ದಾವಣಗೆರೆ: ಮೋದಿ ಅವರಿಗೆ ಅನ್ಯಾಯ, ಮೋಸ ಮಾಡಿದವರು ಉದ್ಧಾರ ಆಗಲ್ಲ: ಬಿಜೆಪಿಯಲ್ಲಿ ಮತ್ತೆ ಶುರುವಾಯ್ತ ಒಳಜಗಳ?
ದಾವಣಗೆರೆ, ಜೂನ್, 21: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ತಂಡವೇ ಕಾರಣ. ಟಿಕೆಟ್ ಘೋಷಣೆಗೂ ಮುನ್ನ ಶುರು ಮಾಡಿದ್ದ ಗೊಂದಲ ಕೊನೆಯವರೆಗೂ ಮುಂದುವರಿಯಿತು. ಈ ಕಾರಣದಿಂದಲೇ ಬಿಜೆಪಿ ಸೋಲಬೇಕಾಯಿತು ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದರು.
ನಗರದ ಕೆ.ಬಿ.ಬಡಾವಣೆಯ ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಅವರ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ವೀರೇಶ್ ಹನಗವಾಡಿ, ಯಶವಂತರಾವ್ ಜಾಧವ್, ಬಿ.ಎಸ್.ಜಗದೀಶ್, ಎಸ್.ವಿ.ರಾಮಚಂದ್ರಪ್ಪ ಅವರು ರೇಣುಕಾಚಾರ್ಯ ಅಂಡ್ ಟೀಂ ವಿರುದ್ಧ ಆರೋಪಗಳ ಸುರಿಮಳೆಗೈದರು.

ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ. ಕಳೆದ 26 ವರ್ಷಗಳಿಂದಲೂ ಇಲ್ಲಿ ಗೆದ್ದಿರುವುದು ಬಿಜೆಪಿಯೇ. ಆದರೆ, ಬಿಜೆಪಿ ಪಕ್ಷದವರ ಅಸಹಕಾರ, ಭಿನ್ನಮತೀಯ ಚಟುವಟಿಕೆ, ನಡವಳಿಕೆ ಸರಿಯಿಲ್ಲದ ಕಾರಣ ನಾವು ಸೋಲು ಕಾಣಬೇಕಾಯಿತು. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಪರೋಕ್ಷವಾಗಿ ಬೆಂಬಲಿಸಿದ ಕಾರಣ ಸೋಲುಂಟಾಗಿದೆ. ಈಗ ಬಿಜೆಪಿ ಪಕ್ಷದ ತತ್ವ, ಸಿದ್ಧಾಂತದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ನಾನೊಬ್ಬನೇ ಬರ್ತೀನಿ. ನಾನು ಯಾರಿಗೂ ಹೆದರಲ್ಲ. ನಾನು ಹೊನ್ನಾಳಿಗೆ ಬಂದರೆ ಗಲಾಟೆ ಆಗುತ್ತದೆ ಎಂದಿದ್ದರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ನಾನು ಈಗ ಒಬ್ಬನೇ ಬರ್ತಿನಿ. ಎಲ್ಲಿಗೆ
ಕರೆದರು ಬರುವೆ. ಗೂಂಡಾಗಿರಿ, ದಾದಾಗಿರಿಗೆ ಹೆದರುವವನಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಅವರು ಎಂ.ಪಿ.ರೇಣುಕಾಚಾರ್ಯರಿಗೆ ಪಂಥಾಹ್ವಾನ ಕೊಟ್ಟಿದ್ದಾರೆ.
ಹೊನ್ನಾಳಿಗೆ ನಾನು ಬಂದರೆ ಗಲಾಟೆ ಆಗುತ್ತದೆ ಎಂದಿದ್ದರು. ಭಂಡನತ ಪ್ರಶ್ನೆ ಮಾಡಿದ್ದಕ್ಕೆ ಮಾಜಿ ಶಾಸಕರು ಈ ಮಾತು ಆಡಿದ್ದರು. ಎಲ್ಲೇ ಹೇಳಿದರೂ ಒಬ್ಬನೇ ಬರುತ್ತೇನೆ. ಗಲಾಟೆ ಮಾಡಿಸುವುದಾದರೆ ಮಾಡಿಸಿ, ಅದೆಲ್ಲಿ ಆಗುತ್ತದೆ ಅಂತಾ ಹೇಳಲಿ. ಭಂಡನತ, ಬಂಡವಾಳ ಎಲ್ಲವೂ ನಮಗೆ ಗೊತ್ತು ಎಂದು ವಾಗ್ದಾಳಿ ನಡೆಸಿದರು.
