Channagiri BJP Candidate : ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ; ಚನ್ನಗಿರಿಗೆ ಅಭ್ಯರ್ಥಿ ಪ್ರಕಟ
ಬೆಂಗಳೂರು, ಏಪ್ರಿಲ್ 12; ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಘೋಷಣೆ ಮಾಡಿದೆ. 23 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಲಾಗಿದ್ದು, ಶಿವಮೊಗ್ಗ ನಗರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು 2ನೇ ಪಟ್ಟಿಯಲ್ಲಿಯೂ ಘೋಷಣೆ ಮಾಡಿಲ್ಲ. ಮಂಗಳವಾರ ಪಕ್ಷ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು.
ಬುಧವಾರ ರಾತ್ರಿ ಬಿಜೆಪಿ ಕರ್ನಾಟಕದ ಚುನಾವಣೆಗೆ 23 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿಯೂ ಹಲವು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದೆ. ಈ ಮೂಲಕ ಮತ್ತೊಮ್ಮೆ ಹೈಕಮಾಂಡ್ ತನ್ನ ತೀರ್ಮಾನವೇ ಅಂತಿಮ ಎಂಬ ಸಂದೇಶವನ್ನು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕಕ್ಕೆ ರವಾನೆ ಮಾಡಿದೆ.

2ನೇ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರಕ್ಕೆ ಶಿವಕುಮಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಟೆಂಡರ್‌ನ ಲಂಚ ಪ್ರಕರಣದ ಆರೋಪಿ ಚನ್ನಗಿರಿಯ ಹಾಲಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪಗೆ ಟಿಕೆಟ್ ಕೈ ತಪ್ಪಿದೆ.
ಯಾರು ಬಿಜೆಪಿ ಅಭ್ಯರ್ಥಿ?; ಕೆಎಸ್‌ಡಿಎಲ್ ಲಂಚ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಚನ್ನಗಿರಿಯ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪರನ್ನು ಲೋಕಾಯುಕ್ತ ಪೊಲೀಸರು ಮಾರ್ಚ್ 28ರಂದು ಬಂಧಿಸಿದ್ದರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದು ಜೈಲು ಸೇರಿದ್ದಾರೆ. ಶಾಸಕರ ವಿರುದ್ಧ ಆರೋಪ ಕೇಳಿ ಬಂದಾಗಲೇ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು.

ಆದರೆ ಕೆ. ಮಾಡಾಳು ವಿರೂಪಾಕ್ಷಪ್ಪ ಎರಡನೇ ಪುತ್ರ ಮಲ್ಲಿಕಾರ್ಜುನ ಮಾಡಾಳ್ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರು. ಅಭ್ಯರ್ಥಿ ಘೋಷಣೆಯಾಗದಿದ್ದರೂ ಸಹ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಬಿಜೆಪಿ ಕೆ. ಮಾಡಾಳು ವಿರೂಪಾಕ್ಷಪ್ಪಗೆ ಟಿಕೆಟ್ ನಿರಾಕರಿಸಿದೆ, ಅಲ್ಲದೇ ಅವರ ಕುಟುಂಬದವರಿಗೂ ಟಿಕೆಟ್ ನೀಡಿಲ್ಲ.
ಬಿಜೆಪಿ ಅಭ್ಯರ್ಥಿಯಾಗಿರುವ ಎಚ್. ಎಸ್. ಶಿವಕುಮಾರ್ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ (ತುಮ್ಕೋಸ್) ಮಾಜಿ ಅಧ್ಯಕ್ಷರು. ಈ ಬಾರಿ ಚನ್ನಗಿರಿಯಲ್ಲಿ ಅವರು ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಕೇಳಿ ಬಂದಿತ್ತು. 2013ರಲ್ಲಿ ಕೆ. ಮಾಡಾಳು ವಿರೂಪಾಕ್ಷಪ್ಪ ಕೆಜೆಪಿ ಅಭ್ಯರ್ಥಿಯಾಗಿದ್ದಾಗ ಎಚ್. ಎಸ್. ಶಿವಕುಮಾರ್ ಬಿಜೆಪಿಯ ಅಭ್ಯರ್ಥಿಯಾಗಿದ್ದರು. 40 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿರುವ ಅವರು 10 ವರ್ಷ ತುಮ್ಕೋಸ್ ಅಧ್ಯಕ್ಷರಾಗಿದ್ದರು.
ಟಿಕೆಟ್ ಕೈತಪ್ಪಿದ್ದು ಏಕೆ?; ಚನ್ನಗಿರಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಅಧ್ಯಕ್ಷರಾಗಿದ್ದರು. ಕೆಎಸ್‌ಡಿಎಲ್‌ಗೆ ರಾಸಾಯನಿಕ ಪೂರೈಕೆ ಮಾಡುವ ಟೆಂಡರ್ ನೀಡಲು ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ 80 ಲಕ್ಷ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಮಾರ್ಚ್ 2ರ ಗುರುವಾರ 40 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಪ್ರಶಾಂತ್ ಮಾಡಾಳ್‌ರನ್ನು ಲೋಕಾಯುಕ್ತರು ಬಂಧಿಸಿದ್ದರು. ಬಳಿಕ ಅವರ ಮನೆ ಮೇಲೆ ದಾಳಿ ಮಾಡಿದಾಗ 6 ಕೋಟಿ ರೂ. ದಾಖಲೆ ಇಲ್ಲದ ನಗದು ಪತ್ತೆಯಾಗಿತ್ತು. ಬಳಿಕ ಚನ್ನಗಿರಿಯಲ್ಲಿರುವ ಶಾಸಕರ ನಿವಾಸದ ಮೇಲೆಯೂ ದಾಳಿಯಾಗಿತ್ತು. ಈ ಪ್ರಕರಣದಲ್ಲಿ ಶಾಸಕರು ಮೊದಲ ಆರೋಪಿ ಎಂದು ಲೋಕಾಯುಕ್ತರು ಎಫ್‌ಐಆರ್ ದಾಖಲು ಮಾಡಿದ್ದರು.
ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆ. ಮಾಡಾಳು ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಲ್ಲದೇ ಪ್ರಕರಣದಲ್ಲಿ ತಮ್ಮನ್ನು ಬಂಧಿಸದಂತೆ ಕರ್ನಾಟಕ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಮಾರ್ಚ್ 28ರಂದು ಹೈಕೋರ್ಟ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಬಳಿಕ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.
ಕಾಂಗ್ರೆಸ್ ಚನ್ನಗಿರಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಕ್ಷೇತ್ರದ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಬದಲು ಬಸವರಾಜು ವಿ. ಶಿವಗಂಗಾ ಅಭ್ಯರ್ಥಿ ಎಂದು ಪ್ರಕಟಿಸಿದೆ. ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್ 13ರ ಗುರುವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ.












Click it and Unblock the Notifications