Madal Virupakshappa: ವೈದ್ಯಕೀಯ ವರದಿ ನಾರ್ಮಲ್: ಇಂದು ಕೋರ್ಟ್‌ಗೆ ಹಾಜರುಪಡಿಸಲು ಲೋಕಾಯುಕ್ತ ಸಿದ್ಧತೆ
ದಾವಣಗೆರೆ, ಮಾರ್ಚ್, 28: ಭ್ರಷ್ಟಾಚಾರ ಪ್ರಕಣದಲ್ಲಿ ಬಂಧಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಬೌರಿಂಗ್ ಅಸ್ಪತ್ರೆಯಲ್ಲಿ ಇಸಿಜಿ, ಶುಗರ್ ಹಾಗೂ ಬಿಪಿ ತಪಾಸಣೆ ಮಾಡಿಸಲಾಗಿದೆ. ಈ ವೇಳೆ ಎಲ್ಲಾ ನಾರ್ಮಲ್ ಆಗಿದೆ ಎಂದು ವರದಿ ಬಂದಿದೆ. ಈ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಮಂಗಳವಾರ (ಮಾರ್ಚ್ 28) ಸಂಜೆ 4 ಗಂಟೆಗೆ ಮಾಡಾಳ್ ವಿರೂಪಾಕ್ಷಪ್ಪನನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ಮಾಡಾಳ್ ವಿರೂಪಾಕ್ಷಪ್ಪರನ್ನು ಲೋಕಾಯುಕ್ತ ಅಧಿಕಾರಿಗಳು ಇಂದು ಸಂಜೆ 4ಕ್ಕೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಈ ವೇಳೆ ಕಸ್ಟಡಿಗೆ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ನ್ಯಾಯಲಯಕ್ಕೆ ಮನವಿ ಮಾಡಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ
ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಕರೆತಂದು ವಿಚಾರಣೆ ಚುರುಕುಗೊಳಿಸಲು ನಿರ್ಧಾರ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿ ಮುಂದೆ ಭದ್ರತೆ ಹೆಚ್ಚಿಸಲಾಗಿದೆ. ಈಗಾಗಲೇ ಕಚೇರಿ ಮುಂದೆ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಮತ್ತೆ ವಶಕ್ಕೆ ಪಡೆಯುವ ಪ್ಲಾನ್
ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪರನ್ನು ಮತ್ತೆ ವಶಕ್ಕೆ ನೀಡುವಂತೆ ಲೋಕಾಯುಕ್ತ ಪೊಲೀಸರು ನ್ಯಾಯಲಕ್ಕೆ ಮನವಿ ಮಾಡಲಿದ್ದಾರೆ. ಈ ಹಿಂದೆ ಮೂರು ಬಾರಿ ವಿಚಾರಣೆಗೆ ಹಾಜರಾದಗಲೂ ವಿಚಾರಣೆಗೆ ಸಹಕರಿಸದ ಹಿನ್ನೆಲೆ ಇಂದು ಮತ್ತೆ ವಶಕ್ಕೆ ಪಡೆದುಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ.
ಬೇಡವಾದ ಉತ್ತರಗಳನ್ನು ನೀಡುವ ಮೂಲಕ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸರಿಯಾದ ಸಾಕ್ಷ್ಯಾಧಾರಗಳನ್ನು ಒದಗಿಸುತ್ತಿಲ್ಲ. ಹಣದ ಮೂಲದ ಬಗ್ಗೆ ಮಾಹಿತಿ ನೀಡಲು ಶಾಸಕರು ಹಿಂದೇಟು ಹಾಕುತ್ತಿದ್ದಾರೆ. ಮೂರು ಬಾರಿ ನಡೆಸಿದ ವಿಚಾರಣೆ ವೇಳೆಯೂ ಹಣದ ಮೂಲದ ದಾಖಲೆಯನ್ನು ನೀಡಲು ವಿಫಲರಾಗಿದ್ದಾರೆ.

