಸಿಕ್ಕಿದೆ.

ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಸ್ಥಳಕ್ಕೆ ಅರುಣ ಕುಮಾರ್ ಹಾಗೂ ಶಾಸಕರನ್ನು ಕರೆಸುವಂತೆ ಪಟ್ಟು ಹಿಡಿದಿದ್ದಾರೆ. ಅಪಘಾತಕ್ಕೆ ಒಳಗಾದ ಕಾರನ್ನು ತೆರವುಗೊಳಿಸಲು ವಿದ್ಯಾನಗರ ಠಾಣೆ ಪೊಲೀಸರು ಆಗಮಿಸಿದ್ದು, ಸ್ಥಳೀಯರ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.












Click it and Unblock the Notifications