ಟಿವಿ ಮುಂದೆ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಾಕ್ಷಣ ದೊಡ್ಡ ಲೀಡರ್ ಆಗುತ್ತೇನೆ ಎಂಬ ಭ್ರಮೆಯಿಂದ ಮೊದಲು ರೇಣುಕಾಚಾರ್ಯ ಹೊರಗಡೆ ಬರಬೇಕು. ಲೋಕಸಭೆ ಚುನಾವಣೆಯಲ್ಲಿ ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿ ಯಾಕೆ ಮುನ್ನಡೆ ಬರಲಿಲ್ಲ ಎಂದು ಪ್ರಶ್ನೆ ಮಾಡಿದರು.
ನಾವು ಬಿ.ಎಲ್.ಸಂತೋಷ್, ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಯವರೇ ಬಿಜೆಪಿಯವರು ಸಹಾಯ ಮಾಡಿದ್ದರಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ರೇಣುಕಾಚಾರ್ಯ ಅಂಡ್ ಟೀಂ ಯಾವ ರೀತಿ ಕೆಲಸ ಮಾಡಿರಬಹುದು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಚುನಾವಣೆ ಅಂದ ಮೇಲೆ ಸೋಲು-ಗೆಲುವು ಸಹಜ. ಈ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಬಿಜೆಪಿ ಭದ್ರಕೋಟೆಯಾಗಿದ್ದ ದಾವಣಗೆರೆಯಲ್ಲಿ ಬಿಜೆಪಿ ಸೋತಿರುವುದು ರಾಜ್ಯ ಮಾತ್ರವಲ್ಲ, ಕೇಂದ್ರದ ವರಿಷ್ಠರಿಗೂ ಆಶ್ಚರ್ಯ ತಂದಿದೆ. 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ಕ್ಷೇತ್ರದಲ್ಲಿ ಯಾಕೆ ಹೀಗೆ ಆಯಿತು ಎಂಬ ಪ್ರಶ್ನೆ ಅವರನ್ನೂ ಕಾಡುತ್ತಿದೆ. ಈ ಬಗ್ಗೆ ವರದಿ ತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ನಮ್ಮ ತಕಾರಾರು ಇರುವುದು ಸೋತಿರುವುದಕ್ಕೆ ಅಲ್ಲ. ಚುನಾವಣೆ ವೇಳೆಯಲ್ಲಿ ರೇಣುಕಾಚಾರ್ಯ ಅಂಡ್ ಟೀಂ ನಡೆದುಕೊಂಡ ರೀತಿ. ಕೆಲವು ಬಿಜೆಪಿಯವರು ಬೆಂಬಲ ನೀಡಿದ್ದಾರೆ ಎಂದು ಕಾಂಗ್ರೆಸ್‌ನಿಂದ ಗೆದ್ದ ಸಂಸದರು ಹೇಳಿರುವುದಕ್ಕಿಂತ ಸಾಕ್ಷಿ ಬೇಕಾ? ನಾವು ನರೇಂದ್ರ ಮೋದಿ ಅವರಿಗೆ ಈ ಬಾರಿ ಗಾಯಿತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂಬ ವಚನ ನೀಡಿದ್ದೇವೆ. ಇಲ್ಲಿ ಸೋತಿರುವುದು ಬಿಜೆಪಿ ಅಲ್ಲ, ನರೇಂದ್ರ ಮೋದಿ ಅವರು. ವಿಶ್ವ ಕಂಡಂತಹ, ದೈವತ್ವ ಹೊಂದಿರುವ ನರೇಂದ್ರ ಮೋದಿ ಅವರಿಗೆ ಅನ್ಯಾಯ, ಮೋಸ ಮಾಡಿದವರು ಉದ್ಧಾರ ಆಗುವುದಿಲ್ಲ ಎಂದು ಸಿಟ್ಟು ಹೊರಹಾಕಿದರು.
ಲಗಾನ್ ಟೀಂ, ನವದೆಹಲಿ ಬಾಯ್ಸ್ ಅಂತಾ ಕರೆಯಿಸಿಕೊಂಡವರೇ ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದರು. ದಾವಣಗೆರೆ, ಬೆಂಗಳೂರು, ನವದೆಹಲಿಗೆ ಎಡತಾಕಿದ್ದು ಎಲ್ಲರಿಗೂ ಗೊತ್ತು. ಯಾರನ್ನೋ ಅಭ್ಯರ್ಥಿ ಮಾಡುತ್ತೇವೆ ಎಂದು ಒಳಗೊಳಗೆ ಅಂದುಕೊಂಡರೂ, ಅಂತಿಮವಾಗಿ ಆತ ಕಾಂಗ್ರೆಸ್‌ಗೆ ಹೋದ ಎಂದು ಆರೈಕೆ ಆಸ್ಪತ್ರೆ ರವಿಕುಮಾರ್ ಹೆಸರು ಪ್ಪಸ್ಪಾಪಿಸದೇ ಚುಚ್ಚಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಿ.ಎಸ್. ಜಗದೀಶ್, ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ, ಅಣಬೇರು ಜೀವನಮೂರ್ತಿ, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಜಿ.ಎಸ್.ಶ್ಯಾಮ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.












Click it and Unblock the Notifications