ಮಾಡಳ್ ವಿರೂಪಾಕ್ಷಪ್ಪ ಮೊದಲಿಗೆ ಕೃಷಿ ಮೂಲದ ಹಣವೆಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ನಂತರ ನಡೆದ ವಿಚಾರಣೆಯಲ್ಲಿ ಸೂಕ್ತ ದಾಖಲೆಗಳನ್ನು ಒದಗಿಸಿ ಸಮರ್ಥಿಸಿಕೊಳ್ಳಲು ಮುಂದಾದಾಗ ತಡವರಿಸಿದ್ದಾರೆ. ಇನ್ನು ತಡರಾತ್ರಿ ಲೋಕಾಯುಕ್ತ ಕಚೇರಿಯಲ್ಲಿಯೇ ಕಾಲ ಕಳೆದಿದ್ದ ಮಾಡಾಳ್ ವಿರೂಪಾಕ್ಷಪ್ಪಗೆ, 12 ಗಂಟೆಯವರೆಗೂ ತನಿಖಾಧಿಕಾರಿಗಳ ತಂಡ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದೆ.
8 ಕೋಟಿ ರೂಪಾಯಿ ಹಣ ಎಲ್ಲಿಂದ ಬಂದಿದೆ? ಆ ಹಣ ಮೂಲವೇನು?, ಎಲ್ಲಿಗೆ ತಲುಪಿಸಲಾಗುತ್ತಿತ್ತು ಎನ್ನುವ ಪ್ರಶ್ನೆಗಳನ್ನು ಶಾಸಕರಿಗೆ ಕೇಳಲಾಗಿದೆ. ಬಳಿಕ ತಮ್ಮ ಆಪ್ತರ ಮೂಲಕ ಲೋಕಾಯುಕ್ತ ಕಚೇರಿಗೆ ಪ್ರತ್ಯೇಕ ಮಂಚ, ಹಾಸಿಗೆ, ದಿಂಬು, ಊಟ, ನೀರು ತರಿಸಿಕೊಂಡ ಮಾಡಾಳ್ ವಿರೂಪಾಕ್ಷಪ್ಪ ನಿದ್ರೆಗೆ ಜಾರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾಡಾಳ್ ವಿರೂಪಾಕ್ಷಪ್ಪನವರು ನಿನ್ನೆ ಚನ್ನಗಿರಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ತುಮಕೂರಿನ ಕ್ಯಾತ್ಸಂದ್ರ ಟೋಲ್ ಬಳಿ ಅವರನ್ನು ಬಂಧಿಸಲಾಗಿತ್ತು. ಮಧ್ಯಂತರ ಜಾಮೀನು ವಜಾ ಆದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ನಂತರ ಮಾಡಾಳ್‌ಗೆ ಬೌರಿಂಗ್ ಅಸ್ಪತ್ರೆಯಲ್ಲಿ ಇಸಿಜಿ, ಶುಗರ್ ಹಾಗೂ ಬಿಪಿ ತಪಾಸಣೆ ನಡೆಸಲಾಗಿದ್ದು, ಇಂದು ವೈದ್ಯಕೀಯ ತಪಾಸಣೆ ವರದಿ ನಾರ್ಮಲ್ ಎಂದು ಬಂದಿದೆ. ಈ ಹಿನ್ನೆಲೆ ಸಂಜೆ 4 ಗಂಟೆಗೆ ನ್ಯಾಯಲಯಕ್ಕೆ ಹಾಜರುಪಡಿಸಲು ಲೋಕಾಯುಕ್ತ ಪೊಲೀಸರು ತಯಾರಿ ನಡೆಸಿದ್ದಾರೆ.
ಇನ್ನು ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಹಾಗೂ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ 40 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಈ ಹಿಂದೆ ಆರೋಪಿ ಪ್ರಶಾಂತ್ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಇದೀಗ ಪ್ರಶಾಂತ್ ಮಾಡಾಳ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.












Click it and Unblock the Notifications